Advertisement

ಘೋಡ್‌ಬಂದರ್‌ ರೋಡ್‌ ಕನ್ನಡ ಅಸೋಸಿಯೇಶನ್‌ ವಾರ್ಷಿಕೋತ್ಸವ ಸಂಭ್ರಮ

03:59 PM Feb 13, 2018 | Team Udayavani |

ಮುಂಬಯಿ: ಸ್ತ್ರೀ  ಶಕ್ತಿ ಹಾಗೂ ಯುವ ಶಕ್ತಿಗಳನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡಾಗ ಸಂಘಟನೆ ಯಾವ ರೀತಿಯಲ್ಲಿ ಬಲಿಷ್ಟವಾಗುತ್ತದೆ ಎಂಬುವುದಕ್ಕೆ ಇಲ್ಲಿ ಸೇರಿದ ಜನಸಮೂಹವೇ ಸಾಕ್ಷಿಯಾಗುತ್ತಿದೆ. ಕಠಿಣ ಶ್ರಮದ ತುಳು-ಕನ್ನಡಿಗರು ರಾಷ್ಟÅ ಕಂಡ ಅಪರೂಪದ ಸಮಾಜ ಸೇವಕರು. ಅವರ ಸಾಂಸ್ಕೃತಿಕ ಬದುಕಿನ ಮನೋಭಾವ ಮನುಕುಲದ ಶ್ರೇಯೋಭಿವೃದ್ಧಿಗೆ ಮುನ್ನುಡಿಯಾಗಿದೆ ಎಂದು ಥಾಣೆ ಮಹಾನಗರ ಪಾಲಿಕೆಯ ಮೇಯರ್‌ ಮೀನಾಕ್ಷೀ ಶಿಂಧೆ ನುಡಿದರು.

Advertisement

ಫೆ. 10 ರಂದು ಥಾಣೆ  ಪಶ್ಚಿಮದ ಹೀರಾನಂದಾನಿ ಮಿಡೋಸ್‌ನಲ್ಲಿರುವ ಡಾ| ಕಾಶೀನಾಥ್‌ ಗಾಣೇಕರ್‌ ಸಭಾಂಗಣದಲ್ಲಿ ನಡೆದ ಘೋಡ್‌ಬಂದರ್‌ ರೋಡ್‌  ಕನ್ನಡ ಅಸೋಸಿಯೇಶನ್‌ ಇದರ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಇವರು, ವಿವಿಧ ಸ್ಪರ್ಧೆಗಳ ಮೂಲಕ ಪ್ರತಿಭೆಗಳನ್ನು ಲೋಕಾರ್ಪಣೆಗೊಳಿಸುವ ಸಂಸ್ಥೆಯ ಸಾಧನೆ ಸ್ತುತ್ಯರ್ಹವಾಗಿದೆ. ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ಭಾಷಾಭಿಮಾನ ವಿಜೃಂಭಿಸಲಿ ಎಂದು ಹೇಳಿದರು.

ಥಾಣೆ  ಬಂಟ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ಕುಶಲ್‌ ಸಿ. ಭಂಡಾರಿ ಇವರು ಮಾತನಾಡಿ, ಸರ್ವವನ್ನು ಕನ್ನಡತನಕ್ಕೆ ಮೀಸಲಿಟ್ಟು, ಭಾಷೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ದಿ| ಪ್ರೊ| ಸೀತಾರಾಮ ಶೆಟ್ಟಿ ಇವರ ಹೆಸರಿನ ವೇದಿಕೆ ಅರ್ಥಪೂರ್ಣವಾಗಿದೆ. ಕನ್ನಡ ಸಂಘಗಳು ಜಾತಿಗಳ ಅಡ್ಡಗೋಡೆಗಳನ್ನು ಕೆಡವಿ ಸಮಾನ ಮನಸ್ಕರಾಗಿ ಬಾಳಬೇಕು ಎಂದು ನುಡಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರು ಮಾತನಾಡಿ, ಇಂದಿನ ಜನಾಂಗಕ್ಕೆ ಎಲ್ಲ ಅವಕಾಶಗಳನ್ನು ಕನ್ನಡ ಸಂಸ್ಥೆಗಳು ನೀಡುತ್ತಿವೆ. ಅದನ್ನು ಸದುಪಯೋಗಪಡಿಸಿಕೊಂಡು ಮುಂದುವರಿಯುವುದು ಯುವ ಪೀಳಿಗೆಯ ಜವಾಬ್ದಾರಿಯಾಗಿದೆ. ವಿಶಾಲವಾದ ಹವಾನಿಯಂತ್ರಿತ ವೇದಿಕೆಯಲ್ಲಿ ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರದರ್ಶನ ನೀಡುವ ತಾವು ಅದೃಷ್ಟವಂತರು ಎಂದರು.

