Advertisement

ಯೋಗಾ ದಿನಾಚರಣೆಗೆ ಸಕಲ ಸಿದ್ಧತೆ

09:12 PM Jun 19, 2019 | Team Udayavani |

ದೊಡ್ಡಬಳ್ಳಾಪುರ: ಜೂನ್‌ 21ರಂದು ಇಲ್ಲಿನ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕೇದ್ರ ಸರ್ಕಾರದ ನಿಯಾಮವಳಿಯಂತೆ ಸರಳ ಯೋಗ ಆಯಾಮಗಳನ್ನು ಯೋಗ ಪಟುಗಳಿಗೆ ಮಾಡಿಸಲಾಗುವುದು ಎಂದು ವಿಶ್ವ ಯೋಗ ದಿನಾಚರಣೆ ಸಮಿತಿಯ ಗೌರವ ಅಧ್ಯಕ್ಷ ಶ್ರೀ ಜ್ಞಾನಾನಂದಗಿರಿ ಸ್ವಾಮೀಜಿ ತಿಳಿಸಿದರು.

Advertisement

ಅವರು ಅಂತಾರಾಷ್ಟ್ರೀಯ ಯೋಗದಿನ ಆಚರಣೆ ಪೂರ್ವಭಾವಿಯಾಗಿ ವಿಶ್ವ ಯೋಗ ದಿನಾಚರಣೆ ಸಮಿತಿ ನೇತೃತ್ವದಲ್ಲಿ ಶ್ರೀರಾಮಾಂಜನೇಯ ಕಲ್ಯಾಣ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ವಿಶ್ವ ಯೋಗದಿನಾಚರಣೆಯಲ್ಲಿ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯುವ ಯೋಗಬ್ಯಾಸಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಸಮಿತಿ ಒಂದು ತಿಂಗಳಿಂದ ಸತತವಾಗಿ ಸಿದ್ಧತೆಗಳನ್ನು ನಡೆಸುತ್ತಿದೆ.

ಈ ಹಾದಿಯಲ್ಲಿ ಪೂರ್ವಸಿದ್ಧತೆ ಸಭೆಗಳು ನಡೆದಿವೆ. ಕಾರ್ಯಕ್ರಮ ಪಕ್ಷಾತೀತವಾಗಿ ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹಾಗೂ ಸಮಿತಿ ಮುಖಂಡರ ಮುಂದಾಳತ್ವದಲ್ಲಿ ನಡೆಯಲಿದೆ. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಾಲೂಕು ಮತ್ತು ನಗರದ ಎಲ್ಲಾ ಸಂಘ ಸಂಸ್ಥೆಗಳು, ಟ್ರಸ್ಟ್‌ಗಳು, ಯೋಗ ತರಬೇತಿ ಕೇಂದ್ರಗಳು ಪಾಲ್ಗೊಳ್ಳಲಿವೆ. ಬೆಳಗ್ಗೆ 6.15 ರಿಂದ 7 ಗಂಟೆಯವರೆಗೆ ಯೋಗಾಬ್ಯಾಸ ನಡೆಯಲಿದೆ ಎಂದರು.

Advertisement

ಸೂಕ್ಷ್ಮ, ಉತ್ತಮ ಆರೋಗ್ಯ, ಶರೀರದ ಸ್ವಾಸ್ಥ್ಯ, ಮನಸ್ಸಿನ ಶಾಂತಿ, ಉಲ್ಲಾಸದ ಜೀವನ ನಡೆಸುವಲ್ಲಿ ಪ್ರತಿ ಮನುಷ್ಯನಿಗೂ ಉತ್ತಮ ಜಾಗೃತಿ ಕಾರ್ಯಕ್ರಮವಾಗಿ ವಿಶ್ವ ಯೋಗ ದಿನದಲ್ಲಿ ಯೋಗಾಬ್ಯಾಸ ನಡೆಸಲಾಗುತ್ತದೆ. ಕಾರ್ಯಕ್ರಮಕ್ಕೆ ಬರುವ ಯೋಗಪಟುಗಳು ಬೆಡ್‌ಶೀಟ್‌ ಮತ್ತು ಜಮಖಾನ ತರುವುದು ಕಡ್ಡಾಯವಾಗಿದೆ.

ಉಳಿದಂತೆ ಯೋಗ ಪಟುಗಳು ಬಿಳಿ ವಸ್ತ್ರಗಳನ್ನು ಧ‌ರಿಸಿ ಬಂದಲ್ಲಿ ಶಿಸ್ತು ಪರಿಪಾಲನೆ ಮಾಡಿದಂತಾಗುತ್ತದೆ. ಬೆಳಗ್ಗೆ 6.15 ಗಂಟೆಗೆ ಯೋಗಾಬ್ಯಾಸ ಆರಂಭವಾಗಲಿದ್ದು, ಸುಮಾರು 45 ನಿಮಿಷ ಗಂಟೆಗಳ ಕಾಲ ಯೋಗಾಬ್ಯಾಸ ಇರುತ್ತದೆ. ನುರಿತ ಯೋಗ ಪಟುಗಳಿಂದ ಯೋಗ ಪ್ರದರ್ಶನ ನಡೆಯಲಿದೆ.

ಸನ್ಮಾನ: ರಾಜ್ಯ ಸೇರಿದಂತೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಸಾಧನೆ ಮಾಡಿರುವ ಯುವಕರಿಗೆ ಮತ್ತು ಮಕ್ಕಳಿಗೆ ವಿಶೇಷ ಸನ್ಮಾನ ಇರುತ್ತದೆ. ಶ್ರೀ ಜ್ಞಾನಾನಂದ ಸ್ವಾಮೀಜಿ ಯೋಗ ಮಾರ್ಗದರ್ಶಕರಾಗಿ ಕಾರ್ಯಕ್ರಮದಲ್ಲಿ ಯೋಗಾಬ್ಯಾಸ ಮಾಡಿಸಲಿದ್ದಾರೆ ಎಂದರು.

ವಿಶ್ವ ಯೋಗ ದಿನಾಚರಣೆ ಸಮಿತಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಉಪಾಧ್ಯಕ್ಷ ತ.ನ. ಪ್ರಭುದೇವ್‌, ಡಾ.ಎಚ್‌.ಜಿ. ವಿಜಯಕುಮಾರ್‌, ಕಾರ್ಯದರ್ಶಿ ವಿ.ಲೋಕೇಶ್‌ಕುಮಾರ್‌, ಸಹ ಕಾರ್ಯದರ್ಶಿ ಎಂ.ಕೆ.ವತ್ಸಲಾ, ಖಜಾಂಚಿ ಪಿ.ಕೆ. ಶ್ರೀನಿವಾಸ್‌, ಮುಖಂಡರಾದ ಬಿ.ಜಿ.ಅಮರನಾಥ್‌, ಯಶೋಧಾ, ಗಿರಿಜಾ, ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next