ರಾಮನಗರ: ಆರೋಗ್ಯವೇ ಭಾಗ್ಯ. ಆದ್ದರಿಂದ, ಸರ್ಕಾರ ರೂಪಿಸಿರುವ ಹಲವಾರು ಯೋಜನೆಗಳನ್ನು ಎಲ್ಲರೂ ಸದ್ಬಳಕೆ ಮಾಡಿಕೊಂಡು ಶಿಬಿರಗಳ ಪ್ರಯೋಜನ ಪಡೆದು ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ತಿಳಿಸಿದರು.
ತಾಲೂಕಿನ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಗ್ರಾಪಂ ಆರೋಗ್ಯ ಅಮೃತ ಅಭಿಯಾನ ಕುರಿತು ನಡೆದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಕಾರ್ಯನಿರ್ವಹಿಸುವ ಸ್ವಯಂಸೇವಾ ಸಂಸ್ಥೆಗಳ ಸಹಕಾರದಿಂದ ಗ್ರಾಪಂ ಮಟ್ಟದಲ್ಲಿ ಕಂಡು ಬರುವ ಆರೋಗ್ಯ ಸಂಬಂಧಿತ ಸಮಸ್ಯೆಗಳಾದ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ ಮತ್ತಿತರರ ಕುರಿತು ಸಮುದಾಯದಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುವುದು ಎಂದರು.
ಅಪೌಷ್ಟಿಕತೆ ಮತ್ತು ರಕ್ತಹೀನತೆ, ಬಾಲ್ಯವಿವಾಹ, ಮತ್ತು ಮುಟ್ಟಿನ ನೈರ್ಮಲ್ಯ, ಮಾನಸಿಕ ಆರೋಗ್ಯ ಹಾಗೂ ಲಸಿಕಾಕರಣ ತಾಯಿ ಮತ್ತು ಮಕ್ಕಳ ಆರೋಗ್ಯ, ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಸರ್ಕಾರದ ಯೋಜನೆಗಳು, ಸೇವಾ-ಸೌಲಭ್ಯಗಳ ಕುರಿತಂತೆ ಜನರಿಗೆ ತಿಳಿಸಲಾಗುತ್ತದೆ ಎಂದರು.
ಜನ ಸಾಮಾನ್ಯರ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಿಸುವುದು. ಶಿಬಿರದ ಮೂಲಕ ಮಧುಮೇಹ ಮತ್ತು ರಕ್ತದೊತ್ತಡ ಮತ್ತು ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡಿ ಶೀಘ್ರ ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಸರ್ಕಾರದ ಯೋಜನೆ ಹಾಗೂ ಸೇವಾ-ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮನವಿ ಮಾಡುವ ಮೂಲಕ ಗ್ರಾಪಂ ಆರೋಗ್ಯ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಸಲಹೆ ನೀಡಿದರು.
ಅಪೌಷ್ಟಿಕತೆ ನಿವಾರಿಸಲು ಹಾಲು, ಮೊಟ್ಟೆ ವಿತರಣೆ: ಮೇಲ್ವಿಚಾರಕಿ ರೂಪಾ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಆರೋಗ್ಯ ವರ್ಧನೆ, ಆರೋಗ್ಯವಂತ ಮಗುವಿನ ಜನನ ಮತ್ತು ಪಾಲನೆಗಾಗಿ ಮೊದಲ ಪ್ರಸವ ಗರ್ಭಿಣಿಯರಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ, ಬಾಣಂತಿ ಮತ್ತು ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಹಾಲು, ಮೊಟ್ಟೆ, ಚಿಕ್ಕಿ, ಪೋಷಕಾಂಶಯುಕ್ತ ಊಟ ವಿತರಿಸಲಾಗುತ್ತಿದೆ. ಅರ್ಹ ಫಲಾನುಭವಿಗಳು ಸಮರ್ಪಕವಾಗಿ ಪ್ರಯೋಜನ ಪಡೆಯುವಂತೆ ಸಲಹೆ ನೀಡಿದರು.
ಬಾಲ್ಯವಿವಾಹ ಕಂಡರೆ ಮಾಹಿತಿ ನೀಡಿ: ಸಾರ್ವಜನಿಕರಿಗೆ ಬಾಲ್ಯ ವಿವಾಹಗಳು, ಅನಾಥ ಮಕ್ಕಳು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಂಜಿತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾದೇಗೌಡ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಮಂಗಲ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ರಾಜೇಶ್ವರಿ, ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಗ್ರಾಪಂ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.