ಥಾಣೆ ಬಂಟ್ಸ್‌ನ ಕೋಶಾಧಿಕಾರಿ ಭಾಸ್ಕರ್‌ ಎನ್‌. ಶೆಟ್ಟಿ ಮಾತನಾಡಿ, ಅತೀ ಪುರಾತನ ಸುಮಾರು 15 ಭಾಷೆಗಳಲ್ಲಿ ಕನ್ನಡವು ಒಂದಾಗಿದೆ. ವಿದ್ಯಾಸಂಸ್ಥೆ, ಐದು ಪ್ರಭಾವಿ ಬ್ಯಾಂಕ್‌, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳು ಇತ್ಯಾದಿಗಳನ್ನು ದೇಶಕ್ಕೆ ನೀಡಿದವರಲ್ಲಿ ಕನ್ನಡಿಗರು ಮೊದಲಿಗರು. ಕೋಮುವಾದ ಮತೀಯ ಗಲಭೆಗಳಿಂದ ದೂರವಿದ್ದು, ಶಾಂತಿ, ಸಹಬಾಳ್ವೆಯಿಂದ ಬಾಳಬೇಕು ಎಂದರು.

Advertisement

ಸಮಾರಂಭದಲ್ಲಿ ಹಿರಿಯ ಸದಸ್ಯರಾದ ಉಪಾಧ್ಯಕ್ಷ ಗೋಪಾಲ್‌ ಶೆಟ್ಟಿ ಮತ್ತು ಘೋಡ್‌ಬಂದರ್‌ ರೋಡ್‌ ಕನ್ನಡ ಅಸೋಸಿಯೇಶನ್‌ ಭಜನ ಮಂಡಳಿಯ ಸದಸ್ಯರನ್ನು ಗಣ್ಯರು ಸಮ್ಮಾನಿಸಿ ಶುಭಹಾರೈಸಿದರು.

ಕೋಶಾಧಿಕಾರಿ ಜಯ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಜತೆ ಕೋಶಾಧಿಕಾರಿ ಚಂದ್ರಶೇಖರ ಶೆಟ್ಟಿ ವರದಿ ವಾಚಿಸಿದರು. ಪದಾಧಿಕಾರಿಗಳಾದ ರವಿ ಪೂಜಾರಿ, ಕರುಣಾಕರ ಶೆಟ್ಟಿ, ಸತೀಶ್‌ ಶೆಟ್ಟಿ, ಪ್ರಶಾಂತ್‌ ನಾಯಕ್‌, ಅಶೋಕ್‌ ಮೂಲ್ಯ, ಸದಾಶಿವ ಮೊಲಿ ಅತಿಥಿಗಳನ್ನು ಗೌರವಿಸಿದರು.

ಸ್ಮಿತಾ ಶೆಣೈ, ಸುಜಾತಾ ಗೌಡ, ವಂದನಾ ಶೆಟ್ಟಿ, ಸೀಮಾ ಶೆಟ್ಟಿ ಅವರು ಪರಿಚಯಿಸಿದರು. ಜತೆ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಬೆಳುವಾಯಿ, ಮಾಯಾ ಮನೋಜ್‌ ಕುಮಾರ್‌, ಶ್ರೀನಾಥ್‌ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರತಿಭಾ ಎ. ಶೆಟ್ಟಿ ಅವರು ವಂದಿಸಿದರು.

ವೇದಿಕೆಯಲ್ಲಿ ಕಲಾಪೋಷಕ ಉದ್ಯಮಿ ಲಕ್ಷ್ಮಣ್‌ ಮಣಿಯಾಣಿ, ಕಾರ್ಯದರ್ಶಿ ಹರೀಶ್‌ ಡಿ. ಸಾಲ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿವಿಧ ತುಳು-ಕನ್ನಡಪರ ಸಂಘಟನೆಗಳಿಗೆ ಸಮೂಹ ನೃತ್ಯ ಸ್ಪರ್ಧೆ, ಸಪ್ತಸ್ವರ ಕಲಾವಿದರಿಂದ ಯುಮುನ ದಾನೆ ನಮೂನೆ ತುಳು ನಾಟಕ ಪ್ರದರ್ಶನಗೊಂಡಿತು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಬಿಡುವಿನ ಸಮಯವನ್ನು ಸಂಘಟನೆಗೆ ಮೀಸಲಾಗಿಡಬೇಕು. ಜನರು ಗುರುತಿಸುವ ಸೇವಾ ಕಾರ್ಯ ನಮ್ಮದಾಗಬೇಕು. ಇಂದಿನ ಸ್ಪರ್ಧೆಯಲ್ಲಿ ಎಲ್ಲ ಮಕ್ಕಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಸಹಕರಿಸಿದ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ, ಮಹಿಳಾ ವಿಭಾಗದವರಿಗೆ, ಯುವ ವಿಭಾಗದವರಿಗೆ ಹೃದಯಾಂತರಾಳದ ಕೃತಜ್ಞತೆಗಳು. ನಾವೆಲ್ಲರು ಭವಿಷ್ಯದಲ್ಲೂ ಒಗ್ಗಟ್ಟಿನಿಂದ ಕನ್ನಡ ನಾಡು-ನುಡಿಯ ಅಭಿವೃದ್ಧಿಯಲ್ಲಿ ತೊಡಗೋಣ. ಅದಕ್ಕಾಗಿ ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ
ವಿಕ್ರಮಾನಂದ ಶೆಟ್ಟಿ
 (ಅಧ್ಯಕ್ಷರು : ಘೋಡ್‌ಬಂದರ್‌ ರೋಡ್‌ ಕನ್ನಡ ಅಸೋಸಿಯೇಶನ್‌).

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next