ನವಿಮುಂಬಯಿ: ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಆರೋಗ್ಯ ಸಿಗುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಆಕರ್ಷಿಸಲ್ಪಡುವ ಕಲೆ ಎಂದರೆ ಅದು ಕ್ರೀಡೆ. ಇಂತಹ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ದೇಹಕ್ಕೆ ಉಲ್ಲಾಸ ಸಿಗುತ್ತದೆ. ಕ್ರೀಡೆಯನ್ನು ಜಗತ್ತಿನಾದ್ಯಂತ ನಡೆಸುತ್ತಾರೆ. ಕ್ರೀಡೆಯಲ್ಲಿ ಭಾಗವಹಿಸಲು ಸಣ್ಣ ಮಕ್ಕಳಿಗೆ ನಾವು ಪ್ರೋತ್ಸಾಹ ನೀಡಬೇಕು. ಆಟೋಟ ಸ್ಪರ್ಧೆ ಎಂಬುದು ಶಿಕ್ಷಣದ ಒಂದು ಅವಿಭಾಜ್ಯ ಅಂಗವಾಗಿದೆ. ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮದ ಜತೆಗೆ ಕಳೆದ 9 ವರ್ಷಗಳಿಂದ ಆಟೋಟ ಸ್ಪರ್ಧೆಗಳನ್ನು ನಡೆಸಿ, ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ನುಡಿದರು.
ಫೆ. 12ರಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಹೋರಾಂಗಣದಲ್ಲಿ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಳದ ವತಿಯಿಂದ ನಡೆದ 9ನೇ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾತನಾಡಿದ ಅವರು, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ನಮ್ಮಲ್ಲಿ ಪ್ರೀತಿ, ಬಾಂಧವ್ಯ ಬೆಳೆಯುತ್ತದೆ. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಇದ್ದದ್ದೆ, ಆದ್ದರಿಂದ ಭಾಗವಹಿಸುವುದು ಬಹಳ ಮುಖ್ಯ. ನಿಮಗೆಲ್ಲರಿಗೂ ತಾಯಿ ಮೂಕಾಂಬಿಕೆಯ ಅನುಗ್ರಹ ಸದಾಯಿರಲಿ ಎಂದರು.
ವೇದಿಕೆಯಲ್ಲಿ ಮಂಡಳದ ಉಪಾಧ್ಯಕ್ಷರಾದ ಸುರೇಶ್ ಎಸ್. ಕೋಟ್ಯಾನ್, ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ, ಕಾರ್ಯದರ್ಶಿ ಶಂಕರ್ ಮೊಲಿ, ಜತೆ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡುಬಿದ್ರೆ, ಕೋಶಾಧಿಕಾರಿ ಹರೀಶ್ ಶೆಟ್ಟಿ ನಲ್ಲೂರು, ಟ್ರಸ್ಟಿನ ಕೋಶಾಧಿಕಾರಿ ಶೇಖರ್ ವಿ. ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಲತಾ ಎಸ್. ಶೆಟ್ಟಿ ಅವರು ಉಪಸ್ಥಿತರಿದ್ದರು. ಮಹಿಳಾ ಮಂಡಳಿಯ ಸದಸ್ಯೆಯರು ಪ್ರಾರ್ಥನೆಗೈದರು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿ ಸಿದರು. ಕ್ರೀಡೆ ಯಲ್ಲಿ ರೆಫ್ರಿಗಳಾಗಿ ರಿತೇಶ್ ಬಿ. ಶೆಟ್ಟಿ ಮತ್ತು ರಾಕೇಶ್ ಬಿ. ಶೆಟ್ಟಿ ಅವರನ್ನು ಗೌರವಿಸಲಾಯಿತು.
ಸುರೇಶ್ ಕೋಟ್ಯಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಸೇವೆಗೈಯಲು ನಾವು 2004ರಲ್ಲಿ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಳ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮುಖಾಂತರ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಸೇವೆ ಮಾಡುತ್ತಿದ್ದೇವೆ. ಕಳೆದ 9 ವರ್ಷಗಳಿಂದ ಕ್ರೀಡೆಗೂ ಪ್ರೋತ್ಸಾಹ ನೀಡುತ್ತಿದ್ದು, ಪ್ರತೀ ವರ್ಷ ಕ್ರೀಡಾಕೂಟವನ್ನು ಆಯೋಜಿಸುತ್ತಾ ಇದ್ದೇವೆ. ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನಿಮಗೆಲ್ಲರಿಗೂ ದೇವಿಯ ಅನುಗ್ರಹ ಸದಾಯಿರಲಿ ಎಂದರು.
ಹರೀಶ್ ಶೆಟ್ಟಿ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಶೆಟ್ಟಿ ನಲ್ಲೂರು ವಂದಿಸಿದರು. ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಬಲೂನ್ ಹಾರಿಸಿ ಕ್ರೀಡೆಗಳಿಗೆ ಚಾಲನೆ ನೀಡಿದರು. ಶೇಖರ್ ವಿ. ದೇವಾಡಿಗ, ಶಂಕರ್ ಮೊಯಿಲಿ, ಧೀರಜ್ ಶೆಟ್ಟಿ ಹಾಗೂ ಇನ್ನಿತರರ ಮೇಲ್ವಿಚಾರಣೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಕ್ರೀಡಾಕೂಟದ ಯಶಸ್ಸಿಗಾಗಿ ಮಂಡಳದ ಸದಸ್ಯರ ಜತೆಗೆ ಶ್ರೀ ಸಂತೋಷಿ ಮಾತಾ ದೇವಾಲಯ ಟ್ರಸ್ಟ್, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ, ಉಪಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಸಹಕರಿಸಿದರು. ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ದೇವಾಲಯದ ವತಿಯಿಂದ ಉಪಾಹಾರ, ಮಧ್ಯಾಹ್ನ ಭೋಜನ, ಸಂಜೆ ಫಲಾಹಾರದ ಹಾಗೂ ರಾಜೇಶ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಪಾನಕದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.