Advertisement

ಉತ್ತಮ ಚಿಕಿತ್ಸೆಗೆ ಹೆಸರುವಾಸಿ ಜಿಮ್ಸ್‌

09:24 PM Jun 04, 2021 | Team Udayavani |

ವರದಿ: ವೀರೇಂದ್ರ ನಾಗಲದಿನ್ನಿ

Advertisement

ಗದಗ: ಕೋವಿಡ್‌ ಸೇರಿದಂತೆ ಎಲ್ಲ ರೀತಿಯ ರೋಗರುಜಿನುಗಳಿಗೆ ಉತ್ತಮ ಚಿಕಿತ್ಸೆ ಕಲ್ಪಿಸುವ ಮೂಲಕ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಈ ಭಾಗದಲ್ಲಿ ಮನೆ ಮಾತಾಗಿದೆ. ಜತೆಗೆ ಜಿಲ್ಲಾ ಆಸ್ಪತ್ರೆಗಳ ಪೈಕಿ ಅತೀ ಹೆಚ್ಚು ವೆಂಟಿಲೇಟರ್‌ ಹಾಸಿಗೆಗಳನ್ನು ಹೊಂದಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಗದಗ ಮೆಡಿಕಲ್‌ ಕಾಲೇಜು ಸ್ಥಾಪನೆಗೊಂಡು ಕೆಲವೇ ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣ ವಲಯದಲ್ಲಿ ಹೊಸ ಛಾಪು ಮೂಡಿಸಿದೆ. ಮೆಡಿಕಲ್‌ ಕಾಲೇಜು ಸ್ಥಾಪನೆಗೊಂಡ ಮೊದಲ ಬ್ಯಾಚ್‌ನಲ್ಲೇ ಶೇ.90.90 ರಷ್ಟು ಫಲಿತಾಂಶ ಪಡೆದು ತನ್ನ ಹಿರಿಮೆ ಸಾರಿತ್ತು. ಸಣ್ಣ-ಪುಟ್ಟ ಕಾಯಿಲೆಯಿಂದ ಹಿಡಿದು ಎಲ್ಲ ಬಗೆಯ ರೋಗಗಳಿಗೆ ಉಪಶಮನ ನೀಡುತ್ತಿದೆ. ಹಲವು ಇಲ್ಲಗಳ ನಡುವೆಯೂ ಗುಣಮಟ್ಟದ ಶಿಕ್ಷಣ, ಉತ್ತಮ ವೈದ್ಯಕೀಯ ಸೇವೆ ಕಲ್ಪಿಸುವ ಮೂಲಕ ಗದಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ರೋಗಿಗಳನ್ನೂ ತನ್ನತ್ತ ಸೆಳೆಯುತ್ತಿದೆ. ಇದೀಗ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿರುವ ಒಟ್ಟಾರೆ 440 ಆಮ್ಲಜನಕಯುಕ್ತ ಹಾಸಿಗೆಗಳಲ್ಲಿ ಶೇ.25 (110) ವೆಂಟಿಲೇಟರ್‌ ಹೊಂದಿದ ಹಾಸಿಗೆಗಳನ್ನು ಕಲ್ಪಿಸುವ ಮೂಲಕ ಕರ್ನಾಟಕದಲ್ಲಿಯೇ ಅತೀ ಹೆಚ್ಚಿನ ವೆಂಟಿಲೇಟರ್‌ ಹಾಸಿಗೆಗಳನ್ನು ನೀಡಿದ ಪ್ರಥಮ ಮತ್ತು ಏಕೈಕ ಕೋವಿಡ್‌ ಆಸ್ಪತ್ರೆಯಾಗಿದೆ ಎಂದು ಅ ಧಿಕೃತ ಮೂಲಗಳು ತಿಳಿಸಿವೆ.

ಕೋವಿಡ್‌ನಿಂದ ಹಲವರಿಗೆ ಪುನರ್ಜನ್ಮ: ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೋವಿಡ್‌-19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತಕ್ಕೆ ಜಿಮ್ಸ್‌ ಆಸ್ಪತ್ರೆ ಬೆನ್ನೆಲುಬಾಗಿ ನಿಂತಿದೆ. 2020ನೇ ಸಾಲಿನಲ್ಲಿ ರಾಜ್ಯದಲ್ಲಿ ಕೋವಿಡ್‌ ಆತಂಕ ಉಂಟಾಗುತ್ತಿದ್ದಂತೆ ಇಲ್ಲಿನ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು.

