Advertisement

ಘಾನಾ-ಮಾಲಿ: ಆಲ್‌ ಆಫ್ರಿಕನ್‌ ಫೈಟ್‌

12:08 PM Oct 21, 2017 | |

ಗುವಾಹಟಿ/ಗೋವಾ: ಅಂಡರ್‌-17 ವಿಶ್ವಕಪ್‌ ಫ‌ುಟ್ಬಾಲ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಶನಿವಾರ ಆರಂಭವಾಗಲಿವೆ. ಗುವಾಹಟಿಯಲ್ಲಿ ಸಂಜೆ 5 ಗಂಟೆಗೆ ನಡೆಯುವುದು “ಆಲ್‌ ಆಫ್ರಿಕನ್‌ ಫೈಟ್‌’. ಇಲ್ಲಿ ಘಾನಾ ಮತ್ತು ಮಾಲಿ ತಂಡಗಳು ಪರಸ್ಪರ ಎದುರಾಗಲಿವೆ. ರಾತ್ರಿ 8 ಗಂಟೆಗೆ ಗೋವಾದಲ್ಲಿ ಇಂಗ್ಲೆಂಡ್‌ ಮತ್ತು ಅಮೆರಿಕ ನಡುವೆ ದೊಡ್ಡ ಹೋರಾಟವೊಂದು ನಡೆಯುವ ಸಾಧ್ಯತೆ ದಟ್ಟವಾಗಿದೆ.

Advertisement

ಘಾನಾ ಮತ್ತು ಮಾಲಿ ತಂಡಗಳ ಆಟದ ಶೈಲಿ, ತಂತ್ರಗಾರಿಕೆಯಲ್ಲಿ ಭಾರೀ ವ್ಯತ್ಯಾಸವೇನೂ ಕಂಡುಬರದು. ಎರಡೂ ತಂಡಗಳು ಆಫ್ರಿಕನ್‌ ಶೈಲಿಗೆ ಒತ್ತು ನೀಡುವುದರಿಂದ ಸಮಬಲದ ಹೋರಾಟ ನಡೆದೀತೆಂಬುದೊಂದು ನಿರೀಕ್ಷೆ. 

2 ಬಾರಿಯ ಚಾಂಪಿಯನ್‌ ಎಂಬ ಹೆಗ್ಗಳಿಕೆ ಘಾನಾದ್ದಾದರೂ ಅದು ಕೊನೆಯ ಸಲ ಪ್ರಶಸ್ತಿ ಎತ್ತಿದ್ದು 1995ರಷ್ಟು ಹಿಂದೆ. ಈಗಿನ ಸಾಮ್ಯುಯೆಲ್‌ ಫ್ಯಾಬಿನ್‌ ಮಾರ್ಗದರ್ಶನದ ತಂಡದ ಹೆಚ್ಚುಗಾರಿಕೆಯೆಂದರೆ ಸುದೃಢ ರಕ್ಷಣಾ ವಿಭಾಗ. ಲೀಗ್‌ ಹಂತದಲ್ಲಿ ಅಗ್ರಸ್ಥಾನಿ ಎನಿಸುವಲ್ಲಿ ಡಿಫೆನ್ಸ್‌ ವಿಭಾಗವೇ ಪ್ರಮುಖ ಪಾತ್ರ ವಹಿಸಿತ್ತು. ಪ್ರೀ-ಕ್ವಾರ್ಟರ್‌ ಫೈನಲ್‌ನಲ್ಲಿ ಘಾನಾ ನೂತನ ತಂಡವಾದ ನೈಗರ್‌ಗೆ 2-0 ಸೋಲುಣಿಸಿದೆ. 

ಅಂಡರ್‌-17 ಆಫ್ರಿಕನ್‌ ಕಪ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಮಾಲಿಯನ್ನೇ ಮಣಿಸಿ ಚಾಂಪಿ ಯನ್‌ ಎನಿಸಿದ್ದು ಘಾನಾದ ಹೆಚ್ಚುಗಾರಿಕೆ. ಇದಕ್ಕೆ ಸೇಡು ತೀರಿಸುವುದು ಮಾಲಿಯ ಗುರಿ ಆಗಿದ್ದರೆ ಅಚ್ಚರಿಯೇನಿಲ್ಲ. 

