ನವಿಮುಂಬಯಿ: ತುಳುನಾಡಿನವರು ಹೃದಯವಂತರು. ಇನ್ನೊಬ್ಬರ ಕಷ್ಟ-ಕಾರ್ಪಣ್ಯಗಳಿಗೆ ಸಹಕರಿಸುವ ಅವರ ಗುಣ, ಮಾನವೀಯತೆಯನ್ನು ಕಂಡಾಗ ಸಂತೋಷವಾಗುತ್ತಿದೆ. ಘನ್ಸೋಲಿ ಕ್ಷೇತ್ರಕ್ಕೆ ಆಗಮಿಸಿದಾಗ ಊರಿನ ದೇವಾಲಯಕ್ಕೆ ಬಂದ ಅನುಭವವಾಗುತ್ತದೆ. ಕಲಿಯುಗದ ಕಾಮಧೇನು ಶ್ರೀ ಗುರು ರಾಘವೇಂದ್ರ ಸ್ವಾಮೀಜಿ ಅವರು ನಂಬಿದವರನ್ನು ಕೈಬಿಟ್ಟವರಲ್ಲ. ಅವರು ಕಾರಣಿಕ ಪುರುಷರೂ ಹೌದು. ಪ್ರತಿಯೊಬ್ಬರೂ ಜೀನದಲ್ಲಿ ಒಮ್ಮೆಯಾದರೂ ಮಂತ್ರಾಲಯಕ್ಕೆ ಆಗಮಿಸಿ ವೃಂದಾವನದ ಶ್ರೀಗಳ ದರ್ಶನ ಪಡೆದು ಪುನೀತರಾಗಬೇಕು. ಇಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ನೆರೆದಿರುವ ಭಕ್ತಾದಿಗಳನ್ನು ಕಂಡಾಗ ಸಂತೋಷವಾಗುತ್ತಿದೆ. ರಾಘವೇಂದ್ರ ಸ್ವಾಮಿಗಳ ಅನುಗ್ರಹ, ಘನ್ಸೋಲಿಯ ಶ್ರೀ ಮೂಕಾಂಬಿಕೆಯ ಅನುಗ್ರಹ ನಿಮ್ಮೆಲ್ಲರ ಮೇಲೆ ಸದಾಯಿರಲಿ ಎಂದು ಶ್ರೀ ಗುರು ರಾಘವೇಂದ್ರ ಮಠ ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿಗಳು ನುಡಿದರು.
ಮಾ. 23ರಂದು ಪೂರ್ವಾಹ್ನ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆಗೈದು ಉಪಸ್ಥಿತರಿದ್ದ ಸಾವಿರಾರು ಭಕ್ತಾದಿಗಳನ್ನು ಆಶೀರ್ವದಿಸಿದ ಅವರು, ಮಕ್ಕಳಿಗೆ ಸಂಸ್ಕಾರವನ್ನು ಎಳವೆಯಿಂದಲೆ ನೀಡಲು ಮುಂದಾಗಬೇಕು. ಧಾರ್ಮಿಕ ಚಿಂತನೆಗಳು ಮಕ್ಕಳನ್ನು ಆದರ್ಶಪ್ರಜೆಗಳನ್ನಾಗಿ ರೂಪಿಸುತ್ತವೆ. ಘನ್ಸೋಲಿ ಕ್ಷೇತ್ರವು ಕಾರಣಿಕ ಕ್ಷೇತ್ರವಾಗಿದ್ದು, ಇಲ್ಲಿಗೆ ಬಂದಾಗ ಅದು ಅನುಭವಕ್ಕೆ ಬರುತ್ತದೆ. ನಿಮ್ಮೆಲ್ಲರ ಗೌರವ, ಪ್ರೀತ್ಯಾದರಗಳಿಗೆ ಋಣಿಯಾಗಿದ್ದೇನೆ. ಮಂತ್ರಾಲಯ ದರ್ಶನ ಭಾಗ್ಯ ನಿಮಗೆಲ್ಲರಿಗೂ ಲಭಿಸುವಂತಾಗಲಿ ಎಂದು ಹಾರೈಸಿದರು.
ಶ್ರೀಗಳು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಮಹಾ ಮಂಗಳಾರತಿಗೈದರು. ಅನಂತರ ಶ್ರೀಮಾನ್ ಮಧ್ವಾಚಾರ್ಯ ಮೂಲರಾಮ ದೇವರ ಸಂಸ್ಥಾನ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಶ್ರೀಗಳನ್ನು ದೇವಸ್ಥಾನದ ಆಡಳಿತ ಸಮಿತಿಯ ವತಿಯಿಂದ ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು.
ಮಂದಿರದ ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ ನಂದಿಕೂರು ಮತ್ತು ಕೆ. ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಗೌರವ ಕೋಶಾಧಿಕಾರಿ ಶೇಖರ್ ವಿ. ದೇವಾಡಿಗ, ಜತೆ ಕೋಶಾಧಿಕಾರಿ ಚಂದ್ರಹಾಸ ಪಿ. ಶೆಟ್ಟಿ ದೆಪ್ಪುಣಿಗುತ್ತು, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಘು ಆರ್. ಕೋಟ್ಯಾನ್, ಕುಟ್ಟಿ ಎ. ಕುಂದರ್, ಸುಧಾಕರ ಸಿ. ಪೂಜಾರಿ, ಶಂಕರ ಮೊಲಿ, ವಿಶ್ವನಾಥ ಎಸ್. ಶೆಟ್ಟಿ, ಅಣ್ಣು ಎಂ. ಶೆಟ್ಟಿ, ಮಹಾಬಲ ಟಿ. ಶೆಟ್ಟಿ, ಹರೀಶ್ ಶೆಟ್ಟಿ ಪಡುಬಿದ್ರೆ, ಹರೀಶ್ ಶೆಟ್ಟಿ ಕುರ್ಕಾಲ್, ಹರೀಶ್ ಆರ್. ಶೆಟ್ಟಿ ನಲ್ಲೂರು, ಶಕುಂತಳಾ ಎಸ್. ಶೆಟ್ಟಿ, ಶ್ರೀ ಮೂಕಾಂಬಿಕಾ ಚಾರಿಟೆಬಲ್ ಮಂಡಳ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ, ಉಪ ಸಮಿತಿಗಳ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯ ಬಾಂಧವರ ನೇತೃತ್ವದಲ್ಲಿ ಕಾರ್ಯಕ್ರಮವು ಜರಗಿತು. ಮಂದಿರದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ಶ್ರೀ ಶನೀಶ್ವರ ಮಂದಿರ ನೆರೂಲ್ ಅಧ್ಯಕ್ಷ, ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಉದ್ಯಮಿ ಶ್ಯಾಮ್ ಎನ್. ಶೆಟ್ಟಿ, ಕಿಶೋರ್ ಶೆಟ್ಟಿ, ಉದ್ಯಮಿ ಮನೋಹರ ಎ. ಶೆಟ್ಟಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳ ಅನುಗ್ರಹ ಪಡೆದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀಗಳ ಅನುಗ್ರಹಕ್ಕೆ ಪಾತ್ರರಾದರು.
ಚಿತ್ರ-ವರದಿ : ಸುಭಾಷ್ ಶಿರಿಯಾ