ಶಿವಮೊಗ್ಗ: ಇನ್ಮುಂದೆ ಪಹಣಿ ಪತ್ರ, ಜಾತಿ ಪ್ರಮಾಣ ಪತ್ರ ಪಡೆಯೋಕೆ ತಿಂಗಳುಗಳ ಕಾಲ ಕಾಯಬೇಕಿಲ್ಲ. ಪ್ರಮಾಣ ಪತ್ರ ಬೇಕು ಎಂದು ಅರ್ಜಿ ಸಲ್ಲಿಸಿದ ಹತ್ತು ನಿಮಿಷದಲ್ಲಿ ಅವಶ್ಯವಿರುವ ದಾಖಲೆ ನಿಮ್ಮ ಕೈಯಲ್ಲಿರಲಿದೆ. ಹೌದು. ಇಂಥದ್ದೊಂದು ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದ್ದು ಮೊದಲಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ದಶಕಗಳ ಹಿಂದೆ ಪಹಣಿ, ಜಾತಿ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ ಸಹಿತ ವಿವಿಧ ಸರಕಾರಿ ಸೇವೆಗಳು ಲಭ್ಯವಾಗಬೇಕಾಗಿದ್ದರೆ ತಿಂಗಳುಗಟ್ಟಲೆ ಕಾಯಬೇಕಿತ್ತು. ‘ಸಕಾಲ’ ಯೋಜನೆಯಿಂದ ಈ ಸೇವೆಗಳು ಹತ್ತಾರು ದಿನಗಳಲ್ಲಿ ಲಭ್ಯವಾಗುತ್ತಿದ್ದವು. ಈಗ ಅರ್ಜಿ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಅಗತ್ಯ ದಾಖಲೆ ಸಿಗುವಂತೆ ಮಾಡುವ ‘ಓಟಿಸಿ’ (ಓವರ್ ದಿ ಕೌಂಟರ್) ಯೋಜನೆ ಶೀಘ್ರದಲ್ಲಿ ಜಾರಿಗೆ ಬರಲಿದೆ. ಇದಕ್ಕೆ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿದ್ದು, ಇನ್ನೊಂದೆರಡು ತಿಂಗಳಲ್ಲಿ ಇದರ ಲಾಭ ಸಾರ್ವಜನಿಕರಿಗೆ ಸಿಗಲಿದೆ. ಮೊದಲಿಗೆ ಇದು ಹೊಸನಗರ ತಾಲೂಕಿನಲ್ಲಿ ಆರಂಭವಾಗಲಿದೆ. ಶಿವಮೊಗ್ಗದ ಹಿಂದಿನ ಡಿಸಿ ವಿ. ಪೊನ್ನುರಾಜ್ ಕನಸಿನ ಕೂಸಾಗಿದ್ದ ಓಟಿಸಿಯ ಜಾರಿಗೆ ಇದ್ದ ಅಡೆತಡೆಗಳೆಲ್ಲ ನಿವಾರಣೆಯಾಗಿದ್ದು, ದತ್ತಾಂಶ ಪರಿಶೀಲನೆ ಕಾರ್ಯ ಕೂಡ ಬಹುತೇಕ ಪೂರ್ಣಗೊಂಡಿದೆ.
ಏನಿದು ಓಟಿಸಿ: ಕಂದಾಯ ಇಲಾಖೆ ಸಕಾಲ ಯೋಜನೆಯಡಿ ಪ್ರಸ್ತುತ ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ ಸಹಿತ 35ರಿಂದ 40 ಸೇವೆ ಒದಗಿಸುತ್ತಿದೆ. ಆಯಾ ಸೇವೆಗೆ 15ರಿಂದ 40 ದಿನದ ಕಾಲಾವಕಾಶ ಇದೆ. ಕಂದಾಯ ಇಲಾಖೆಯ ಮೂಲಕ ನೀಡಲಾಗುತ್ತಿರುವ ಈ ಸೇವೆಯಲ್ಲಿ ಗ್ರಾಮ ಸಹಾಯಕರ ಪಾತ್ರ ಮಹಣ್ತೀದ್ದು. ಬೆಳೆ ನಷ್ಟ, ಬೆಳೆ ಪರಿಹಾರ ವಿತರಣೆ, ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ನಾನಾ ರೀತಿಯ ವೇತನ, ಪಡಿತರ ಅರ್ಜಿ ವಿಲೇವಾರಿ ಹೀಗೆ ಹತ್ತಾರು ಕೆಲಸಗಳನ್ನು ನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಗೆ ಸಕಾಲ ಯೋಜನೆಯಡಿ ಕ್ಲಪ್ತ ಸಮಯದಲ್ಲಿ ಸೇವೆ ಒದಗಿಸುವುದು ಸವಾಲಾಗಿದೆ. ಗ್ರಾಮ ಲೆಕ್ಕಿಗರ ಒಟ್ಟಾರೆ ಕೆಲಸದಲ್ಲಿ ಶೇ. 70ರಷ್ಟು ಕೆಲಸ ಸಕಾಲಕ್ಕೆ ಸಂಬಂಧಿಸಿದ್ದಾಗಿರುತ್ತದೆ.
ಇದನ್ನು ತಪ್ಪಿಸಿ ಕ್ಷಣ ಮಾತ್ರದಲ್ಲಿ ದಾಖಲೆ ಒದಗಿಸುವ ಮತ್ತು ಪದೇ ಪದೇ ಈ ಕೆಲಸ ಮಾಡಲು ಸಿಬಂದಿಗೆ ಶ್ರಮ ತಪ್ಪಿಸುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಹಿಂದಿನ ಡಿಸಿ ವಿ. ಪೊನ್ನುರಾಜ್ ಓಟಿಸಿ ಜಾರಿಯ ಚಿಂತನೆ ನಡೆಸಿ ರಾಜ್ಯದಲ್ಲಿ ಶಿವಮೊಗ್ಗವನ್ನು ಪೈಲಟ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆಹಾರ ಇಲಾಖೆಯಿಂದ ವಿತರಿಸಲಾಗಿರುವ ಪಡಿತರ ಚೀಟಿಯ ದತ್ತಾಂಶವನ್ನು ಆಧರಿಸಿ ಗ್ರಾಮ ಸಹಾಯಕರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಹೀಗೆ ಸಂಗ್ರಹಿಸಲಾದ ಮಾಹಿತಿಯನ್ನು ಕ್ರೋಡೀಕರಿಸುವ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗೆ ನೀಡುವ ನಿಟ್ಟಿನಲ್ಲಿ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಅಂತಿಮಗೊಂಡು ಕಳೆದ ವರ್ಷ ದತ್ತಾಂಶ ಕ್ರೋಡೀಕರಣ ಕಾರ್ಯಕ್ಕೆ ಜಿಲ್ಲಾದ್ಯಂತ ಚಾಲನೆ ನೀಡಲಾಗಿತ್ತು. ಭದ್ರಾವತಿ ಶೇ. 69, ಸಾಗರ ಶೇ. 72, ಶಿಕಾರಿಪುರ ಶೇ. 79, ಶಿವಮೊಗ್ಗ ಶೇ. 82, ಸೊರಬ ಶೇ. 70, ತೀರ್ಥಹಳ್ಳಿ ಶೇ. 90 ಪಡಿತರ ಚೀಟಿಯ ಮಾಹಿತಿಯನ್ನು ಮೂಲ ದಾಖಲೆಯೊಂದಿಗೆ ತಾಳೆ ಹಾಕುವ ಕೆಲಸ ಪೂರ್ಣಗೊಂಡಿದೆ.
– ಗೋಪಾಲ್ ಯಡಗೆರೆ