Advertisement

ಸಾಹಿತ್ಯ ಸಮ್ಮೇಳನಕ್ಕೆ ಶುರುವಾಗಿದೆ ಸಿದ್ಧತೆ

12:24 PM Apr 25, 2022 | Team Udayavani |

ಹಾವೇರಿ: ಕಳೆದ ಎರಡು ವರ್ಷಗಳ ಹಿಂದೆಯೇ ಹಾವೇರಿಯಲ್ಲಿ ಆಯೋಜಿಸಲು ಘೋಷಣೆಯಾಗಿದ್ದ 86ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿವಿಧ ಕಾರಣದಿಂದ ಮುಂದುಡುತ್ತಾ ಬಂದಿದ್ದರಿಂದ ಸಾಹಿತ್ಯಾಭಿಮಾನಿಗಳ ನಿರಾಸೆಗೆ ಕಾರಣವಾಗಿತ್ತು. ಆದರೆ, ಇದೀಗ ಮತ್ತೆ 3ನೇ ಬಾರಿಗೆ ಸಮ್ಮೇಳನಕ್ಕೆ ಮುಹೂರ್ತ ನಿಗದಿಯಾಗಿದ್ದು, ಸಾಹಿತ್ಯಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Advertisement

ಜಿಲ್ಲೆಗೆ ಸಮ್ಮೇಳನ ಘೋಷಣೆಯಾದ ನಂತರ ಕೊರೊನಾ ಮಹಾಮಾರಿ ಕಾರಣದಿಂದ ಸಾಹಿತ್ಯ ಸಮ್ಮೇಳನ ಆಯೋಜನೆಯನ್ನು ಮುಂದೂಡಲಾಗಿತ್ತು. 2021ರ ಆರಂಭದಲ್ಲಿ ಕೊರೊನಾ ಸೋಂಕು ಕ್ಷೀಣಿಸಿದ ಪರಿಣಾಮ 2021ರ ಏಪ್ರಿಲ್‌ನಲ್ಲಿ ಸಮ್ಮೇಳನ ಆಯೋಜಿಸಲು ಕಸಾಪ ಹಿಂದಿನ ಅಧ್ಯಕ್ಷ ಮನು ಬಳಿಗಾರ ತೀರ್ಮಾನಿಸಿದ್ದರು.

ಅದರಂತೆ ಎಲ್ಲ ಸಿದ್ಧತೆಗಳನ್ನು ಕೈಗೊಂಡು ವಿವಿಧ ಸಮಿತಿಗಳನ್ನು ರಚಿಸಲಾಗಿತ್ತು. ಆದರೆ, ಮತ್ತೆ ಕೊರೊನಾ ಸೋಂಕು ಹೆಚ್ಚಳ ಹಾಗೂ ಕೊರೊನಾ ಮಾರ್ಗಸೂಚಿಗಳಲ್ಲಿ ಸರ್ಕಾರ ಬದಲಾವಣೆ ಮಾಡದ ಹಿನ್ನೆಲೆಯಲ್ಲಿ ಸಮ್ಮೇಳನ ಆಯೋಜನೆಯನ್ನು ಮುಂದೂಡಲಾಗಿತ್ತು. ಅದಾದ ನಂತರ ಜುಲೈನಲ್ಲಿ ಜಿಲ್ಲೆಯ ಸೌಭಾಗ್ಯ ಎನ್ನುವಂತೆ ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು.

ನಂತರ ಕಸಾಪಕ್ಕೆ ಚುನಾವಣೆ ನಡೆದು ನಾಡೋಜ ಮಹೇಶ ಜೋಶಿ ಕಸಾಪ ನೂತನ ಅಧ್ಯಕ್ಷರಾದರು. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಹೇಶ ಜೋಶಿ ಇಬ್ಬರೂ ಜಿಲ್ಲೆಯವರೇ ಆಗಿದ್ದರಿಂದ ಸಮ್ಮೇಳನವನ್ನು ಇನ್ನಷ್ಟು ಅದ್ಧೂರಿಯಾಗಿ ನಡೆಸುವ ಅವಕಾಶ ಒದಗಿ ಬಂದಿದೆ. ಜಿಲ್ಲೆಗೆ ಭೇಟಿ ನೀಡಿದ್ದ ಮಹೇಶ ಜೋಶಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮೇ 20ರಿಂದ 23ರವರೆಗೆ ಸಮ್ಮೇಳನ ಆಯೋಜಿಸಲು 2ನೇ ಬಾರಿಗೆ ದಿನಾಂಕ ನಿಗದಿಪಡಿಸಿದ್ದರು.

ಆದರೆ, ಈ ಸಮಯದಲ್ಲಿ ಮುಂಗಾರು ಪೂರ್ವ ಮಳೆ ಅವಾಂತರ ಕಾರಣ ಸಮ್ಮೇಳನ ನಡೆಸುವುದು ಕಷ್ಟಕರ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮ್ಮೇಳನ ಆಯೋಜನೆಗೆ ಕಸಾಪ ಪದಾಧಿಕಾರಿಗಳು, ಅಧಿಕಾರಿಗಳು ನಿರ್ಣಯ ಕೈಗೊಂಡಿದ್ದರು.