“ಸಿ’ ವಿಭಾಗದ ದ್ವಿತೀಯ ಸ್ಥಾನಿಯಾಗಿ ಬಂದ ಮಾಲಿ ಹಿಂದಿನ ಪಂದ್ಯದಲ್ಲಿ ಏಶ್ಯದ ಬಲಿಷ್ಠ ತಂಡವಾದ ಇರಾಕ್‌ಗೆ 5-1 ಗೋಲುಗಳ ಸೋಲು ಣಿಸಿದ ಖುಷಿಯಲ್ಲಿದೆ. ಆದರೆ ಘಾನಾ ವಿರುದ್ಧ “ಡಿಫ‌ರೆಂಟ್‌ ಬಾಲ್‌ ಗೇಮ್‌’ ಆಡಬೇಕಿದೆ.

Advertisement

ಪ್ರಶಸ್ತಿ ಎತ್ತದ ತಂಡಗಳು
ಇಂಗ್ಲೆಂಡ್‌ ಮತ್ತು ಯುಎಸ್‌ಎ ಮೇಲ್ನೋಟಕ್ಕೆ ದೊಡ್ಡ ತಂಡಗಳಾದರೂ ಈವರೆಗೆ ಅಂಡರ್‌-17 ವಿಶ್ವಕಪ್‌ ಪ್ರಶಸ್ತಿಯನ್ನೆತ್ತಿಲ್ಲ. 1999ರಲ್ಲಿ 4ನೇ ಸ್ಥಾನ ಸಂಪಾದಿಸಿದ್ದೇ ಅಮೆರಿಕದ ದೊಡ್ಡ ಸಾಧನೆ. ಸರಿಯಾಗಿ 10 ವರ್ಷಗಳ ಹಿಂದೆ (2007) ಈ ಕೂಟದಲ್ಲಿ ಕಾಣಿಸಿಕೊಂಡ ಇಂಗ್ಲೆಂಡ್‌, ಅಂದು ಕ್ವಾರ್ಟರ್‌ ಫೈನಲ್‌ ತನಕ ಸಾಗಿ ಜರ್ಮನಿಗೆ ಶರಣಾಗಿತ್ತು. 2011ರ ಮೆಕ್ಸಿಕೊ ಕೂಟದಲ್ಲೂ ಇದೇ ಫ‌ಲಿತಾಂಶ ಪುನರಾವರ್ತನೆಗೊಂಡಿತ್ತು. ಕಳೆದ ಸಲ (2015) ಇಂಗ್ಲೆಂಡ್‌ ನಾಕೌಟ್‌ ಪ್ರವೇಶಿಸಲು ವಿಫ‌ಲವಾಗಿತ್ತು. 

ಪೆನಾಲ್ಟಿ ಶೂಟೌಟ್‌ ಕೊರತೆಯನ್ನು ನೀಗಿಸಿ ಕೊಂಡದ್ದು, ಗೋಲಿ ಕುರ್ಟಿಸ್‌ ಆ್ಯಂಡರ್ಸನ್‌ ಗಟ್ಟಿಮುಟ್ಟಾದ ತಡೆಗೋಡೆಯಾಗಿ ನಿಂತಿರುವುದು ಇಂಗ್ಲೆಂಡ್‌ ಪಾಲಿನ ಹೆಗ್ಗಳಿಕೆ. ಜಪಾನ್‌ ವಿರುದ್ಧದ ಪ್ರೀ-ಕ್ವಾರ್ಟರ್‌ ಫೈನಲ್‌ ಪಂದ್ಯ ಗೋಲಿಲ್ಲದೆ ಮುಗಿದು, ಪೆನಾಲ್ಟಿ ಶೂಟೌಟ್‌ ಹಾದಿ ಹಿಡಿದಾಗ ಇಂಗ್ಲೆಂಡ್‌ 5-3 ಅಂತರದ ಜಯ ಸಾಧಿಸಿತ್ತು. ಅಮೆರಿಕ ಆಕ್ರಮಣಕಾರಿ ಆಟದಿಂದ ಗಮನ ಸೆಳೆದಿದೆ. ಪರಗ್ವೆಯನ್ನು 5-0 ಗೋಲುಗಳಿಂದ ಹೊಡೆದುರಿಳಿಸಿದ್ದು ಇದಕ್ಕೆ ಸಾಕ್ಷಿ.

Advertisement

Udayavani is now on Telegram. Click here to join our channel and stay updated with the latest news.

Next