ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ದೊಂಬಿ ನಡೆದಿದ್ದು , ತಿಂಗಳೊಳಗೆ ಇನ್ನೋರ್ವ ಪೊಲೀಸ್ ಸಿಬಂದಿಯನ್ನು ದೊಂಬಿಯಲ್ಲಿ ಬಲಿ ಪಡೆಯಲಾಗಿದೆ. ಶನಿವಾರ ಘಾಜಿಪುರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶ ನಡೆದ ಸ್ಥಳದಿಂದ 15 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ.
ನಿಶಾದ್ ಪಕ್ಷದ ಕಾರ್ಯಕರ್ತರು ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದ್ದು ಈ ವೇಳೆ ನಡೆದ ಭಾರೀ ಕಲ್ಲು ತೂರಾಟದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಸುರೇಶ್ ವತ್ಸ್ (48) ಅವರು ಸಾವನ್ನಪ್ಪಿದ್ದಾರೆ.
ಪ್ರಧಾನಿ ಅವರ ಕಾರ್ಯಕ್ರಮಕ್ಕೆ ಭದ್ರತೆಗಾಗಿ ವತ್ಸ್ ಅವರು ತೆರಳಿದ್ದು ವಾಪಸಾಗುತ್ತಿದ್ದ ವೇಳೆ ದೊಂಬಿ ನಡೆದಿದೆ.ಟ್ರಾಫಿಕ್ ಜಾಮ್ ಆಗಿದ್ದ ವೇಳೆ ತೂರಿ ಬಂದ ಕಲ್ಲು ತಲೆಗೆ ತಗುಲಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ಬಂಧಿಸಲಾಗಿದೆ. 31 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 60 ಜನರ ಹೆಸರನ್ನು ಎಫ್ಐಆರ್‌ನಲ್ಲಿ ಹೆಸರಿಸಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಯೋಗಿ ಆದಿತ್ಯನಾಥ್ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಹತ್ಯೆಗೀಡಾದ ಪೊಲೀಸ್ ಕಾನ್ಸ್‌ಟೇಬಲ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದಾರೆ.
ಬುಲಂದ್ ಶಹರ್‌ನಲ್ಲಿ ಗೋಹತ್ಯೆಗೆ ಸಂಬಂಧಿಸಿ ಇನ್ಸ್‌ಪೆಕ್ಟರ್ ಸುಬೋಧ್ ಕಾಂತ್ ಅವರ ಹತ್ಯೆ ನಡೆದು ತಿಂಗಳ ಒಳಗೆ ಈ ಘಟನೆ ನಡೆದಿದೆ.