Advertisement

ಪ್ರಯಾಣಕ್ಕೆ ಸಿದ್ಧರಾಗಿ ಬಂದರೆ ಪಾಸಿಟಿವ್‌ ಭೀತಿ!

12:54 AM Jan 23, 2022 | Team Udayavani |

ಮಂಗಳೂರು: ಅವರಿಗೆ ಮಂಗಳೂರಿನಿಂದ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಬೇಕಾಗಿತ್ತು. ಅದಕ್ಕಾಗಿ ಮಂಗಳೂರಿ ನಿಂದ ಬೆಂಗಳೂರು, ಬೆಂಗಳೂರಿನಿಂದ ದಿಲ್ಲಿ, ದಿಲ್ಲಿಯಿಂದ ಮೆಲ್ಬೋರ್ನ್ ಗೆ ವಿಮಾನ ಟಿಕೆಟ್‌ ಬುಕ್‌ ಮಾಡಿದ್ದರು. 48 ತಾಸು ಮೊದಲು ಆರ್‌ಟಿ-ಪಿಸಿಆರ್‌ ಟೆಸ್ಟ್‌ ಮಾಡಿಸಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ವಿಮಾನ ನಿಲ್ದಾಣದಲ್ಲಿ 6 ತಾಸು ಮುನ್ನ ರ‍್ಯಾಪಿಡ್‌ ಆರ್‌ಟಿ-ಪಿಸಿಆರ್‌ ಟೆಸ್ಟ್‌ ಮಾಡಿದಾಗ ವರದಿ ಪಾಸಿಟಿವ್‌! ವಿಮಾನ ಪ್ರಯಾಣ ಮತ್ತು ಇತರ ಸೇವಾ ಸೌಲಭ್ಯಗಳಿಗಾಗಿ ಅವರು ಸುಮಾರು 2 ಲಕ್ಷ ರೂ. ಖರ್ಚು ಮಾಡಿದ್ದು, ಈ ಹಣವೆಲ್ಲ ನಷ್ಟ!

Advertisement

ಘಟನೆ 2: ಅವರಿಗೆ ದುಬಾೖಗೆ ಪ್ರಯಾಣಿಸಬೇಕಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ 48 ತಾಸು ಮೊದಲು ನಡೆಸಿದ ಕೊರೊನಾ ಟೆಸ್ಟ್‌ ನಲ್ಲಿ ನೆಗೆಟಿವ್‌ ಬಂದಿತ್ತು. ಮರುದಿನ (ಜ. 20) ವಿಮಾನ ಏರುವ 6 ತಾಸು ಮೊದಲು ನಡೆಸಿದ ರ್ಯಾಪಿಡ್‌ ಆರ್‌ಟಿ-ಪಿಸಿಆರ್‌ ಟೆಸ್ಟ್‌ ನಲ್ಲಿ ಪಾಸಿಟಿವ್‌! ಹಾಗಾಗಿ ಪ್ರಯಾಣವನ್ನು ಮುಂದೂಡಬೇಕಾಯಿತು.

ಘಟನೆ 3: ಪತಿ ಮತ್ತು ಪತ್ನಿ ಕುವೈಟ್‌ಗೆ ಪ್ರಯಾಣಿಸುವವರಿದ್ದರು. 48 ತಾಸು ಮುಂಚಿತವಾಗಿ ನಡೆಸಿದ ಕೊರೊನಾ ಟೆಸ್ಟ್‌ನಲ್ಲಿ ಇಬ್ಬರಿಗೂ ನೆಗೆಟಿವ್‌ ಬಂದಿತ್ತು. ಮರುದಿನ ಪ್ರಯಾಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡು ವಿಮಾನ ನಿಲ್ದಾಣಕ್ಕೆ ತೆರಳಿ ರ್ಯಾಪಿಡ್‌ ಆರ್‌ಟಿ-ಪಿಸಿಆರ್‌ ಟೆಸ್ಟ್‌ ಮಾಡಿದಾಗ ಗಂಡನಿಗೆ ಪಾಸಿಟಿವ್‌, ಹೆಂಡತಿಗೆ ನೆಗೆಟಿವ್‌! ಪತ್ನಿಗೆ ನೆಗೆಟಿವ್‌ ಬಂದ ಕಾರಣ ಆಕೆಯನ್ನು ಕಳುಹಿಸಿ ಪತಿ ಇಲ್ಲಿಯೇ ಹೋಂ ಐಸೋಲೇಶನ್‌ಗೆ ಒಳ ಪಟ್ಟಿದ್ದಾರೆ.