ಪ್ರತ್ಯೇಕ ಐಸೋಲೇಷನ್‌ ವಾರ್ಡ್‌, ಐಸಿಯು ವ್ಯವಸ್ಥೆ ಮಾಡಿಕೊಂಡಿತ್ತು. ಅಲ್ಲದೇ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಆಯುಷ್‌ ಇಲಾಖೆಯ 100 ಹಾಸಿಗೆಗಳ ನೂತನ ಕಟ್ಟಡವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಕೋವಿಡ್‌ ವಿರುದ್ಧ ಸಮರ ನಡೆಸುತ್ತಿದೆ. 2020ರಲ್ಲಿ ಜಿಲ್ಲೆಯಲ್ಲಿ ಒಟ್ಟು 10907 ಜನರಿಗೆ ಸೋಂಕು ದೃಢಪಟ್ಟಿತ್ತು. ಈ ಪೈಕಿ 4167 ಜನರು ಜಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಬಹುತೇಕರು ಗುಣಮುಖರಾಗಿದ್ದಾರೆ.

Advertisement

ಈ ಬಾರಿ ಕೋವಿಡ್‌ 2ನೇ ಅಲೆಯಲ್ಲೂ ಜಿಮ್ಸ್‌ ಮೇಲುಗೈ ಸಾಧಿ ಸಿದೆ. 2021ರ ಮೇ 20ರವರೆಗೆ 1735 ಜನ ಸೋಂಕಿತರು ದಾಖಲಾಗಿದ್ದು, 67 ಜನ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನುಳಿದಂತೆ 1231 ಜನರು ಚೇತರಿಸಿಕೊಂಡಿದ್ದಾರೆ. ವೈದ್ಯರ ಅವಿರತ ಪರಿಶ್ರಮದಿಂದ ಆರೋಗ್ಯ ಚಿಂತಾಜನಕ ಸ್ಥಿತಿಯಲ್ಲಿದ್ದ ಅನೇಕರಿಗೆ ಜಿಮ್ಸ್‌ ಪುನರ್ಜನ್ಮ ನೀಡಿದೆ. ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಐಸಿಯು: ಕೋವಿಡ್‌ 2ನೇ ಅಲೆಯಲ್ಲಿ ವೆಂಟಿಲೇಟರ್‌ ಬೆಡ್‌ಗಳು ಸಿಗದೇ ಪ್ರಾಣ ಕಳೆದುಕೊಂಡವರ ಸಂಖ್ಯೆ ಲೆಕ್ಕವಿಲ್ಲ. ಈ ಪರಿಸ್ಥಿತಿಯನ್ನು ಮನಗಂಡು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿ ಧಿಗಳು ಜಿಮ್ಸ್‌ ಆಸ್ಪತ್ರೆಯನ್ನು ಉನ್ನತೀಕರಿಸಿದ್ದಾರೆ. ಹೀಗಾಗಿ ದಶಕಗಳಿಂದಿರುವ ರಾಜ್ಯದ ವಿವಿಧ ಜಿಲ್ಲೆಯ ಸರಕಾರಿ ಮೆಡಿಕಲ್‌ ಕಾಲೇಜುಗಳನ್ನು ಜಿಮ್ಸ್‌ ಹಿಂದಿಕ್ಕಿದೆ.

ಆಸ್ಪತ್ರೆಯ ಎಲ್ಲಾ 440 ಬೆಡ್‌ ಗಳಿಗೂ ಆಕ್ಸಿಜನ್‌ ಒದಗಿಸಿದೆ. ಜತೆಗೆ 110 ಬೆಡ್‌ಗಳಿಗೆ ವೆಂಟಿಲೇಟರ್‌ ಕಲ್ಪಿಸಲಾಗಿದೆ. ಈ ಮೂಲಕ ಪ್ರತಿ ನಾಲ್ವರು ರೋಗಿಗಳಲ್ಲಿ ಒಬ್ಬರು ವೆಂಟಿಲೇಟರ್‌ ಸಹಿತ ಚಿಕಿತ್ಸೆ ದೊರೆಯಲಿದೆ. ಆಸ್ಪತ್ರೆಯ ಒಟ್ಟು ಬೆಡ್‌ಗಳಲ್ಲಿ ಶೇ.25 ವೆಂಟಿಲೇಟರ್‌ ಬೆಡ್‌ ಹೊಂದಿರುವ ರಾಜ್ಯದ ಏಕೈಕ ಸರಕಾರಿ ಆಸ್ಪತ್ರೆ ಎಂಬ ಹೆಮ್ಮೆಯಿಂದ ಬೀಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next