ಬೆಂಗಳೂರು: ಶಿಗ್ಗಾವಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಬಳಿಕ ಸಿಎಂ ಸಿದ್ದರಾಮಯ್ಯ ಮನವಿ ಮೇರೆಗೆ ಉಮೇದುವಾರಿಕೆ ವಾಪಸ್ ಪಡೆದಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಅಧ್ಯಕ್ಷ ಪಟ್ಟ ಒಲಿದಿದೆ.
ಉಪಚುನಾವಣೆ ವೇಳೆ ಯಾಸಿರ್ ಖಾನ್ ಪಠಾಣ್‌ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದರಿಂದ ಅಸಮಾಧಾನಗೊಂಡಿದ್ದ ಖಾದ್ರಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅಷ್ಟೇ ಅಲ್ಲದೆ, ಪಠಾಣ್ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದರು. ಯಾರೇ ಮನವೊಲಿಸಿದರೂ ಉಮೇದುವಾರಿಕೆ ಹಿಂಪಡೆಯಲು ಒಪ್ಪದಿದ್ದ ಖಾದ್ರಿ, ವಸತಿ ಸಚಿವ ಜಮೀರ್ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿ ಹಲವು ನಾಯಕರು ಸಿಎಂ ಸಿದ್ದರಾಮಯ್ಯ ಎದುರು ಕೂರಿಸಿದಾಗಲೂ ನಾಮಪತ್ರ ಹಿಂಪಡೆಯುವುದಿಲ್ಲ. ಪಠಾಣ್‌ಗೆ ಹಿಂದೆ ಸರಿಯಲು ಹೇಳಿ ಎಂದಿದ್ದರು.
ಕೊನೆಗೆ ಖಾದ್ರಿಯರನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದು ಸಂಧಾನ ಮಾಡಿದ್ದರು. ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿ ಮನವೊಲಿಸಿದ್ದರು. ಬಳಿಕ ಸಿದ್ದರಾಮಯ್ಯ ಮಾತಿಗೆ ಬೆಲೆ ಕೊಟ್ಟು ಖಾದ್ರಿ ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡಿದ್ದರು. ಅಲ್ಲದೇ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಯಾಸೀರ್ ಖಾನ್ ಪಠಾಣ್ ಅವರ ಪರವಾಗಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮದ ಅಧ್ಯಕ್ಷರನ್ನಾಗಿ ಅಜ್ಜಂಪೀರ್ ಖಾದ್ರಿಯವರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಶಿಗ್ಗಾವಿ ಉಪಚುನಾವಣೆ ವೇಳೆ ತಮ್ಮ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ ಪಡೆದುಕೊಂಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ, ಎರಡೇ ದಿನದಲ್ಲಿ ಖಾದ್ರಿಗೆ ಈ ಗಿಫ್ಟ್ ನೀಡಿದ್ದಾರೆ.
ಇನ್ನು ಯಾಸೀರ್ ಖಾನ್ ಪಠಾಣ್ ಗೆಲ್ಲುತ್ತಿದ್ದಂತೆಯೇ ಖಾದ್ರಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರವಾಣಿ ಕರೆ ಮಾಡಿ ಫಲಿತಾಂಶದ ವಿವರ ನೀಡಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಖಾದ್ರಿಗೆ ಅಭಿನಂದನೆ ತಿಳಿಸಿದ್ದರು. ಇದೀಗ ಖಾದ್ರಿಗೆ ಸಿದ್ದರಾಮಯ್ಯ ಕೊಟ್ಟ ಭರವಸೆಯನ್ನು ಫಲಿತಾಂಶ ಪ್ರಕಟವಾದ ಎರಡನೇ ದಿನದಲ್ಲಿ ಈಡೇರಿಸಿದ್ದಾರೆ.