Advertisement

ಸೆ.23ರಿಂದ 25ರವರೆಗೆ ಸಮ್ಮೇಳನ: ಹಾವೇರಿ ಜಿಲ್ಲೆಯಾಗಿ 25 ವರ್ಷಗಳನ್ನು ಪೂರೈಸುತ್ತಿರುವ ಸಮಯದಲ್ಲಿ ಅದರ ಜತೆಗೆ ಮೊದಲ ಬಾರಿಗೆ ನುಡಿ ಜಾತ್ರೆಯ ತೇರನೆಳೆಯುವ ಸೌಭಾಗ್ಯ ಜಿಲ್ಲೆಗೆ ಒದಗಿ ಬಂದಿದೆ. ಹೀಗಾಗಿ, ಸಮ್ಮೇಳನವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸುವ ಚಿಂತನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜಿಲ್ಲೆಯ ಸಚಿವರು, ಶಾಸಕರು, ಸಂಸದರು, ಕಸಾಪ ಪದಾಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಸಿಎಂ, ಮುಂಬರುವ ಸೆ.23, 24 ಹಾಗೂ 25ರಂದು ಮೂರು ದಿನ ಅಚ್ಚುಕಟ್ಟಾಗಿ ಸಮ್ಮೇಳನ ಆಯೋಜನೆಗೆ ತೀರ್ಮಾನ ಕೈಗೊಂಡಿದ್ದಾರೆ.  ಈ ಸಮ್ಮೇಳನಕ್ಕೆ ಈಗಾಗಲೇ ಬಜೆಟ್‌ನಲ್ಲಿ 20 ಕೋಟಿ ರೂ. ಮೀಸಲಿಡಲಾಗಿದೆ. ಅನುದಾನಕ್ಕೆ ಬೇಡಿಕೆ ಸಲ್ಲಿಸುವ ಪ್ರಮೇಯ ಈ ಬಾರಿಯಿಲ್ಲ. ಊಟ, ಕುಡಿಯುವ ನೀರು, ಶೌಚಗೃಹ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ಕಲ್ಪಿಸಲು ಸರ್ಕಾರ ಹಾಗೂ ಕಸಾಪ ಪದಾಧಿಕಾರಿಗಳು ಸಿದ್ಧತೆ ಕೈಗೊಳ್ಳಬೇಕಿದೆ.

ಮುಂಬರುವ ಸೆಪ್ಟೆಂಬರ್‌ನಲ್ಲಿ ಸಮ್ಮೇಳನ ಆಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿ ನೀಡಿದ್ದಾರೆ. ಮುಂದಿನ ಒಂದು ತಿಂಗಳೊಳಗೆ ವೇದಿಕೆಯ ಸ್ಥಳ, ವಸತಿ, ಊಟ, ಸಾರಿಗೆ ವ್ಯವಸ್ಥೆ ಸೇರಿದಂತೆ ಮೂಲಭೂತ ಸಿದ್ಧತೆಗಳ ನೀಲನಕ್ಷೆ ತಯಾರಿಸಿಕೊಳ್ಳಿ. ಮುಂದೆ ಹಾವೇರಿಯಲ್ಲಿಯೇ ಸಭೆ ನಡೆಸಿ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಸಿಎಂ ಸೂಚಿಸಿದ್ದಾರೆ. ಎಲ್ಲ ತಾಲೂಕಿನವರನ್ನು ಒಗ್ಗೂಡಿಸಿಕೊಂಡು ವಿಶೇಷವಾಗಿ ಹಾಗೂ ಅರ್ಥಪೂರ್ಣವಾಗಿ ಸಮ್ಮೇಳನ ಆಯೋಜನೆಗೆ ಶ್ರಮಿಸಲಾಗುವುದು.  ಲಿಂಗಯ್ಯ ಹಿರೇಮಠ, ಕಸಾಪ ಜಿಲ್ಲಾಧ್ಯಕ್ಷರು, ಹಾವೇರಿ

ಸಮ್ಮೇಳನದಲ್ಲಿ ಸ್ಥಳೀಯ ಕಲಾವಿದರಿಗೆ ಅನುಕೂಲ ಕಲ್ಪಿಸಿ, ಸಮಾನಾಂತರ ಗೋಷ್ಠಿಗಳನ್ನು ನಡೆಸಿ ಎಲ್ಲರಿಗೂ ಅವಕಾಶ ಕಲ್ಪಿಸಲು ಹಾಗೂ ಪಾರ್ಕಿಂಗ್‌, ಊಟ, ವಸತಿ ಸೇರಿದಂತೆ ಯಾವುದೇ ಸಮಸ್ಯೆಯಾಗದಂತೆ ಸಮ್ಮೇಳನ ಆಯೋಜಿಸಲು ಸಿಎಂ ಸೂಚಿಸಿದ್ದಾರೆ. ಪಕ್ಷಾತೀತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅಚ್ಚುಕಟ್ಟಾಗಿ ಸಮ್ಮೇಳನ ಆಯೋಜನೆ ಮಾಡಲಾಗುವುದು. –ವೈ.ಬಿ.ಆಲದಕಟ್ಟಿ, ಕಸಾಪ ತಾಲೂಕು ಅಧ್ಯಕ್ಷರು, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next