ಇದು ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಈಗಿನ ಬವಣೆ. ಎರಡೆರಡು ಕೊರೊನಾ ಪರೀಕ್ಷೆಗಳನ್ನು ಎದುರಿಸಿ ವಿಮಾನ ಏರಬೇಕಾಗಿ ಬಂದಿರುವುದು ಅವರನ್ನು ಮಾನಸಿಕವಾಗಿ ಜರ್ಝರಿತರನ್ನಾಗಿಸಿದೆ.

ಎರಡೆರಡು ಪರೀಕ್ಷೆ
ವಿಮಾನ ಏರುವ 48 ತಾಸುಗಳ ಮೊದಲು ಆರ್‌ಟಿ-ಪಿಸಿಆರ್‌ ಟೆಸ್ಟ್‌ ಮತ್ತು ಬಳಿಕ ವಿಮಾನ ನಿಲ್ದಾಣದಲ್ಲಿ 6 ತಾಸು ಮುಂಚಿತವಾಗಿ ರ್ಯಾಪಿಡ್‌ ಆರ್‌ಟಿ-ಪಿಸಿಆರ್‌ ಟೆಸ್ಟ್‌ ಮಾಡಿಸಿ ನೆಗೆಟಿವ್‌ ಬಂದರೆ ಮಾತ್ರ ವಿಮಾನ ಪ್ರಯಾಣ ಸಾಧ್ಯ.

Advertisement

48 ತಾಸು ಮೊದಲು ಮಾಡಿಸುವ ಪರೀಕ್ಷೆಗೆ ಖಾಸಗಿಯಲ್ಲಿ 500 ರೂ.ಗಳಿಂದ 750 ರೂ. ತನಕ ಪಾವತಿಸ ಬೇಕಾಗುತ್ತದೆ. ಬಳಿಕ ವಿಮಾನ ನಿಲ್ದಾಣದಲ್ಲಿ ನಡೆಸುವ ರ್ಯಾಪಿಡ್‌ ಆರ್‌ಟಿ-ಪಿಸಿಆರ್‌ ಟೆಸ್ಟ್‌ಗೆ 3 ಸಾವಿರ ರೂ. ಪಾವತಿಸಬೇಕು. ಪಾಸಿಟಿವ್‌ ಬಂದರೆ ಒಂದು ವಾರ ಹೋಂ ಐಸೋಲೇಶನ್‌ನಲ್ಲಿ ಇರಬೇಕು. ಹೋಂ ಐಸೋಲೇಶನ್‌ ಮುಗಿದ ಬಳಿಕ ಮತ್ತೆ ಆರ್‌ಟಿಪಿಸಿಆರ್‌ ಟೆಸ್ಟ್‌ ಹಾಗೂ ವಿಮಾನ ನಿಲ್ದಾಣದಲ್ಲಿ ಮತ್ತೆ ರ್ಯಾಪಿಡ್‌ ಆರ್‌ಟಿ-ಪಿಸಿಆರ್‌ ಟೆಸ್ಟ್‌ ಮಾಡಿಸಬೇಕು. ಅದಕ್ಕಾಗಿ ಅಷ್ಟೇಮೊತ್ತ ವ್ಯಯಿಸಬೇಕು. ಎರಡನೇ ಬಾರಿಯ ಟೆಸ್ಟ್‌ ನಲ್ಲಿಯೂ ನೆಗೆಟಿವ್‌ ಬರುತ್ತದೆ ಎಂಬ ಖಾತರಿ ಇಲ್ಲ.

ಟಿಕೆಟ್‌ ಸಮಸ್ಯೆ
ಕೊರೊನಾ ಟೆಸ್ಟ್‌ನಲ್ಲಿ ಪಾಸಿಟಿವ್‌ ಬಂದರೆ ವಿಮಾನ ಪ್ರಯಾಣ ರದ್ದಾಗಿ ಮುಂದೆ ನೆಗೆಟಿವ್‌ ಬರುವ ತನಕ ಕಾದು ಪುನಃ ನಿಗದಿತ ವಿಮಾನಯಾನ ಇರುವ ದಿನ ಗಮನಿಸಿ ಟಿಕೆಟ್‌ ಬುಕ್‌ ಮಾಡಬೇಕು. ತತ್‌ಕ್ಷಣ ಟಿಕೆಟ್‌ ಸಿಗುವುದಿಲ್ಲ; ಹಾಗಾಗಿ ಒಂದು ವಾರ ಮುಂಚಿತವಾಗಿ ಟಿಕೆಟ್‌ ಕಾದಿರಿಸುವುದು ಅನಿವಾರ್ಯ.

