Advertisement
ಹಣ್ಣು ಹಂಪಲುಗಳು ಮತ್ತು ತರಕಾರಿಗಳು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ ಎಂಬುದು ನಮಗೆ ತಿಳಿದಿದೆ. ವಿವಿಧ ನೈಸರ್ಗಿಕ ಬಣ್ಣಗಳನ್ನು ಹೊಂದಿರುವ ಇಂತಹ ಹಣ್ಣು, ತರಕಾರಿ, ಸೊಪ್ಪು ತರಕಾರಿಗಳನ್ನು ದಿನದಲ್ಲಿ ಹಲವು ಬಾರಿ ಸೇವಿಸುವುದು ನಮ್ಮ ಆರೋಗ್ಯಕ್ಕೆ ಅತ್ಯುತ್ತಮ ಎಂಬುದು ನಮಗೆ ಗೊತ್ತಿದೆ. ಆದರೆ ಕೆಲವು ಮಸಾಲೆ ವಸ್ತುಗಳು ಕೂಡ ಆರೋಗ್ಯಕ್ಕೆ ಉಪಕಾರಿ ಎಂಬುದು ಎಷ್ಟು ಜನರಿಗೆ ತಿಳಿದಿದೆ?
Related Articles
Advertisement
ಗಮನಿಸಿ: ಪ್ರತೀದಿನ ಒಂದು ತುಂಡು ಶುಂಠಿಯನ್ನೇ ಸೇವಿಸಬೇಕೆಂದೇನಿಲ್ಲ. ಶುಂಠಿಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಅಥವಾ ಜಜ್ಜಿ ಜ್ಯೂಸ್, ಚಹಾ ಅಥವಾ ಇತರ ಖಾದ್ಯ ಪದಾರ್ಥಗಳ ಜತೆಗೆ ಸೇರಿಸಿ ಸೇವಿಸಬಹುದು. ಇಂತಹ ಶುಂಠಿ ನಮ್ಮ ದೇಹಕ್ಕೆ ಏನೇನು ಪ್ರಯೋಜನಗಳನ್ನು ಉಂಟು ಮಾಡುತ್ತದೆ ಎಂಬುದನ್ನು ಗಮನಿಸೋಣ.
ಉರಿಯೂತ ನಿವಾರಕ (ಆ್ಯಂಟಿ ಇನ್‌ಫ್ಲಮೇಟರಿ): ಶುಂಠಿಯ ಪರಿಣಾಮದಿಂದಾಗಿ ದೇಹದ ಯಾವುದೇ ಭಾಗದಲ್ಲಿ ಉಂಟಾಗಿರುವ ಉರಿಯೂತವು ಕಡಿಮೆಯಾಗುತ್ತದೆ.
ವಾಕರಿಕೆ ಮಾಯವಾಗುತ್ತದೆ: ಕೆಲವೊಮ್ಮೆ ನಿಮಗೆ ಬೆಳಗ್ಗೆ ವಾಕರಿಕೆಯ ಅನುಭವ ಆಗುತ್ತಿದೆಯೇ? ಪ್ರತೀ ದಿನ ಶುಂಠಿಯನ್ನು ಸೇವಿಸುವುದರಿಂದ ಇದು ನಿವಾರಣೆಯಾಗುತ್ತದೆ. ವಿಶೇಷವಾಗಿ ಗರ್ಭಿಣಿಯರು ಮತ್ತು ಕಿಮೊಥೆರಪಿಗೆ ಒಳಗಾಗುತ್ತಿರುವವರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.
ಸ್ನಾಯು ನೋವು ಕಡಿಮೆಯಾಗುತ್ತದೆ: ನಿಮಗೆ ಸ್ನಾಯು ನೋವು ಅಥವಾ ಕಾಲುಗಳಲ್ಲಿ ನೋವು ಇದೆಯೇ? ಶುಂಠಿಯನ್ನು ಸೇವಿಸುವುದರಿಂದ ಇದು ಕಡಿಮೆಯಾಗಬಲ್ಲುದು. ಪ್ರತೀ ದಿನ ಶುಂಠಿಯನ್ನು ಸೇವಿಸುವುದರಿಂದ ಸ್ನಾಯು ನೋವು ಕ್ರಮೇಣ ಕಡಿಮೆಯಾಗುತ್ತದೆ.
