ಪಟ್ನಾ: ಪಾಕ್ ಪ್ರಧಾನಿ ಗಿಲ್ಗಿಟ್- ಬಾಲ್ಟಿಸ್ಥಾನ್‌ಗೆ ಭೇಟಿಕೊಟ್ಟ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇಮ್ರಾನ್ ಖಾನ್ ವಿರುದ್ಧ ಸಿಡಿದಿದ್ದಾರೆ. “ಪಾಕ್ ಗಿಲ್ಗಿಟ್- ಬಾಲ್ಟಿಸ್ಥಾನವನ್ನು ತನ್ನದೆನ್ನುವ ಮೊದಲೇ ಅದು ಭಾರತದ ಭಾಗವಾಗಿತ್ತು’ ಎಂದು ಹೇಳಿದ್ದಾರೆ.
“ಪಾಕಿಸ್ಥಾನ ಈ ಪ್ರಾಂತ್ಯಗಳಿಗೆ ಈಗ ರಾಜ್ಯದ ಸ್ಥಾನಮಾನ ನೀಡಲು ಹೊರಟಿದೆ. ನಮ್ಮ ಸರಕಾರ ಬಹಳ ಹಿಂದೆಯೇ ಪಿಒಕೆ ಒಳಗೊಂಡಂತೆ ಗಿಲ್ಗಿಟ್- ಬಾಲ್ಟಿಸ್ಥಾನ ಭಾರತದ ಅವಿಭಾಜ್ಯ ಅಂಗವೆಂಬುದನ್ನು ಘಂಟಾಘೋಷವಾಗಿ ಹೇಳಿದೆ. ಪಾಕ್ ಈ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿ ಕೊಂಡಿದೆ’ ಎಂದು ಸಚಿವರು ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.
ವಿಭಜನೆ ಬಯಸಿರ್ಲಿಲ್ಲ: “ಭಾರತೀಯರು ಯಾರೂ ದೇಶವಿಭಜನೆ ಬಯಸಿರಲಿಲ್ಲ, ಆದರೆ ಅದು ಸಂಭವಿಸಿತ್ತು. ಅಂದು ಭಾರತದಿಂದ ಹೋದ ಹಿಂದೂ, ಸಿಕ್ಖ್, ಬೌದ್ಧರನ್ನು ಅವರು ಎಷ್ಟು ನಿಕೃಷ್ಟವಾಗಿ ಕಂಡಿದ್ದಾರೆ ಗೊತ್ತೇ? ಆದರೆ, ನಾವು ಅದೇ ಅಲ್ಪಸಂಖ್ಯಾಕರ ರಕ್ಷಣೆಗೆ ಕಾನೂನು ಜಾರಿಮಾಡಿದ್ದೇವೆ’ ಎನ್ನುವ ಮೂಲಕ ಸಿಎಎ ಕಾಯ್ದೆಯನ್ನು ಸಮರ್ಥಿಸಿಕೊಂಡರು.
ರಾಹುಲ್‌ಗೆ ಟಕ್ಕರ್: “ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ. ಭಾರತದ ಭೂಪ್ರದೇಶದೊಳಗೆ ಚೀನ ಪ್ರವೇಶಿಸಿದೆ ಎನ್ನುವ ಆರೋ ಪಕ್ಕೆ ಯಾವುದೇ ಆಧಾರವಿಲ್ಲ’ ಎಂದು ಪರೋಕ್ಷವಾಗಿ ರಾಹುಲ್‌ಗಾಂಧಿಗೆ ಕುಟುಕಿದ್ದಾರೆ.
“1962ರಿಂದ 2013ರ ವರೆಗೆ ಏನು ಸಂಭವಿಸಿತು ಎನ್ನುವ ಬಗ್ಗೆ ಈಗೇನೂ ಹೇಳುವುದಿಲ್ಲ. ನಮ್ಮ ಸೈನಿಕರು ಎಲ್‌ಎಸಿಯಲ್ಲಿ ದಿಟ್ಟ ಶೌರ್ಯ ಮೆರೆದಿದ್ದಾರೆ. ಹೊರಗಿನ ಶತ್ರುಗಳ್ಯಾರೂ ದೇಶದ ಭೂಭಾಗದೊಳಗೆ ನುಸುಳಲು ಸಾಧ್ಯವಿಲ್ಲ. ಬಿಕ್ಕಟ್ಟು ಶಮನಕ್ಕೆ ಯತ್ನಿಸುತ್ತಲೇ ಇದ್ದೇವೆ. ಯಾವಾಗ ಬಗೆಹರಿಯುತ್ತದೋ ತಿಳಿದಿಲ್ಲ’ ಎಂದು ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
2021ಕ್ಕೆ ಜರ್ಮನ್ ಯುದ್ಧನೌಕೆ ಗಸ್ತು
ದಕ್ಷಿಣ ಚೀನ ಸಮುದ್ರದಲ್ಲಿ ಈಗಾಗಲೇ ಅಮೆರಿಕ ಪರಮಾಣು ಶಸ್ತ್ರಾಸ್ತ್ರ ಹೊತ್ತ ನೌಕೆಗಳು ಗಸ್ತು ತಿರುಗುತ್ತಿವೆ. ಈ ನಡುವೆ ಜರ್ಮನ್ ಯುದ್ಧನೌಕೆಗಳನ್ನೂ ಹಿಂದೂ ಮಹಾಸಾಗರ ವಲಯದಲ್ಲಿ ನಿಯೋಜಿಸುವುದಾಗಿ ರಕ್ಷಣಾ ಸಚಿವೆ ಆ್ಯನ್ನೆಗ್ರೆಟ್ ಕ್ರ್ಯಾಂಪ್- ಕ್ಯಾರೆನ್‌ಬಾರ್ ಘೋಷಿಸಿದ್ದಾರೆ. “ಇಂಡೋ- ಪೆಸಿಫಿಕ್‌ನಲ್ಲಿನ ಚೀನದ ಬೆದರಿಕೆಗೆ ಉತ್ತರವಾಗಿ ಜರ್ಮನ್ ಯುದ್ಧನೌಕೆಗಳು 2021ರಲ್ಲಿ ಗಸ್ತು ಆರಂಭಿಸಲಿವೆ. ಇದಕ್ಕಾಗಿ ಮುಂದಿನವರ್ಷ ರಕ್ಷಣಾ ಬಜೆಟ್ಟನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ’ ಎಂದು ಹೇಳಿದ್ದಾರೆ.