ಈ ಮೊದಲು ನಿಗದಿತ ದಿನಾಂಕದ ಪ್ರಯಾಣವನ್ನು ಮುಂದೂಡುವುದಾದರೆ ಟಿಕೆಟ್‌ನ ಶೇ. 60ರಷ್ಟು ಹಣ ಮಾತ್ರ ವಾಪಸ್‌ ಸಿಗುತ್ತಿತ್ತು. ಒಂದು ವಾರದಿಂದ ಈ ನಿಯಮ ಬದಲಾವಣೆ ಆಗಿದ್ದು, ಈಗ ವಿಮಾನ ನಿಲ್ದಾಣದಲ್ಲಿ ನಡೆಸುವ ಟೆಸ್ಟ್‌ ನಲ್ಲಿ ಪಾಸಿಟಿವ್‌ ಬಂದು ಪ್ರಯಾಣ ರದ್ದಾದರೆ ಮುಂದಿನ ಪ್ರಯಾಣ ದಿನಾಂಕದ ಟಿಕೆಟ್‌ ಹಣದಲ್ಲಿ ಕಡಿತ ಆಗುವುದಿಲ್ಲ. ಟಿಕೆಟ್‌ ದರದಲ್ಲಿ ಏರಿಕೆ ಆಗಿದ್ದರೆ ಮಾತ್ರ ವ್ಯತಸ್ತ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆದರೆ ಈ ಪರಿಷ್ಕೃತ ನಿಯಮ ಆಯಾ ವಿಮಾನ ಕಂಪೆನಿಗಳನ್ನು ಅವಲಂಬಿಸಿದೆ. ಅಲ್ಲದೆ ಪ್ರಸ್ತುತ ಈ ನಿಯಮ ಯುಎಇ ದೇಶಕ್ಕೆ ತೆರಳುವ ವಿಮಾನಗಳಿಗೆ ಮಾತ್ರ ಅನ್ವಯವಾಗುತ್ತದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2021ರ ಆ. 18ರಿಂದ ಈ ಜನವರಿ 20ರ ವರೆಗಿದ 5 ತಿಂಗಳ ಅವಧಿಯಲ್ಲಿ 46,721 ಪ್ರಯಾಣಿಕರನ್ನು ಪರೀಕ್ಷೆಗೆ ಒಳ ಪಡಿಸಲಾಗಿದ್ದು, 250 ಮಂದಿಗೆ ಪಾಸಿಟಿವ್‌ ಬಂದಿದೆ. ಅವರಲ್ಲಿ ದಕ್ಷಿಣ ಕನ್ನಡದ 132 ಮಂದಿ, ಉಡುಪಿಯ 41, ಉತ್ತರ ಕನ್ನಡದ 32 ಜನ, ಮಡಿಕೇರಿಯ ಇಬ್ಬರು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗದ ತಲಾ ಒಬ್ಬರು, ಕೇರಳದ ಕಾಸರಗೋಡಿನ 38 ಜನರು ಹಾಗೂ ಪಾಲಕ್ಕಾಡ್‌ನ‌ ಇಬ್ಬರು ಸೇರಿದ್ದಾರೆ.
– ಡಾ| ಅಶೋಕ್‌ ಕುಮಾರ್‌, ಕೊರೊನಾ ನೋಡಲ್‌ ಅಧಿಕಾರಿ.

ಮೊದಲ ಆರ್‌ಟಿ-ಪಿಸಿಆರ್‌ ಟೆಸ್ಟ್‌ ನಲ್ಲಿಯೇ ಪಾಸಿಟಿವ್‌ ಬಂದರೆ ಅಷ್ಟೊಂದು ಸಮಸ್ಯೆ ಆಗುವುದಿಲ್ಲ. ನೆಗೆಟಿವ್‌ ಬಂದು ವಿಮಾನ ನಿಲ್ದಾಣ ತಲುಪಿ ಅಲ್ಲಿ ಪಾಸಿಟಿವ್‌ ಬಂದರೆ ಬಹಳಷ್ಟು ಮಾನಸಿಕ ವೇದನೆ, ವೃಥಾ ವೆಚ್ಚ ಆಗುತ್ತಿದೆ.
– ಪ್ರತೀಕ್‌, ಓರ್ವ ವಿಮಾನ ಪ್ರಯಾಣಿಕ.

-ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next