Advertisement
ಸಾಂಪ್ರದಾಯಿಕತೆಯ ಎಲ್ಲೆಯನ್ನೂ ಮೀರದೆಯೇ ಹಲವಾರು ಹೊಸತನಗಳನ್ನು ರೂಢಿಸಿಕೊಂಡು ಜನಪ್ರಿಯರಾದ ಗಿರಿಧರ್, ನೂರಾರು ಮಹೋನ್ನತ ಕಲಾವಿದರ ಕಛೇರಿಯಲ್ಲಿ ಸಾಥ್ ನೀಡಿದವರು.
ಓದಿದ್ದು ಬಿಕಾಂ. ಪದವಿ ಮುಗಿಸಿದೆ. ಸಂಗೀತ ನನ್ನೊಳಗೇ ಆಗಲೇ ಹುಟ್ಟಿ ಬೆಳೆದುಕೊಂಡಿತ್ತು. ಸಿಎ ಫೌಂಡೇಷನ್ ಸಹ ಮುಗಿಸಿದೆ. ಅಪ್ಪನೇ ಒಂದು ದಿನ ಕರೆದು, ‘ಸಂಗೀತವನ್ನೇ ತೆಗೆದುಕೊ. ಅದೇ ನಿನ್ನನ್ನು ಕಾಯುತ್ತೆ ಎಂದರು. ಒಪ್ಪಿ, ಸ್ವೀಕರಿಸಿ, ಮುನ್ನಡೆದೆ. ಇಂದು ಕಲಾವಿದನಾಗಿದ್ದೇನೆ. ಸಾಮಾನ್ಯವಾಗಿ ಸನ್ನಿವೇಶ ಉಲ್ಟಾ ಪಲ್ಟಾ ಇರುತ್ತದೆ. ಎಷ್ಟೋ ಮಂದಿಯ ಅಪ್ಪಂದಿರು, ‘ಅವೆಲ್ಲ (ನಿಗದಿತ ರೀತಿಯ ಉದ್ಯೋಗ ನೀಡುವ ಪದವಿಯನ್ನು ಹೊರತುಪಡಿಸಿ) ಕೆಲಸಕ್ಕೆ ಬರುವುದಿಲ್ಲ ಎನ್ನುತ್ತಾರೆ. ಅಂಥದ್ದರಲ್ಲಿ ಸಂಗೀತವನ್ನೇ ನಂಬಿ ಹೋಗು ಎಂದಾಗ ಯಾಕೆ ಸುಮ್ಮನಿರಬೇಕು. ನಿಜಕ್ಕೂ ಅದು ನನ್ನ ಅದೃಷ್ಟ. ಯಾರೂ ಏನೂ ಹೇಳಲಿಲ್ಲ. ಒಂದುವೇಳೆ ಹೇಳಿದರೂ ಅಪ್ಪನೇ ಒಪ್ಪಿಗೆ ನೀಡಿದ ಮೇಲೆ ಇನ್ನೇನು? ಸಂಗೀತವೇ ದೊಡ್ಡ ಸಾಗರ. ಕಷ್ಟ ಇರುತ್ತದೆ ನಿಜ. ಎಲ್ಲದರಲ್ಲೂ ಕಷ್ಟ ಪಡಲೇಬೇಕು. ಕೆಲವದ್ದರಲ್ಲಿ ಸ್ವಲ್ಪ ಹೆಚ್ಚು., ಇನ್ನು ಕೆಲವದ್ದರಲ್ಲಿ ಸ್ವಲ್ಪ ಕಡಿಮೆ. ನಮ್ಮ ಆಸಕ್ತಿಯೇ ಎಲ್ಲವನ್ನೂ ಮುನ್ನಡೆಸಬೇಕು, ಮುನ್ನಡೆಸುತ್ತದೆ.
