Advertisement

ಶುರುವಾಗಿದೆ ಆದಾಯ ತೆರಿಗೆ ಲೆಕ್ಕಾಚಾರ

03:10 AM Jun 14, 2020 | Sriram |

ಮಾರ್ಚ್‌, ಏಪ್ರಿಲ್‌, ಮೇ ತಿಂಗಳು ಬಂತೆಂದರೆ ಸಾಕು ಉದ್ಯೋಗಿಗಳು, ಉದ್ಯಮಿಗಳು ಆದಾಯ ತೆರಿಗೆ ಪಾವತಿ ಕಸರತ್ತಿಗೆ ತೊಡಗುತ್ತಾರೆ. ಸದ್ಯ ಎಲ್ಲ ಕಡೆ ಕೋವಿಡ್-19 ಹಾವಳಿ ಇರುವುದರಿಂದ, ವಿವರ ಸಲ್ಲಿಕೆಗೆ ನವೆಂಬರ್‌ 30ರವರೆಗೆ ಗಡುವು ವಿಸ್ತರಿಸಲಾಗಿದೆ. ಆದ್ದರಿಂದ ಆದಾಯ ತೆರಿಗೆ ಅಂದರೇನು, ಅದರ ಲೆಕ್ಕಾಚಾರ ಮಾಡುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ.

Advertisement

ಆದಾಯ ತೆರಿಗೆ ಅಂದರೇನು?
ಸರಳವಾಗಿ ಹೇಳುವುದಾದರೆ ಉದ್ಯೋಗಿಗಳು ಹಾಗೂ ಉದ್ಯಮಗಳ ಆದಾಯದ ಮೇಲೆ ಸರಕಾರ ವಿಧಿಸುವ ತೆರಿಗೆಯನ್ನು ಆದಾಯ ತೆರಿಗೆ ಎನ್ನಲಾಗುತ್ತದೆ. ಪ್ರತೀವರ್ಷ ಮೇ, ಜೂನ್‌ ಹೊತ್ತಿಗೆ ತೆರಿಗೆದಾರರು ತಮ್ಮ ವಿವರವನ್ನು ಸರಕಾರಕ್ಕೆ ಸಲ್ಲಿಸಬೇಕು. ಅದನ್ನು ಸರಕಾರ ಪರಿಶೀಲಿಸಿ, ಮುಂದಿನ ಲೆಕ್ಕಾಚಾರ ಮಾಡುತ್ತದೆ.

ತೆರಿಗೆಗೆ ಒಳಪಡುವ ಆದಾಯ
ಸಂಸ್ಥೆಯೊಂದು ನಿಮಗೆ ವೇತನ ನೀಡುವಾಗ, ಒಂದು ವಿವರ ಪಟ್ಟಿ ನೀಡುತ್ತದೆ. ಅದರಲ್ಲಿ ಸಿಟಿಸಿ (ಕಾಸ್ಟ್‌ ಟು ಕಂಪನಿ-ಕಂಪನಿಗಾದ ಖರ್ಚು) ಎಂಬ ಪದವಿರುತ್ತದೆ. ಇದರಲ್ಲಿ ವೇತನದ ಎಲ್ಲ ಲೆಕ್ಕಗಳೂ ಇರುತ್ತವೆ. ಮೂಲ ವೇತನ, ಮನೆ ಬಾಡಿಗೆ ಭತ್ಯೆ, ಮೂಲಭತ್ಯೆ, ಪ್ರಯಾಣ ಭತ್ಯೆ, ವೈದ್ಯಕೀಯ ಸೌಲಭ್ಯಗಳು, ಭವಿಷ್ಯನಿಧಿ ಮೊತ್ತ, ಪಿಂಚಣಿ ಮೊತ್ತ ಇನ್ನಿತರ ವಿವರಗಳಿರುತ್ತವೆ.

