ಮುಂಬಯಿ: ಕನ್ನಡ ವೆಲ್ಫೇರ್ ಸೊಸೈಟಿ ಘಾಟ್‌ಕೋಪರ್ ಸಂಸ್ಥೆಯು ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯ ಸುವರ್ಣ ಮಹೋತ್ಸವದ ಯೋಜನೆ-ಯೋಚನೆಗಳಿಗೆ ತುಳು-ಕನ್ನಡಿಗರು ಸಹಕಾರ ನೀಡಬೇಕು. ಸಂಸ್ಥೆಯ ಮಾನವೀಯತೆಯ ನೆಲೆಯಲ್ಲಿ ಹಲವಾರು ಸಮಾಜಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಅಭಿಮಾನದ ಸಂಗತಿಯಾಗಿದೆ. ಸಂಸ್ಥೆಯ ಯಾವುದೇ ರೀತಿಯ ಸಮಾಜಪರ ಒಳ್ಳೆಯ ಕಾರ್ಯಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಬಾಬಾಸ್ ಗ್ರೂಪ್ ಆಫ್ ಕಂಪೆನಿಯ ಆಡಳಿತ ನಿರ್ದೇಶಕ ಮಹೇಶ್ ಎಸ್. ಶೆಟ್ಟಿ ನುಡಿದರು.
ನ. 18ರಂದು ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ವತಿಯಿಂದ ಸಂಸ್ಥೆಯ ಮಹೇಶ್ ಶೆಟ್ಟಿ ಸಭಾಗೃಹದಲ್ಲಿ ನಡೆದ ವಿಧವೆ ಯರಿಗೆ ಸಹಾಯ ಧನ ವಿತರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಸ್ಥೆಯ ಸಮಾಜಪರ ಕಾರ್ಯಗಳನ್ನು ಕಂಡಾಗ ಬಹಳ ಸಂತೋಷವಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ವಿಧವೆಯರಿಗೆ ಸಹಕರಿಸುವುದು ಉತ್ತಮ ಕಾರ್ಯವಾಗಿದೆ. ತನ್ನಿಂದಾದ ಸಹಾಯ ಧನ ಈ ಸಂಸ್ಥೆಗೆ ಸದಾಯಿದೆ ಎಂದರು.
ಕಾರ್ಯಕ್ರಮದಲ್ಲಿ ಹಲವಾರು ಮಂದಿ ತುಳು-ಕನ್ನಡಿಗ ವಿಧವೆಯರಿಗೆ ಮಹೇಶ್ ಶೆಟ್ಟಿ ಅವರು ವಿಧವಾ ವೇತನವನ್ನಿತ್ತು ಗೌರವಿಸಿದರು. ಸಭೆಯ ಅಧ್ಯಕ್ಷತೆಯನ್ನು ಕನ್ನಡ ವೆಲ್ಫೆàರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಅವರು ವಹಿಸಿ ಮಾತನಾಡಿ, ಮಹೇಶ್ ಶೆಟ್ಟಿ ಅವರಂತಹ ದಾನಿಗಳ ಸಹಕಾರದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯ ವಾಗುತ್ತಿದೆ. ಸಂಸ್ಥೆಯು ಸುವರ್ಣ ಮಹೋ ತ್ಸವದ ಸಂಭ್ರಮದಲ್ಲಿರುವುದು ನಮಗೆಲ್ಲರಿಗೂ ಸಂತೋಷದ ವಿಷಯ. ಸಂಭ್ರಮದ ಯಶಸ್ಸಿಗೆ ಎಲ್ಲರು ಒಕ್ಕೊರಲಿನಿಂದ ಸಹಕಾರ ನೀಡಬೇಕು. ಇಲ್ಲಿ ನಾವೆಲ್ಲರು ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಿದಾಗ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದರು.
ವೇದಿಕೆಯಲ್ಲಿ ಅತಿಥಿಗಳಾಗಿ ಮಹೇಶ್ ಶೆಟ್ಟಿ, ಕನ್ನಡ ವೆಲ್ಫೆàರ್ ಸೊಸೈಟಿ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಎಲ್ಲೂರು, ಗೌರವ ಕೋಶಾಧಿಕಾರಿ ಹರೀಶ್ ಶೆಟ್ಟಿ ಇನ್ನ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ ಅವರು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯದರ್ಶಿ ವೀಣಾ ಎಂ. ಶೆಟ್ಟಿ ಅವರು ಪ್ರಾರ್ಥನೆಗೈದರು. ಮಹೇಶ್ ಶೆಟ್ಟಿ ಹಾಗೂ ಇತರ ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂದಳಿಕೆ ನಾರಾಯಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಉಪಸ್ಥಿತರಿದ್ದು ಸಹಕರಿಸಿದರು.