ಮುಂಬಯಿ: ಘಾಟ್‌ಕೋಪರ್ ಪಶ್ಚಿಮದ ಶಿಲ್ಪಾ ಬಿಲ್ಡಿಂಗ್ ಹಿಂದಿನ ಜಗದುಶ್ ನಗರದ ಶ್ರೀ ಭವಾನಿ ಶನೀಶ್ವರ ದೇವಸ್ಥಾನದ ಶ್ರೀ ಗಣಪತಿ, ಶ್ರೀ ಭವಾನಿ ಹಾಗೂ ಶ್ರೀ ಶನೀಶ್ವರ ದೇವರ ನೂತನ ಶಿಲಾಬಿಂಬ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮತ್ತು 39 ನೇ ವಾರ್ಷಿಕ ಮಹಾಪೂಜೆಯು ಜ. 15ರಂದು ಪ್ರಾರಂಭಗೊಂಡಿದ್ದು, ಜ. 20ರವರಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.
ಜ. 18ರಂದು ಮುಂಜಾನೆ 5.30ರಿಂದ ಗಣಪತಿ ಹೋಮ, ಶ್ರೀ ಗಣಪತಿ, ಶ್ರೀ ಜೈಭವಾನಿ ಮತ್ತು ಶ್ರೀ ಶನೀಶ್ವರ ದೇವರ ಶಿಲಾಬಿಂಬ ಪುನರ್ ಪ್ರತಿಷ್ಠೆ, ಅಷ್ಟಬಂಧ ಲೇಪನ, ಬೆಳಗ್ಗೆ 9.25 ರಿಂದ ಒದಗುವ ಕುಂಭ ಲಗ್ನ ಮುಹೂರ್ತದಲ್ಲಿ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತಾಭಿಮಾನಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಸಂಜೆ 6ರಿಂದ ರಂಗಪೂಜೆ, ಸಂಜೆ 6.30ರಿಂದ ಮಂದಿರದ ಸಮೀಪದಲ್ಲಿರುವ ಶಿವಾಜಿ ಮಂದಿರದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಸ್ವರಶ್ರೀ ಪ್ರತಿಷ್ಠಾನ ಇವರಿಂದ ರಸಮಂಜರಿ ಮತ್ತು ವಿವಿಧ ವಿನೋದಾವಳಿಗಳು, ಸಮ್ಮಾನ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳು ಎಂ. ಕೆ. ಲೋಕೇಶ್ ಶಾಂತಿ ಮಂಗಳೂರು ಇವರ ನೇತೃತ್ವದಲ್ಲಿ ಜರಗಿತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್ ಬಿ. ಸಾಬ್ಳೆ, ಉಪ ಕಾರ್ಯಾಧ್ಯಕ್ಷ ಬಿ. ಕೂಸಪ್ಪ, ಸಲಹೆಗಾರ ಶೇಖರ್ ಎಸ್. ಅಮೀನ್, ಅಧ್ಯಕ್ಷ ಹರೀಶ್ ಎಸ್. ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಎಸ್. ಪೂಜಾರಿ, ಗೌರವ ಕೋಶಾಧಿಕಾರಿ ಕರುಣಾಕರ ಸಿ. ಬಂಗೇರ, ಉಪಾಧ್ಯಕ್ಷ ಅನಿಲ್ ಕೆ. ಕುಕ್ಯಾನ್, ಜತೆ ಕಾರ್ಯದರ್ಶಿ ಚೇತನ್ ವೈ. ಕರ್ಕೇರ, ಜತೆ ಕೋಶಾಧಿಕಾರಿ ಅಮಯ್ ಎ. ಮಯ್ಕರ್, ಪ್ರಧಾನ ಅರ್ಚಕ ರಮೇಶ್ ಶಾಂತಿ, ಬ್ರಹ್ಮಕಲಶೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕರು, ಕಾರ್ಯಾಧ್ಯಕ್ಷ ಬಾಬು ಬೆಳ್ಚಡ, ಉಪ ಕಾರ್ಯಾಧ್ಯಕ್ಷ ವಸಂತ ಎನ್. ಸುವರ್ಣ, ಗೌರವ ಕಾರ್ಯದರ್ಶಿ ಪ್ರಕಾಶ್ ಎಸ್. ಪೂಜಾರಿ, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಮತ್ತು ಮಂದಿರದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಜ. 16 ರಂದು ಬೆಳಗ್ಗೆ 8 ರಿಂದ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಸಂಜೆ 6 ರಿಂದ ಬಿಂಬ ಶುದ್ದಿ, ಬಿಂಬಾಧಿವಾಸ ನಡೆಯಿತು. ಜ. 17 ರಂದು ಬೆಳಗ್ಗೆ 8 ರಿಂದ ತತ್ವ ಕಲಶ, ತತ್ವ ಹೋಮಾದಿಗಳು, ಸಂಜೆ 5 ರಿಂದ ಕಲಶ ಮಂಡಲ ಪೂಜೆ, ಬ್ರಹ್ಮ ಕಲಶ ಪ್ರತಿಷ್ಠೆ, ಕಲಶಾಧಿವಾಸ ಹಾಗೂ ಅದಿವಾಸ ಹೋಮ ಜರಗಿತು.
ಜ. 19 ರಂದು ಚಂಡಿಕಾ ಹೋಮ, ಪೂರ್ಣಾಹುತಿ, ಮಹಾಪೂಜೆ, ಮಧ್ಯಾಹ್ನ 12 ರಿಂದ ಪ್ರಸಾದ ವಿತರಣೆ, ಅಪರಾಹ್ನ 2.30 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಅಪರಾಹ್ನ 4.30 ರಿಂದ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಸಂಜೆ 5 ರಿಂದ ಭಜನೆ, ರಾತ್ರಿ 7 ರಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸಂಜೆ 7.30 ರಿಂದ ಯಕ್ಷಗಾನ ತಾಳಮದ್ದಳೆಯ ರೂಪದಲ್ಲಿ ಶ್ರೀ ಶನಿಗ್ರಂಥ ಪಾರಾಯಣವು ಭವ್ಯಶ್ರೀ ಕುಲ್ಕುಂದ ಇವರ ಭಾಗವತಿಕೆಯಲ್ಲಿ ಶಶಿಧರ ರಾವ್ ಚಿತ್ರಾಪು ಹಾಗೂ ಮುಂಬಯಿಯ ಪ್ರಸಿದ್ಧ ಕಲಾವಿದರಿಂದ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿವಿಧ ಸಂಘ-ಸಂಸ್ಥೆಗಳಿಂದ ನೃತ್ಯ ವೈವಿಧ್ಯ ಜರಗಿತು. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ: ಸುಭಾಶ್ ಶಿರಿಯಾ