ಮಲ ವಿಸರ್ಜನೆಗೆ ಸಹಾಯ ಮಾಡುತ್ತದೆ: ಪ್ರತೀ ದಿನ ಶುಂಠಿ ಸೇವನೆಯಿಂದ ಮಲ ವಿಸರ್ಜನೆಗೆ ಸಹಾಯವಾಗುತ್ತದೆ. ನೀವು ಆಗಾಗ ಮಲಬದ್ಧತೆಯನ್ನು ಅನುಭವಿಸುತ್ತಿರುವಿರಾ? ಹಾಗಾದರೆ ಶುಂಠಿಯಿಂದ ನಿಮಗೆ ಸಹಾಯವಾಗಬಹುದು.
ಅಜೀರ್ಣವನ್ನು ನಿವಾರಿಸುತ್ತದೆ: ನಿಮಗೆ ದೀರ್ಘಕಾಲೀನ ಅಜೀರ್ಣವಿದ್ದರೆ ಶುಂಠಿಯಿಂದ ನಿಮಗೆ ಉಪಶಮನ ಸಿಗಬಹುದಾಗಿದೆ. ಊಟ-ಉಪಾಹಾರಕ್ಕೆ ಮುನ್ನ ಶುಂಠಿಯನ್ನು ಸೇವಿಸಿದರೆ ಜೀರ್ಣಾಂಗ ಬೇಗನೆ ಖಾಲಿಯಾಗುತ್ತದೆ, ಇದರಿಂದ ಆಹಾರವು ಜೀರ್ಣಾಂಗದಲ್ಲಿ ಇರುವ ಸಮಯ ಕಡಿಮೆಯಾಗುವ ಮೂಲಕ ಸಮಸ್ಯೆ ನಿವಾರಣೆಯಾಗುತ್ತದೆ.
ಮುಟ್ಟಿನ ನೋವಿನಿಂದ ಉಪಶಮನ: ನಿಮ್ಮ ಮುಟ್ಟಿನ ಅವಧಿಯಲ್ಲಿ ನೋವು ತೊಂದರೆ ನೀಡುತ್ತದೆಯೇ? ಇದಕ್ಕೂ ಪ್ರತೀದಿನ ಶುಂಠಿ ಸೇವಿಸುವುದರಿಂದ ಪರಿಹಾರ ಸಿಗಬಲ್ಲುದು. ಶುಂಠಿಯು ನೋವನ್ನು ಕಡಿಮೆ ಮಾಡುವ ನೋವು ನಿವಾರಕ ಗುಣವನ್ನು ಹೊಂದಿದ್ದು, ಹೊಟ್ಟೆ ನೋವು ಕಡಿಮೆಯಾಗಬಲ್ಲುದು.
ಕೊಲೆಸ್ಟರಾಲ್ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆ ಮಾಡುತ್ತದೆ: ಒಂದು ತಿಂಗಳು ಕಾಲ ಪ್ರತೀ ದಿನ ಶುಂಠಿಯನ್ನು ಸೇವಿಸುವುದರಿಂದ ‘ಕೆಟ್ಟ’ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್ ಗಳು ಕಡಿಮೆಯಾಗುತ್ತವೆ.
ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ: ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣವು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಸದೃಢಗೊಳಿಸುತ್ತದೆ. ನಿಮಗೆ ಶೀತ ಬಾಧೆ ಅಥವಾ ವೈರಾಣು ಸೋಂಕು ಉಂಟಾಗಿದೆಯೇ? ಬೇಗನೆ ಗುಣಹೊಂದಲು ನಿಮಗೆ ಶುಂಠಿ ಸಹಾಯ ಮಾಡಬಹುದಾಗಿದೆ.
ನಮ್ಮನ್ನು ಆರೋಗ್ಯಯುತವಾಗಿ ಇರಿಸುವ ಆಹಾರವಸ್ತುಗಳು ನಮಗೆ ಅಗತ್ಯ. ಇಂತಹ “ಸೂಪರ್ ಫುಡ್’ಗಳಲ್ಲಿ ಶುಂಠಿಯೂ ಒಂದು.
ಸುಷ್ಮಾ ಐತಾಳ,
ಪಥ್ಯಾಹಾರ ತಜ್ಞೆ,
ಕೆಎಂಸಿ ಆಸ್ಪತ್ರೆ, ಅತ್ತಾವರ,
ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಥ್ಯಾಹಾರ ವಿಭಾಗ, ಕೆಎಂಸಿ, ಮಂಗಳೂರು)