ಗ್ರಾಚ್ಯುಟಿ (ಸಂಸ್ಥೆಯೊಂದು ನೀವು ಕೆಲಸ ಬಿಟ್ಟ ನಂತರ ಗೌರವಪೂರ್ಣವಾಗಿ ನೀಡುವ ಮೊತ್ತ) ಮತ್ತು ಭವಿಷ್ಯನಿಧಿ ಮೊತ್ತವನ್ನು, ನಿಮ್ಮ ಸಿಟಿಸಿಯಲ್ಲಿ ಕತ್ತರಿಸಿದ ನಂತರ ಉಳಿಯುವ ಹಣ ಒಟ್ಟು ವೇತನವೆಂದು ಕರೆಸಿಕೊಳ್ಳುತ್ತದೆ. ಈ ಮೊತ್ತವನ್ನೇ ತೆರಿಗೆ ಅಥವಾ ಇನ್ನಿತರ ಕಡಿತಗಳನ್ನು ಮಾಡದೆ ನಿಮಗೆ ನೀಡಲಾಗಿರುತ್ತದೆ. ನಿಮ್ಮ ವೇತನದಲ್ಲಿ ಕಡಿತ ಮಾಡಬಹುದಾದ ಮೊತ್ತಗಳು, ವಿನಾಯ್ತಿಗಳನ್ನು ಲೆಕ್ಕಾಚಾರ ಮಾಡಿ (ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ ಇತ್ಯಾದಿ), ಉಳಿಯುವ ಮೊತ್ತದ ಮೇಲೆ ಆದಾಯ ತೆರಿಗೆ ಹಾಕಲಾಗುತ್ತದೆ. ಒಂದು ವೇಳೆ ವೇತನ ಹೊರತುಪಡಿಸಿ ಬೇರೆ ರೀತಿಯ ಆದಾಯ ನಿಮಗಿದ್ದರೆ, ಅದನ್ನೂ ಇಲ್ಲಿ ಪರಿಗಣಿಸಲಾಗುತ್ತದೆ.

ಆದಾಯ ತೆರಿಗೆ ಹಂತಗಳು
ನಿಮಗೆ ಬರುವ ಆದಾಯ, ತೆರಿಗೆ ವ್ಯಾಪ್ತಿಗೆ ಬರುತ್ತದೋ, ಇಲ್ಲವೋ ಎನ್ನುವುದನ್ನು ಮೊದಲು ಖಾತ್ರಿಪಡಿಸಿಕೊಳ್ಳಬೇಕು. ಅದಕ್ಕಾಗಿ ಬೇರೆ ಬೇರೆ ತೆರಿಗೆ ಹಂತಗಳನ್ನು ತಿಳಿದುಕೊಳ್ಳಬೇಕು. ಇಲ್ಲಿ ವಾರ್ಷಿಕವಾಗಿ ನೀವು ಎಷ್ಟು ಆದಾಯ ಹೊಂದಿದ್ದೀರಿ, ಹಾಗೆಯೇ ನಿಮ್ಮ ವಯಸ್ಸೆಷ್ಟು ಎನ್ನುವುದರ ಮೇಲೆ ಆದಾಯ ತೆರಿಗೆ ವಿಧಿಸಲಾಗುತ್ತದೆ.

