ಬಂದರು: ಕೇಂದ್ರ ಸರಕಾರ ಜಿಎಸ್‌ಟಿ ನಿಯಮವನ್ನು ಜಾರಿಗೆ ತಂದಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದರೂ, ಅದರಲ್ಲಿರುವ ನ್ಯೂನತೆಗಳನ್ನು ಕೂಡಲೇ ಸರಿಪಡಿಸಬೇಕಿದೆ ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ. ನಾಗೇಶ್ ಪೈ ತಿಳಿಸಿದರು.
ನಗರದ ಕೆಸಿಸಿಐ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಜಿಎಸ್‌ಟಿಯ ಪ್ರಾಯೋಗಿಕ ಸಮಸ್ಯೆಗಳು’ ಎಂಬ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಎಸ್‌ಟಿ ವಿಚಾರದಲ್ಲಿ ತಿದ್ದುಪಡಿ ಮಾಡಿಕೊಳ್ಳುವ ಆವಶ್ಯಕತೆ ಇದೆ. ಕಳೆದ ಬಾರಿ ವ್ಯಾಟ್ ಜಾರಿಗೆ ಬಂದಾಗಲೂ ಇದೇ ರೀತಿಯ ಸಮಸ್ಯೆಯನ್ನು ಸಾರ್ವಜನಿಕರು ಅನುಭವಿಸಿದ್ದರು ಎಂದು ತಿಳಿಸಿದರು.
ಆನ್‌ಲೈನ್‌ನಲ್ಲಿ ಕಡತವನ್ನು ಯಾವ ರೀತಿ ಅಪ್‌ಲೋಡ್ ಮಾಡಬೇಕು ಎಂಬ ವಿಚಾರ ಈಗಲೂ ಅನೇಕರಿಗೆ ತಿಳಿದಿಲ್ಲ. ಜಿಎಸ್‌ಟಿ ವಿಚಾರಕ್ಕೆ ಸಂಬಂಧಪಟ್ಟಂತೆ ವ್ಯಾಪಾರಿಗಳಿಗೆ ತಿಂಗಳಿಗೆ ಕನಿಷ್ಠ 4 ಕಡತ ಅಪ್‌ಲೋಡ್ ಮಾಡಲಿಕ್ಕಿರುತ್ತಿದೆ. ಈ ಬಗ್ಗೆ ಜಿಎಸ್‌ಟಿ ವಿಭಾಗದ ಅಧಿಕಾರಿಗಳೇ ಕಾರ್ಯಾಗಾರ ನಡೆಸುವ ಆವಶ್ಯಕತೆ ಇದೆ ಎಂದರು.
ಒಟ್ಟಾರೆ 17 ತೆರಿಗೆಗಳನ್ನು ಒಂದೇ ವ್ಯಾಪ್ತಿಗೆ ತಂದದ್ದು ಒಳ್ಳೆಯ ಬೆಳವಣಿಗೆ. ತಂತ್ರಜ್ಞಾನವನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂದು ತಿಳಿಯದಿದ್ದ ಕಾರಣ ಇನ್ನೂ ಅನೇಕ ಮಂದಿ ಜಿಎಸ್‌ಟಿ ವಿವರಗಳ ಬಗ್ಗೆ ತಿಳಿದುಕೊಂಡಿಲ್ಲ. ಇದರ ಆಗು ಹೋಗುಗಳ ಬಗ್ಗೆ ಚರ್ಚೆ ಮಾಡಲು ವ್ಯಾಪಾರಿಗಳು ಮತ್ತು ಉತ್ಪಾದಕರ ಅಭಿಪ್ರಾಯವನ್ನೂ ತೆಗೆದುಕೊಳ್ಳಬೇಕಿತ್ತು ಎಂದರು.
ಮಂಗಳೂರು ಜಿಎಸ್‌ಟಿ ವಿಭಾಗದ ಜಂಟಿ ಆಯುಕ್ತ ಎಚ್.ಜಿ. ಪವಿತ್ರಾ ಮಾತನಾಡಿ, ಜಿಎಸ್‌ಟಿ ಬಂದ ಬಳಿಕ ಅನೇಕ ಕೆಲಸಗಳು ಡಿಜಿಟಲೈಸೇಷನ್ ಆಗಿದೆ. ಇದರಿಂದಾಗಿ ತ್ವರಿತ ಗತಿಯಲ್ಲಿ ಕೆಲಸ ಸಾಗಲು ಅನುಕೂಲವಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಕೆಸಿಸಿಐ ಅಧ್ಯಕ್ಷೆ ವತಿಕಾ ಪೈ, ಉಪಾಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್, ಕಾರ್ಯದರ್ಶಿ ಶಶಿಧರ ಪೈ ಮುಂತಾದ
ಗಣ್ಯರು ಉಪಸ್ಥಿತರಿದ್ದರು.