Related Articles
Advertisement
ಸಂಗೀತದ ಮೇಲೆ ಒಲವು ಹೆಚ್ಚಿದ್ದು ಹೇಗೆ ?ಮನೆಯಲ್ಲಿ ಆಗಲೇ ಸಂಗೀತದ ವಾತಾವರಣವಿತ್ತು. ನನ್ನಪ್ಪನೂ ಸಂಗೀತ ಕಲಾವಿದರಾದ ಕಾರಣ, ನಿತ್ಯವೂ ಸಂಗೀತ ಪಾಠ ನಡೆಯುತ್ತಿತ್ತು. ಅದನ್ನೂ ಕೇಳುತ್ತಿದ್ದೆ. ಹಾಗೆಯೇ ಸಂಗೀತ ಅಕ್ಷರಗಳು ಮೂಡತೊಡಗಿದವು. ನಾನು ಅಕ್ಷರ ಕಲಿಯುವ ಮೊದಲೇ ಸಂಗೀತದ ಭಾಷೆಯನ್ನು ಕಲಿಯತೊಡಗಿದ್ದೆ ಎಂದರೆ ತಪ್ಪಾಗಲಾರದು. ನಾಲ್ಕು ವರ್ಷಕ್ಕೆ ಸಂಗೀತ ಪಾಠ ಕಲಿಯತೊಡಗಿದೆ. ಒಂಬತ್ತನೇ ವಯಸ್ಸಿಗೆ ನನ್ನದು ಮೊದಲ ಸಂಗೀತ ಕಛೇರಿ. ಶಾಲೆ ಮತ್ತು ಸಂಗೀತ ಕಛೇರಿಯ ಅನುಭವ ಎರಡೂ ಒಟ್ಟೊಟ್ಟಿಗೇ ಸಾಗುತ್ತಿತ್ತು. ಇದು ಒಲವು ಇಲ್ಲದೇ ಆಗದು ಎಂಬುದು ನನ್ನ ಅನಿಸಿಕೆ. ಇದರರ್ಥ ಪ್ರವೃತ್ತಿಯನ್ನು ವೃತ್ತಿಯಾಗಿಸಿಕೊಳ್ಳಲು ಅವಕಾಶವಿದೆ ಎಂದಾಯಿತು?
ಖಂಡಿತಾ ಇದೆ. ಆದರೆ ತುಸು ಕಷ್ಟ. ಮತ್ತೆ ಹೇಳುವುದಾದರೆ, ಆಸಕ್ತಿಯೇ ಪ್ರಥಮ ಸಂಗತಿ. ನನ್ನ ವಿಷಯದಲ್ಲಿ ಹೇಳುವುದಾದರೆ ಇನ್ನೂ ಕೊಂಚ ಕಷ್ಟವೆನ್ನಬಹುದು. ನಾನು ಆರಿಸಿಕೊಂಡ ವಾದ್ಯ ಘಟಂ. ಈಗ ಎಲ್ಲೆಡೆಯೂ ಜನಪ್ರಿಯವಾಗಿದೆ. ಆಗ ಮಹೋನ್ನತ ಕಲಾವಿದರು ಅದನ್ನು ಜನಪ್ರಿಯಗೊಳಿಸಿದ್ದರು. ಆದರೂ ಗಾಯನ, ಪಿಟೀಲು, ಮೃದಂಗ, ಬಳಿಕ ಕೊನೆ ಸ್ಥಾನ ಘಟಂ ಗೆ ಎನ್ನುವಂತಿತ್ತು. ನಮ್ಮ ಹಿರಿಯ ಕಲಾವಿದರ ತ್ಯಾಗ ಹಾಗೂ ಪರಿಶ್ರಮದಿಂದ ಅದಕ್ಕೀಗ ಒಂದು ಸ್ಥಾನ ಸಿಕ್ಕಿದೆ. ಹಾಗೆ ಹೇಳುವುದಾದರೆ ಈಗ ಘಟಂ ಬಗ್ಗೆ ಪರಿಚಯಿಸುವ ಅಗತ್ಯವಿಲ್ಲ. ನಾನೂ ಇದನ್ನೇ ವೃತ್ತಿಯಾಗಿ ಸ್ವೀಕರಿಸಲು ಮನಸ್ಸು ಮಾಡಿದಾಗ ಕೊಂಚ ಭಯವಿತ್ತು. ಆರ್ಥಿಕವಾಗಿ ಯಶಸ್ಸು ಸಿಕ್ಕೀತೆಂಬ ಆತಂಕ. ಆದರೆ ತಂದೆಯವರೇ ಧೈರ್ಯ ತುಂಬಿದರು. ಒಳ್ಳೆಯದಾಗುತ್ತದೆ ಎಂದು ಹಾರೈಸಿದರು. ಅಲ್ಲಿಂದ ನಾನು ಹಿಂದೆ ತಿರುಗಿ ನೋಡಲಿಲ್ಲ. ಪ್ರವೃತ್ತಿಯನ್ನೇ ವೃತ್ತಿಯಾಗಿ ತೆಗೆದುಕೊಳ್ಳುವುದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಯಾಕೆಂದರೆ, ಎರಡನ್ನೂ ಸ್ವೀಕರಿಸುವ ಮನಸ್ಥಿತಿ ನಮ್ಮದಾಗಿದ್ದರೆ ಯಾವುದೇ ಸಮಸ್ಯೆಯಾಗದು. ಪ್ರತಿಯೊಂದನ್ನೂ ಸವಾಲುಗಳಾಗಿ ಸ್ವೀಕರಿಸಿದರೆ ಮಾತ್ರ ಸಾಧ್ಯ. ಈಗ ನಾನು ನನ್ನ ವಯಸ್ಸಿನಲ್ಲಿ ಕಷ್ಟಪಟ್ಟಷ್ಟು ಪಡಬೇಕಿಲ್ಲ. ಸೌಲಭ್ಯಗಳೂ ಬಂದಿವೆ, ಸೌಕರ್ಯಗಳೂ ಬಂದಿವೆ. ಸವಾಲುಗಳನ್ನು ಸ್ವೀಕರಿಸುತ್ತಾ ಮುನ್ನುಗ್ಗಬೇಕು. ಸವಾಲುಗಳನ್ನು ಕಂಡು ಬೇಸರಿಸಿದರೆ ಪ್ರಯೋಜನವಾಗದು. ನಾವು ಮಾಡುವುದರಲ್ಲಿ ಖುಷಿ ಪಡುವುದನ್ನು ಕಲಿತರೆ, ಅದು ನಮ್ಮನ್ನು ಗುರಿಯತ್ತ ಕೊಂಡೊಯ್ಯತ್ತದೆ. ನನಗೆ ಸಂಗೀತ ಕಛೇರಿಯಲ್ಲಿ ಸಿಗುವ ಖುಷಿ, ಸಂತೃಪ್ತಿ ಎಲ್ಲಿಯೂ ಸಿಗದು. ಅದಕ್ಕಿಂತ ದೊಡ್ಡದೇನೂ ಇಲ್ಲ. ಇಂದಿಗೂ ಕಛೇರಿ ಮುಗಿಸಿ ಬಂದ ಮೇಲೂ ನನ್ನಲ್ಲಿರುವ ಎನರ್ಜಿ ಕಂಡರೆ ಎಲ್ಲವೂ ಸಾಧ್ಯ ಎನಿಸುತ್ತದೆ.
ನನಗೆ ಹಾಗೆ ಎನಿಸುವುದಿಲ್ಲ. ಪ್ರಸಿದ್ಧಿ ಮತ್ತು ಜನಪ್ರಿಯತೆ ಬರುವುದೂ ಅವಕಾಶಗಳು ಸಿಕ್ಕಾಗಲೇ ತಾನೇ. ಅವಕಾಶಗಳನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು. ಎಲ್ಲದಕ್ಕೂ ಮೂಲ ಎಂದರೆ ಸಾಧನೆಯೇ ಮುಖ್ಯ. ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಪುಟ್ಟ ವಿಡಿಯೋ ಹಾಕಿದ ಕೂಡಲೇ ಒಂದು ಸಾವಿರ ಲೈಕ್ಸ್ ಸಿಗಬಹುದು. ಆದರೆ ನಿಜದ ಸಾಧನೆ ಮತ್ತು ಸಾಮರ್ಥಯ ಇರುವುದು ಮೂರು ಗಂಟೆ ನಿಜವಾದ ಕಛೇರಿಯನ್ನು ಸಭಿಕರೆದುರು ಪ್ರಸ್ತುಪಡಿಸಿದಾಗ. ಅದೇ ನೈಜ ಸಾಮರ್ಥಯ. ಒಬ್ಬ ಕಲಾವಿದನಿಗೆ ಅದೇ ಮುಖ್ಯ. ಎರಡು-ಮೂರು ವಿಡಿಯೋ ಹಾಕಿ ರಾತ್ರೋರಾತ್ರಿ ಹೀರೋ ಆಗಿಬಿಡಬಹುದು. ಆದರೆ ಅದು ಸದಾ ನಮ್ಮನ್ನು ಕಾಯದು. ಸಾಮಾಜಿಕ ಮಾಧ್ಯಮ ನಿಜಕ್ಕೂ ಒಳ್ಳೆಯದೇ. ಅದನ್ನು ಪ್ರೇರಣೆಯ ನೆಲೆಯಲ್ಲಿ ಬಳಸಿಕೊಂಡರೆ ಪರವಾಗಿಲ್ಲ. ಆದರೆ ಅದೇ ಎಲ್ಲವೂ ಅಲ್ಲ.