Advertisement

ಲೆಕ್ಕಾಚಾರ ಹೇಗೆ?
ಆದಾಯ ತೆರಿಗೆ ಲೆಕ್ಕಾಚಾರ ಬಹಳ ಸೂಕ್ಷ್ಮವಾಗಿದೆ. ಇಲ್ಲಿ ಬರೀ ಆದಾಯ ತೆರಿಗೆಯಲ್ಲದೇ ಸರಕಾರ ವಿಧಿಸುವ ಸೆಸ್‌ ಕೂಡಾ ಸೇರುತ್ತದೆ. ಆದ್ದರಿಂದ ಒಟ್ಟಾರೆ ತೆರಿಗೆ ಹೆಚ್ಚಾಗುತ್ತದೆ. ಉದಾಹರಣೆ: 28 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನಿಗೆ ವಾರ್ಷಿಕವಾಗಿ 6 ಲಕ್ಷ ರೂ.ವರೆಗೆ ವೇತನವಿದೆ ಎಂದುಕೊಳ್ಳೋಣ. ಆತನ 2.5 ಲಕ್ಷ ರೂ. ಹಣಕ್ಕೆ ತೆರಿಗೆ ಹಾಕುವುದಿಲ್ಲ. 2.5 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ತೆರಿಗೆ ದರ ಶೇ.5 ಆಗಿರುತ್ತದೆ. ಈಗ ತೆರಿಗೆ ಮೊತ್ತ 12,500 ರೂ. ಆಗಿರುತ್ತದೆ. 5 ಲಕ್ಷ ರೂ.ನಿಂದ 6 ಲಕ್ಷ ರೂ.ವರೆಗೆ ಆದಾಯ ತೆರಿಗೆ ದರ ಶೇ.20ರಷ್ಟಾಗುತ್ತದೆ, ಅಂದರೆ ತೆರಿಗೆ ಮೊತ್ತ 20,000 ರೂ. ಈಗ ಒಟ್ಟಾರೆ ತೆರಿಗೆ 32,500 ರೂ. ಇದಕ್ಕೆ ಶೇ.4ರಷ್ಟು ಸೆಸ್‌ ಹಾಕಲಾಗುತ್ತದೆ. ಈಗ ಒಟ್ಟಾರೆ ತೆರಿಗೆ ಮೊತ್ತ 33,800 ರೂ.

ತೆರಿಗೆ ಕ್ಯಾಲ್ಕುಲೇಟರ್‌
ವ್ಯಕ್ತಿಗತವಾಗಿ ತೆರಿಗೆಯನ್ನು ಲೆಕ್ಕಾಚಾರ ಮಾಡುವುದು ಕಷ್ಟದ ಕೆಲಸ. ಆದ್ದರಿಂದ ಭಾರತೀಯ ಆದಾಯ ತೆರಿಗೆ ಇಲಾಖೆ ತನ್ನ ಇ-ಫೈಲಿಂಗ್‌ ವೆಬ್‌ಸೈಟ್‌ನಲ್ಲಿ ಇ-ಕ್ಯಾಲ್ಕುಲೇಟರ್‌ ಒಂದನ್ನು ಸಿದ್ಧಪಡಿಸಿದೆ. ಅಲ್ಲಿ ನಿಖರ ಲೆಕ್ಕಾಚಾರ ಪಡೆಯಬಹುದು.

ತೆರಿಗೆಯ ಹಂತಗಳು-2020-21
60 ವರ್ಷ ಒಳಗಿನವರಿಗೆ
ನಿವ್ವಳ ಆದಾಯ       ತೆರಿಗೆ
2.5 ಲಕ್ಷ ರೂ.ವರೆಗೆ 0%
2.5 ಲಕ್ಷ ರೂ.ನಿಂದ 5 ಲಕ್ಷ ರೂ. 5%
5 ಲಕ್ಷ ರೂ.ನಿಂದ 10 ಲಕ್ಷ ರೂ. 20%
10 ಲಕ್ಷ ರೂ.ಗಿಂತ ಮೇಲೆ 30%

80 ವರ್ಷ ಮೇಲ್ಪಟ್ಟವರಿಗೆ
5 ಲಕ್ಷ ರೂ.ವರೆಗೆ 0%
5 ಲಕ್ಷ ರೂ.ನಿಂದ 10 ಲಕ್ಷ ರೂ. 20%
10 ಲಕ್ಷ ರೂ.ಗಿಂತ ಮೇಲೆ 30%

Advertisement

Udayavani is now on Telegram. Click here to join our channel and stay updated with the latest news.

Next