Advertisement

ರುಚಿಕರವಾದ ಅಡುಗೆ…ಶುಂಠಿ ತಂಬುಳಿ, ಶುಂಠಿ ಬರ್ಫಿ ಮಾಡೋದು ಹೇಗೆ?

08:53 PM May 28, 2020 | Sriram |

ಶುಂಠಿಯ ರುಚಿ ಎಷ್ಟು ತೀಕ್ಷ್ಣವೋ ಪರಿಮಳವೂ ಅಷ್ಟೇ ಆಕರ್ಷಕ. ಆರೋಗ್ಯ ದೃಷ್ಟಿಯಿಂದ ಅಲ್ಲದೆ ಅಡುಗೆಯ ರುಚಿಯಲ್ಲೂ ವಿಶೇಷ ಸ್ಥಾನ ಪಡೆದ ಶುಂಠಿಯು ಬರೀ ಆಯುರ್ವೇದ ವೈದ್ಯರು ಮಾತ್ರವಲ್ಲ ಇಂದು ಅಲೋಪತಿ ವೈದ್ಯ ಪದ್ಧತಿಯಲ್ಲಿ ತನ್ನ ಛಾಪನ್ನು ಮೂಡಿಸಿದೆ. ಕ್ಯಾಲ್ಸಿಯಂ ಅಂಶ ಜಾಸ್ತಿ ಇರುವುದರಿಂದ ಬಾಣಂತಿಯರಿಗೂ ಇದು ತುಂಬಾನೇ ಒಳ್ಳೆಯದು. ಎಲ್ಲೆಂದರಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಶೀತಬಾಧೆ ಸರ್ವೆ ಸಾಮಾನ್ಯ ಇದನ್ನು ತಡೆಗಟ್ಟಲು ಹಾಗೂ ನಿವಾರಣೆಗೆ ದಿನನಿತ್ಯದ ಆಹಾರದಲ್ಲಿ ಅಡುಗೆಯ ಮೂಲಕ ಶುಂಠಿ ಬಳಕೆ ಒಳ್ಳೆಯದು. ಸಿಹಿತಿಂಡಿಯಲ್ಲೂ ಶುಂಠಿಯನ್ನು ಬಳಸುವುದು ನಮ್ಮ ಅಡುಗೆಯ ವಿಶೇಷತೆ. ಆದ್ದರಿಂದ ಶುಂಠಿ ಪ್ರಧಾನವಾಗಿರುವ ಕೆಲವೊಂದು ರುಚಿಕರವಾದ ಅಡುಗೆಯನ್ನು ನೀವೂ ಮನೆಯಲ್ಲೇ ಮಾಡಿ ನೋಡಿ ಸವಿಯಿರಿ.

Advertisement

ಶುಂಠಿ ತಂಬುಳಿ
ತುಂಬುಳಿ ನಮ್ಮ ದಿನನಿತ್ಯದ ಅಡುಗೆಗಳಲ್ಲಿ ಒಂದು. ಊಟದ ಮೊದಲಿಗೆ ಸ್ವಲ್ಪ ಅನ್ನದ ಜೊತೆಯಲ್ಲಿ ಸವಿದರೆ ಆರೋಗ್ಯಕ್ಕೆ ಒಳ್ಳೆಯದು .ಮನೆಯಲ್ಲಿ ಇರುವ ಸಾಮಗ್ರಿಗಳೊಂದಿಗೆ ಈ ತಂಬುಳಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು
ತೆಂಗಿನ ಕಾಯಿ ತುರಿ 1 ಕಪ್‌, ಹಸಿ ಶುಂಠಿ 1 ಸಣ್ಣ ತುಂಡು, ಮೊಸರು 1 ಕಪ್‌,ಜೀರಿಗೆ ಸ್ವಲ್ಪ, ಕರಿಬೇವು ಸೊಪ್ಪು 2ರಿಂದ 4, ಸಾಸಿವೆ ಸ್ವಲ್ಪ, ರುಚಿಗೆ ಉಪ್ಪು.

ತಯಾರಿಸುವ ವಿಧಾನ
ತೆಂಗಿನ ತುರಿ,ಶುಂಠಿಯನ್ನು ಸಣ್ಣಗೆ ರುಬ್ಬಿರಿ. ತದನಂತರ ಮೊಸರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಕರಿಬೇವು, ಜೀರಿಗೆ, ಸಾಸಿವೆ ಒಗ್ಗರಣೆ ಕೊಟ್ಟರೆ ರುಚಿಯಾದ ಆರೋಗ್ಯಕರ ಶುಂಠಿ ತಂಬುಳಿ ಅನ್ನದ ಜೊತೆ ಸವಿಯಲು ಸಿದ್ಧ.

ಶುಂಠಿ ಬರ್ಫಿ
ಬೇಕಾಗುವ ಸಾಮಗ್ರಿಗಳು
ಮೈದಾ ಅಥವಾ ಗೋಧಿ ಹಿಟ್ಟು 1 ಕಪ್‌, ತುಪ್ಪ 1/2 ಕಪ್‌,ಶುಂಠಿ ರಸ ಸ್ವಲ್ಪ, ಹಾಲಿನ ಕೆನೆ 1/4 ಕಪ್‌,ಸಕ್ಕರೆ 2 ಕಪ್‌

Advertisement

ತಯಾರಿಸುವ ವಿಧಾನ
ಮೈದಾ ಅಥವಾ ಗೋಧಿಯನ್ನು ತುಪ್ಪದಲ್ಲಿ ಪರಿಮಳ ಬರುವವರೆಗೆ ಹುರಿಯಿರಿ. ಸಕ್ಕರೆ ನೂಲು ಪಾಕ ಮಾಡಿಟ್ಟು ಕೊಳ್ಳಿ. ಅದಕ್ಕೆ ಶುಂಠಿ ರಸ, ಹಾಲಿನ ಕೆನೆ, ಹುರಿದಿಟ್ಟ ಮೈದಾ/ಗೋಧಿ ಹಿಟ್ಟನ್ನು ಹಾಕಿ ಮಿಕ್ಸ್‌ ಮಾಡಿ. ಬಾಣಲೆಯಿಂದ ತಳಬಿಡುತ್ತಾ ಬರುವಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಆರಿದ ಮೇಲೆ ಕತ್ತರಿಸಿ ಸವಿಯಿರಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Advertisement

Udayavani is now on Telegram. Click here to join our channel and stay updated with the latest news.

Next