ಸುಯೇಜ್: ಸುಯೇಜ್ ಕಾಲುವೆಯಲ್ಲಿ ಒಂದು ವಾರದಿಂದ ಕದಲದೆ ನಿಂತಿದ್ದ “ಎವರ್ ಗಿವನ್’ ಬೃಹತ್ ಕಂಟೈನರ್ ಹಡಗನ್ನು ಕೊನೆಗೂ ಚಲಿಸುವಂತೆ ಮಾಡುವಲ್ಲಿ ತಂತ್ರಜ್ಞರು ಯಶಸ್ವಿಯಾಗಿದ್ದಾರೆ. ಇದರಿಂದಾಗಿ, ಸುಯೆಜ್ ಕಾಲುವೆಯಲ್ಲಿ ಸುಮಾರು ಐದಾರು ದಿನಗಳಿಂದ ಸ್ತಬ್ಧವಾಗಿದ್ದ ವಾಣಿಜ್ಯ ಹಡಗುಗಳ ಓಡಾಟ ಮತ್ತೆ ಆರಂಭವಾಗಿದೆ.
ಭಾನುವಾರ ಮಧ್ಯರಾತ್ರಿ 14 ಟಗ್ ಬೋಟ್‌ಗಳು, ಕಂಟೈನರ್ ಹಡಗನ್ನು ಅತ್ತಿಂದಿತ್ತ ಜಗ್ಗಾಡಿದ್ದವು. ಈ ವೇಳೆ ಹಡಗಿನ ಸುತ್ತ ತುಂಬಿಕೊಂಡಿದ್ದ 27 ಸಾವಿರ ಘನ ಮೀಟರ್ ನಷ್ಟಿದ್ದ ಕೆಸರನ್ನೂ ಹೊರತೆಗೆಯಲಾಗಿತ್ತು.
ನೆರವಾದ ಹುಣ್ಣಿಮೆ: ಸೋಮವಾರ ಹುಣ್ಣಿಮೆ ದಿನವಾಗಿದ್ದರಿಂದ ಸಾಗರದಲ್ಲಿ ಅಲೆಗಳ ಉಬ್ಬರ ಜೋರಾಗಿತ್ತು. ರಭಸದ ಅಲೆಗಳು ಹಡಗಿಗೆ ಬಂದು ಪದೇ ಪದೇ ಅಪ್ಪಳಿಸುತ್ತಿದ್ದರಿಂದ ಹಡಗು ತಾನು ಸಿಲುಕಿದ್ದ ಜಾಗದಿಂದ ಕದಲಲು ಸಾಧ್ಯವಾಯಿತು. ಇದೀಗ, “ಹಡಗಿನ ಎಂಜಿನ್ ಸಕ್ರಿಯವಾಗಿದ್ದು, ಪ್ರಯಾಣ ಮುಂದುವರಿಸಲು ಯಾವುದೇ ತೊಂದರೆ ಇಲ್ಲ’ ಎಂದು ಎಂಜಿನಿಯರ್ಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ :ಮಾ.31ರಂದು ಅಂಬಾಲಾಕ್ಕೆ ಬರಲಿವೆ 3 ರಫೇಲ್ ಯುದ್ಧ ವಿಮಾನ
ತಪ್ಪಿದ ಟ್ರಾಫಿಕ್ ಜ್ಯಾಂ ತಲೆನೋವು: ಯುರೋಪ್- ಏಷ್ಯಾ ನಡುವಿನ “ಹಡಗಿನ ಅಡ್ಡದಾರಿ’ ಸುಯೇಜ್ ಕಾಲುವೆಯಲ್ಲಿ ಕಂಟೈನರ್ ಶಿಪ್ ಸಿಲುಕಿ ಒಂದು ವಾರದಿಂದ 369 ಹಡಗುಗಳು ಟ್ರಾಫಿಕ್ ಜ್ಯಾಂ ತಲೆಬಿಸಿ ಅನುಭವಿಸಿದ್ದವು. 12 ಕಂಟೈನರ್ ಶಿಪ್‌ಗಳು, ಬೃಹತ್ ವಾಹಕಗಳು, ಆಯಿಲ್ ಟ್ಯಾಂಕರ್‌ಗಳು, ಎಲ್‌ಪಿಜಿ ಟ್ಯಾಂಕರ್‌ಗಳು ಸಾಲುಗಟ್ಟಿ ನಿಂತಿದ್ದವು. “ಎವರ್ ಗಿವನ್’ ಶಿಪ್ ಚಲಿಸಲು ಆರಂಭಿಸಿರುವುದರಿಂದ ಇವಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.