Advertisement

ಜಿ.ಎಚ್‌.ಎಸ್‌. ರಸ್ತೆ: ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ

10:51 AM Sep 28, 2018 | Team Udayavani |

ಮಹಾನಗರ: ನಗರದ ಜಿ.ಎಚ್‌.ಎಸ್‌. ರಸ್ತೆಯ ವಸ್ತ್ರ ಮಳಿಗೆ ‘ಸಿಲೆಕ್ಷನ್‌ ಸೆಂಟರ್‌’ನಲ್ಲಿ ಗುರುವಾರ ಬೆಳಗ್ಗೆ ಬೆಂಕಿ ಆಕಸ್ಮಿಕ ಉಂಟಾಗಿ, ಅದು ಪಕ್ಕದ ಮೂರು ಕೊಠಡಿಗಳಿಗೂ ವ್ಯಾಪಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ ಬರೆ ಬೆಂಕಿಗಾಹುತಿಯಾಗಿದೆ. ಯಾರಿಗೂ ಅಪಾಯ ಸಂಭವಿಸಿಲ್ಲ. ಅಗ್ನಿ ಶಾಮಕ ದಳದ ಸಿಬಂದಿ ಬೆಂಕಿಯನ್ನು ನಂದಿಸಿದರು. ಪೊಲೀಸರು ಸಹಕರಿಸಿದರು.

Advertisement

ಮೂರು ಮಾಳಿಗೆಯ ಈ ಕಟ್ಟಡದ ನೆಲ ಮಹಡಿಯಲ್ಲಿ ಗುರುವಾರ ಬೆಳಗ್ಗೆ ಸುಮಾರು 9.30ರ ವೇಳೆಗೆ ‘ಸಿಲೆಕ್ಷನ್‌ ಸೆಂಟರ್‌’ ಮಳಿಗೆಯ ಬಾಗಿಲು ತೆರೆಯುವುದಕ್ಕೆ ಮೊದಲೇ ಅಂಗಡಿಯ ಬಾಗಿಲಿನ ಎಡೆಯಿಂದ ಹೊಗೆ ಹೊರಗೆ ಬರುತ್ತಿರುವುದನ್ನು ಅಕ್ಕ ಪಕ್ಕದ ಅಂಗಡಿಗಳ ಜನರು ಗಮನಿಸಿದ್ದರು. ಕೂಡಲೇ ಅವರು ಮಾಲಕರಿಗೆ ಫೋನ್‌ಮಾಡಿ ವಿಷಯ ತಿಳಿಸಿದ್ದರು. ಕೂಡಲೇ ಅವರು ಧಾವಿಸಿ ಬಂದಿದ್ದರು.

ಅಂಗಡಿಯ ಒಳಗಿಂದ ಹೊಗೆ ಬರುತ್ತಿರುವುದನ್ನು ಗಮಿನಿಸಿ ನಾನು ಕೂಡಲೇ ಪೊಲೀಸರಿಗೆ ಮತ್ತು ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದೆ. ಐದು ನಿಮಿಷಗಳಲ್ಲಿ ಅಗ್ನಿ ಶಾಮಕ ಠಾಣೆಯ ಸಿಬಂದಿ ಸ್ಥಳಕ್ಕೆ ತಲುಪಿದ್ದಾರೆ ಹಾಗೂ ಕೂಡಲೇ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಜಿ.ಎಚ್‌.ಎಸ್‌. ರಸ್ತೆಯಲ್ಲಿ ಸಂಚಾರ ನಿರ್ವಹಣೆಯ ಕರ್ತವ್ಯದಲ್ಲಿದ್ದ ಟ್ರಾಫಿಕ್‌ ಪೊಲೀಸ್‌ ಕಾನ್ಸ್‌ಟೆಬಲ್‌ ಶಿವಮೂರ್ತಿ ನಾಯ್ಕ ಆರ್‌. ತಿಳಿಸಿದರು.