ಕಲಾವಿದರಿಗೆ ಕಛೇರಿಯಲ್ಲಿ ಆಸ್ವಾದಕರಿಂದ/ಪ್ರೇಕ್ಷಕರಿಂದ ಸಿಗುವ ಚಪ್ಪಾಳೆಗಿಂತ ದೊಡ್ಡದು ಯಾವುದೂ ಇಲ್ಲ. ಸೋಷಿಯಲ್ ಮೀಡಿಯಾ ಬಳಸಿಕೊಳ್ಳುವ ಬಗೆ ಹೇಗೆ
ಸಾಮಾಜಿಕ ಮಾಧ್ಯಮ ಕ್ಷಿಪ್ರಗತಿಯಲ್ಲಿ ಜನರನ್ನು ತಲುಪುವ ಮಾಧ್ಯಮ. ಹಾಗಾಗಿ ಮಾಹಿತಿ ಹಂಚಿಕೊಳ್ಳಲು, ಒಳ್ಳೆಯ ಸಂಗತಿಯನ್ನು ಪ್ರಸಾರಿಸಲು ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ. ನಾನೂ ಸಹ ಈ ಉದ್ದೇಶಗಳಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತೇನೆ. ಮುಂದಿನ ದಿನಗಳಲ್ಲಿ ಸಂಗೀತ ಕ್ಷೇತ್ರದಲ್ಲೂ ಡಿಜಿಟಲ್ ಟ್ರಾನ್ಸ್ ಫಾರ್ಮೆಷನ್ ಹೇಗೆ ನಿರೀಕ್ಷಿಸುತ್ತೀರಿ?
ನಿಮ್ಮ ಅರ್ಥದಲ್ಲಿ ವರ್ಚುಯಲ್ ಕಛೇರಿಗಳೇ ಬರುತ್ತವೆ ಎಂಬುದೇ? ಹಾಗೇನೂ ಇಲ್ಲ. ಲೈವ್ ಕಛೇರಿಗಳೂ ಇರುತ್ತವೆ, ವರ್ಚುಯಲ್ ಸಹ ಇರುತ್ತದೆ. ನನಗೆ, ವೈಯಕ್ತಿಕವಾಗಿ ಹೇಳುವುದಾದರೆ ಲೈವ್ ಕಛೇರಿಯಲ್ಲೇ ಹೆಚ್ಚು ಖುಷಿ ಸಿಗೋದು. ಹಾಗೆಂದು ಕೋವಿಡ್ ಸಂದರ್ಭದಲ್ಲಿ ಸಂಗೀತ ರಸಿಕರನ್ನು ತಲುಪುವುದೇ ಕಷ್ಟವಾಗಿತ್ತು. ಆಗ ವರ್ಚುಯಲ್ ಅನಿವಾರ್ಯವಾಗಿತ್ತು. ಈಗಲೂ ಇದು ನಡೆಯುತ್ತಿದೆ. ಮುಂದೆಯೂ ಎರಡೂ ಇರುತ್ತದೆ. ಆಯ್ಕೆ ರಸಿಕರದ್ದೇ.
