ಇಸ್ಲಾಮಾಬಾದ್: ಪದೇ ಪದೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಆಂತರಿಕ ವಿಚಾರವನ್ನೆತ್ತಿ ಕೊನೆಗೆ ಭಾರತದ ಖಡಕ್ ಪ್ರತ್ಯುತ್ತರದಿಂದ ಬೆಚ್ಚಿ ಬೀಳುವ ಪಾಕಿಸ್ತಾನ ಈ ಬಾರಿಯೂ ಅದೇ ಸ್ಥಿತಿ ಎದುರಿಸಿದೆ.
ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ತಿರುಗೇಟಿಗೆ ನಡುಗಿರುವ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ, “ಭಾರತದ ರಾಜತಾಂತ್ರಿಕ ಪ್ರಯತ್ನದಿಂದಾಗಿ ಕಾಶ್ಮೀರವನ್ನು ” ವಿಶ್ವಸಂಸ್ಥೆಯ ಪ್ರಮುಖ ಅಜೆಂಡಾ’ವಾಗಿ ಮಾರ್ಪಡಿಸುವಲ್ಲಿ ಪಾಕಿಸ್ತಾನವು ವಿಫಲವಾಯಿತು’ ಎಂದು ಹೇಳಿಕೊಂಡಿದ್ದಾರೆ.
ಶನಿವಾರ ಈ ಕುರಿತು ಮಾತನಾಡಿದ ಭುಟ್ಟೋ, “ನಾವು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದಾಗಲೆಲ್ಲ ನೆರೆರಾಷ್ಟ್ರವು ಕಟುವಾಗಿ ಖಂಡಿಸುತ್ತದೆ. ಇದು ವಿಶ್ವಸಂಸ್ಥೆಯು ಗಮನಿಸಬೇಕಾದ ವಿವಾದವೇ ಅಲ್ಲ ಎಂದು ವಾದಿಸುತ್ತದೆ. ಕಾಶ್ಮೀರ ಎನ್ನುವುದು ಅಂತಾರಾಷ್ಟ್ರೀಯ ಸಮುದಾಯವು ಗುರುತಿಸಿರುವ ವಿವಾದಿತ ಪ್ರದೇಶವೇ ಅಲ್ಲ ಎಂದು ಹೇಳುತ್ತದೆ. ಹೀಗಾಗಿ, ನಾವು ಎಷ್ಟೇ ಪ್ರಯತ್ನಿಸಿದರೂ ಸತ್ಯವನ್ನು ಒತ್ತಿಹೇಳಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.
ವಿಶೇಷವೆಂದರೆ, ಬಿಲಾವಲ್ ಭುಟ್ಟೋ ಅವರು ಈ ಹೇಳಿಕೆ ನೀಡುವಾಗ ಮೊದಲಿಗೆ ಭಾರತವನ್ನು “ಮಿತ್ರರಾಷ್ಟ್ರ’ ಎಂದು ಪ್ರಸ್ತಾಪಿಸಿದ್ದು, ನಂತರ ತಮ್ಮ ಮಾತನ್ನು ಸರಿಪಡಿಸಿಕೊಂಡು “ನೆರೆರಾಷ್ಟ್ರ’ ಎಂದು ಸಂಬೋಧಿಸಿದ್ದಾರೆ.