ಕಮಿಷನರ್‌, ಮೇಯರ್‌ ಭೇಟಿ
ಮೇಯರ್‌ ಭಾಸ್ಕರ್‌ ಕೆ., ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌. ಡಿಸಿಪಿ ಉಮಾ ಪ್ರಶಾಂತ್‌, ವಿವಿಧ ಪೊಲೀಸ್‌ ಠಾಣೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

ರಸ್ತೆ ಬಂದ್‌
ಜಿ.ಎಚ್‌.ಎಸ್‌. ರಸ್ತೆಯು ನಗರದ ಹೃದಯ ಭಾಗದಲ್ಲಿದ್ದು, ಪಕ್ಕದಲ್ಲಿಯೇ ಸೆಂಟ್ರಲ್‌ ಮಾರ್ಕೆಟ್‌ ಕೂಡ ಇರುವುದರಿಂದ ಈ ರಸ್ತೆ ಸದಾ ಬ್ಯುಸಿ ಇರುತ್ತದೆ. ಗುರುವಾರ ಬೆಳಗ್ಗೆ 9.30ಕ್ಕೆ ಹೆಚ್ಚಿನ ಅಂಗಡಿಗಳು ತೆರೆದಿರಲಿಲ್ಲ.

Advertisement

ಆದರೆ ರಸ್ತೆಯಲ್ಲಿ ವಾಹನ ಸಂಚಾರ ಸಾಕಷ್ಟಿತ್ತು. ಒಂದು ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ಪಕ್ಕದ ಅಂಗಡಿಗಳಿಗೆ ವ್ಯಾಪಿಸಿ ದೊಡ್ಡ ಮಟ್ಟದ ದುರಂತ ಆಗಿ ಪರಿವರ್ತನೆಗೊಂಡ ಕಾರಣ ತುರ್ತು ಕಾರ್ಯಾಚರಣೆಗೆ ಅಧಿಕ ಸಂಖ್ಯೆಯ ಅಗ್ನಿ ಶಾಮಕ ವಾಹನಗಳು ಆಗಮಿಸಿದ್ದರಿಂದ ಸುಮಾರು ಎರಡು ಗಂಟೆಗಳ ಕಾಲ ಈ ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರವನ್ನು ಬಂದ್‌ ಮಾಡಲಾಗಿತ್ತು. ವಾಹನಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸಿದವು.

ಘಟನ ಸ್ಥಳದಲ್ಲಿ ಕುತೂಹಲದಿಂದ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದು , ಹಲವಾರು ಮಂದಿ ಮೊಬೈಲ್‌ ಫೋನ್‌ ಮೂಲಕ ಬೆಂಕಿ ದುರಂತದ ವೀಡಿಯೊ ಚಿತ್ರೀಕರಣ ಮತ್ತು ಛಾಯಾಚಿತ್ರ ತೆಗೆಯುವ ದೃಶ್ಯ ಸಾಮಾನ್ಯವಾಗಿತ್ತು. ರಕ್ಷಣಾ ಕಾರ್ಯಕ್ಕೆ ತೊಂದರೆಯಾಗದಂತೆ ಪೊಲೀಸರು ಜನರನ್ನು ತಡೆದರು.

1 ಗಂಟೆಯ ಕಾರ್ಯಾಚರಣೆ 
ಬೆಂಕಿಯನ್ನು ಹತೋಟಿಗೆ ತರಲು ಪಾಂಡೇಶ್ವರ ಮತ್ತು ಕದ್ರಿ ಅಗ್ನಿ ಶಾಮಕ ಠಾಣೆಗಳ ಅಧಿಕಾರಿಗಳು ಮತ್ತು ಸಿಬಂದಿ ಬೆಳಗ್ಗೆ 10ಕ್ಕೆ ಆರಂಭಿಸಿದ ಕಾರ್ಯಾಚರಣೆ 11 ಗಂಟೆಯ ತನಕ ಮುಂದುವರಿಯಿತು. 3 ವಾಹನಗಳು ಮತ್ತು 27 ಮಂದಿ ಸಿಬಂದಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು. ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಗಳಾದ ಬಿ. ಶೇಖರ್‌ ಮತ್ತು ಮಹಮದ್‌ ನವಾಜ್‌ ಮಾರ್ಗದರ್ಶನ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next