ಮಂಡ್ಯ: ಗಣಿಗಾರಿಕೆಯ ಸ್ಫೋಟದಿಂದ ಕೆಆರ್‌ಎಸ್ ಜಲಾಶಯಕ್ಕೆ ಧಕ್ಕೆಯಾಗಲಿದೆ ಎಂಬ ಚರ್ಚೆ ನಡೆಯುತ್ತಿರುವಾಗಲೇ ಅಣೆಕಟ್ಟೆ ಸಮೀಪವಿರುವ ಬೇಬಿಬೆಟ್ಟದಲ್ಲಿ ಸ್ಫೋಟಕಗಳು ಪತ್ತೆಯಾಗಿರುವುದು ಆತಂಕ ಉಂಟು ಮಾಡಿದೆ.
ಶುಕ್ರವಾರ ಮಧ್ಯಾಹ್ನ ಬೇಬಿಬೆಟ್ಟದ ಸುತ್ತಮುತ್ತ ಗ್ರಾಮಸ್ಥರು ಜಾನುವಾರುಗಳನ್ನು ಮೇಯಿಸುತ್ತಿದ್ದವರ ಕಣ್ಣಿಗೆ ಸ್ಫೋಟಕಗಳು ಕಂಡಿವೆ. ಎಲೆಕ್ಟ್ರಿಕ್ ವೈರ್, ಜಿಲೆಟಿನ್ ಕಡ್ಡಿ ಹಾಗೂ ತೋಟಾಗಳು ಪತ್ತೆಯಾಗಿವೆ.
ಗಣಿಗಾರಿಕೆಯಲ್ಲಿ ಕಲ್ಲು ಸಿಡಿಸಲು ಸ್ಫೋಟಕಗಳನ್ನು ಬಳಸಲಾಗುತ್ತಿತ್ತು ಎಂಬುದು ಸಾಬೀತಾಗಿದೆ. ಅಕ್ರಮವಾಗಿ ಸ್ಫೋಟಕಗಳನ್ನು ತಂದು ಯಾರಿಗೂ ಗೊತ್ತಾಗದಂತೆ ಹುದುಗಿಸಿದ್ದಾರೆ. ಜಾನುವಾರು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಶುಕ್ರವಾರ ಗ್ರಾಮಸ್ಥರ ಕಣ್ಣಿಗೆ ಬಿದ್ದಿವೆ.
ಇದನ್ನೂ ಓದಿ :ಗುಜರಾತ್‌ಗೆ ಸಿಕ್ಕಷ್ಟು ಲಸಿಕೆ ನಮ್ಮ ರಾಜ್ಯಕ್ಕೆ ಸಿಕ್ಕಿದೆಯಾ : ಸರಕಾರಕ್ಕೆ ಡಿಕೆಶಿ ಪ್ರಶ್ನೆ
ಸುಮಾರು ದಿನಗಳಿಂದ ಮಣ್ಣಿನಲ್ಲಿ ಹುದುಗಿಸಿಡಲಾಗಿದೆ. ಆದ್ದರಿಂದ ಮಳೆ ಹಾಗೂ ಮಣ್ಣಿನಿಂದ ಕೂಡಿರುವ ಜೀವಂತ ಜಿಲೆಟಿನ್ ಕಡ್ಡಿಗಳು ಮತ್ತು ತೋಟಾಗಳಾಗಿವೆ. ಈ ಸ್ಫೋಟಕಗಳು ಮಕ್ಕಳ ಕೈಗೆ ಸಿಕ್ಕಿದರೆ ದೊಡ್ಡ ಅನಾಹುತ ಸಂಭವಿಸಬಹುದು. ಇದರ ಬಗ್ಗೆ ಸಂಬಂಧಪಟ್ಟ ಪೊಲೀಸರ ನಿರ್ಲಕ್ಷ್ಯ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂಥ ಘಟನೆಗಳು ನಡೆಯುತ್ತಿವೆ. ಕಳೆದ ಎರಡು ದಿನಗಳ ಹಿಂದೆ ಸಂಸದೆ ಸುಮಲತಾ ಬೇಬಿಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರ ಭೇಟಿಯ ನಂತರ ಸ್ಫೋಟಕಗಳು ಪತ್ತೆಯಾಗಿವೆ.
ಕೂಡಲೇ ಜಿಲ್ಲಾಡಳಿತ, ಗಣಿ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕನ್ನಂಬಾಡಿ ಅಣೆಕಟ್ಟೆಗೆ ಆಪತ್ತು ಎದುರಾಗಲಿದೆ ಎಂದು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.