ಹಿರಿಯರಿಂದ ಕಲಿಯಬೇಕಾದದ್ದು ಒಂದೇ-ಹೇಗೆ ನಮ್ಮನ್ನು ನಾವು ಅಹಂಕಾರದಿಂದ ಕಾಪಾಡಿಕೊಳ್ಳಬಹುದೆಂಬುದನ್ನು ಅವರಿಂದಲೇ ಕಲಿಯಬೇಕು. ಎಂಥೆಂಥ ಮಹೋನ್ನತ ಕಲಾವಿದರೂ ಸಹ ನಡೆದುಕೊಳ್ಳುವ ಮಾದರಿ ಕಂಡರೆ ಆಚ್ಚರಿ ಆಗುತ್ತದೆ. ನಾನು ಹಿರಿಯರೊಂದಿಗೆ ನುಡಿಸಿ ಕಲಿತಿರುವುದು ಇಷ್ಟೇ- ಎಲ್ಲಿ, ಎಷ್ಟು ಮತ್ತು ಏನು ಮಾತನಾಡಬೇಕು, ಹೇಗೆ ಇರಬೇಕು, ಎಲ್ಲರೊಂದಿಗೆ ಹೇಗೆ ಸಹಕಾರ ಮನೋಭಾವದಿಂದ ಬದುಕಬೇಕು-ಇತ್ಯಾದಿ. ಈ ಔಚಿತ್ಯ ಪ್ರಜೆಯನ್ನು ಕಲಿತದ್ದು ಅವರಿಂದಲೇ. ಇನ್ನೊಬ್ಬರ ಬಗ್ಗೆ ಆಡುವುದು ಖಂಡಿತಾ ದೊಡ್ಡ ಸಂಗತಿಯೇನೂ ಅಲ್ಲ. ಅದು ನಮ್ಮ ಅವಗುಣವನ್ನು ಜಗಜ್ಜಾಹೀರು ಮಾಡುತ್ತದಷ್ಟೇ. ಹಾಗಾಗಿ ಮರವೊಂದು ಎಷ್ಟು ಎತ್ತರಕ್ಕೆ ಬೆಳೆದರೂ ತನ್ನ ಬೇರುಗಳನ್ನು ಹೇಗೆ ಭೂಮಿಯಲ್ಲೇ ನೆಟ್ಟಿರುತ್ತದೆಯೋ ನಾವು ಹಾಗೆಯೇ ಇರಬೇಕೆಂಬುದನ್ನು ಕಲಿತದ್ದು ಹಿರಿಯರಿಂದಲೇ. ಬಹಳ ಬೇಸರವಾದಾಗ ಏನು ಮಾಡಬೇಕು?
ಇಪ್ಪತ್ತನಾಲ್ಕು ಗಂಟೆ ನಾವು ಸುಮ್ಮನಿದ್ದು ಬಿಡಿ. ಎಲ್ಲವೂ ಸರಿಯಾಗುತ್ತದೆ. ತಾಳ್ಮೆಯೇ ಮುಖ್ಯ. ನನಗೂ ಕೋಪ ಬಂದಾಗ, ಬೇಸರವಾದಾಗ ಇದನ್ನೇ ಮಾಡುವುದು. ಕೆಟ್ಟ ಪರಿಸ್ಥಿತಿಯಲ್ಲೂ ನಮ್ಮನ್ನು ಕಾಯುವುದು ತಾಳ್ಮೆಯೇ ಹೊರತು ಬೇರೇನೂ ಅಲ್ಲ. ಇದೇ ಸೂತ್ರ. ಸಂಕುಚಿತತೆ ಕಲಾವಿದನ ಬೆಳವಣಿಗೆಗೆ ತೊಂದರೆ ಆಗುವುದಿಲ್ಲವೇ?
ನಿಜ. ಆಗುತ್ತದೆ. ಆದರೆ ನಾನು ಸದಾ ಪಾಸಿಟಿವ್ ಆಗಿರಲು ಪ್ರಯತ್ನಿಸುವವ. ಹಾಗಾಗಿ ಪಾಸಿಟಿವ್ ಎನರ್ಜಿ ಎಲ್ಲಿದೆಯೋ ಅತ್ತ ನನ್ನ ಒಲವು. ನಾನು ಎಲ್ಲಿರುತ್ತೇನೋ ಅಲ್ಲಿ ಪಾಸಿಟಿವ್ ಎನರ್ಜಿ ಇರುತ್ತದೆ ಎಂಬುದು ನನ್ನ ನಂಬಿಕೆಯೂ ಸಹ. ಇದರರ್ಥ, ಮೊದಲು ನಾವು ಪಾಸಿಟಿವ್ ಆಗಿರಬೇಕು. ಆಗ ನಮಗೆ ಅಂಥದ್ದರ ಸಂಪರ್ಕವೇ ಆಗುತ್ತದೆ. ಎಲ್ಲರಲ್ಲೂ ಇರುವ ಪಾಸಿಟಿವ್ ಎನರ್ಜಿಯನ್ನು ಪಡೆದುಕೊಳ್ಳುತ್ತಾ ನಾನು ಬೆಳೆಯುತ್ತೇನೆ. ಅದೇ ಬದುಕೂ ಸಹ. ಎಲ್ಲ ಬಗೆಯ ಸಮಸ್ಯೆಗಳಿಗೂ ನಮ್ಮೊಳಗಿನ ಧನಾತ್ಮಕ ಆಲೋಚನೆಯೇ ಸರಿಯಾದ ಪರಿಹಾರ, ಉತ್ತರ.