ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಗುಲಾಂ ನಬಿ ಆಜಾದ್ ಜಮ್ಮು-ಕಾಶ್ಮೀರದಲ್ಲಿ ನೂತನ ಪಕ್ಷ ಸ್ಥಾಪಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ವಿಜಯಪುರದಲ್ಲಿ ಮುಂದುವರೆದ ಸರಣಿ ಭೂಕಂಪ : ಅಧ್ಯಯನಕ್ಕೆ ಬಂದ ತಜ್ಞರಿಗೂ ಕಂಪನದ ಅನುಭವ
“ನಾನು ಜಮ್ಮು-ಕಾಶ್ಮೀರಕ್ಕೆ ಹೋಗಿ, ನನ್ನದೇ ಆದ ಸ್ವಂತ ಪಕ್ಷವನ್ನು ಸ್ಥಾಪಿಸುತ್ತೇನೆ. ನಂತರ ಮುಂದಿನ ನಿರ್ಧಾರಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ” ಗುಲಾಂ ನಬಿ ಇಂಡಿಯಾ ಟುಡೇಗೆ ತಿಳಿಸಿರುವುದಾಗಿ ವರದಿಯಾಗಿದೆ.
2022ರ ಅಂತ್ಯದಲ್ಲಿ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ. ಜಮ್ಮು-ಕಾಶ್ಮೀರದ ಚುನಾವಣೆಗೂ ಮುನ್ನ ಗುಲಾಂ ನಬಿ ಅವರು ರಾಜ್ಯದಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಲು ಉತ್ಸುಕರಾಗಿದ್ದಾರೆಂದು ಆಜಾದ್ ಅವರ ನಿಕಟವರ್ತಿ ಮೂಲಗಳು ತಿಳಿಸಿವೆ.
ಜಮ್ಮು-ಕಾಶ್ಮೀರದ ಕಾಂಗ್ರೆಸ್ ಚುನಾವಣಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಆಜಾದ್ ರಾಜೀನಾಮೆ ನೀಡಿದ ನಂತರ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ತನ್ನನ್ನು ಕಡೆಗಣಿಸಿದೆ ಎಂದು ಆಜಾದ್ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಬಾಲಿಶ ನಡವಳಿಕೆ ಮತ್ತು ಅಪ್ರಬುದ್ಧತೆಯಿಂದ ಕಾಂಗ್ರೆಸ್ ಪಕ್ಷ ಅವನತಿಗೆ ಹೋಗುತ್ತಿದೆ. ಪಕ್ಷದಲ್ಲಿನ ಹಿರಿಯರನ್ನು, ಸಲಹೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಆಜಾದ್ ಅವರು ಸೋನಿಯಾ ಗಾಂಧಿಗೆ ಬರೆದ 5 ಪುಟಗಳ ರಾಜೀನಾಮೆ ಪತ್ರದಲ್ಲಿ ಕಟುವಾಗಿ ಟೀಕಿಸಿದ್ದರು.