Advertisement

ಹಾವು ಕಚ್ಚಿದಾಗ ಧೈರ್ಯದಿಂದ ಚಿಕಿತ್ಸೆ ಪಡೆಯಿರಿ

09:10 PM Apr 27, 2019 | Lakshmi GovindaRaj |

ದೊಡ್ಡಬಳ್ಳಾಪುರ: ಹಾವು ಕಚ್ಚಿದಾಗ ಭಯಪಡೆದೆ ಚಿಕಿತ್ಸೆ ಪಡೆದರೆ ವಾಸಿಯಾಗುತ್ತದೆ. ಇದಕ್ಕೆ ನಂಬಿಕೆ, ಧೈರ್ಯವನ್ನು ಹೊಂದಿರುವುದು ಮುಖ್ಯ ಎಂದು ಉರುಗ ತಜ್ಞ ಡಿ.ಎಸ್‌.ಮುರುಳಿಕೃಷ್ಣ ಹೇಳಿದರು.

Advertisement

ನಗರಸಭೆ ಸಮೀಪದ ಮೈ.ತಿ.ಶ್ರೀಕಂಠಯ್ಯ ಉದ್ಯಾನದಲ್ಲಿ ವಾಯು ವಿಹಾರಿಗಳ ಸಂಘದ ವತಿಯಿಂದ ನಡೆದ ಹಾವು ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ 294 ವಿವಿಧ ಪ್ರಬೇಧಗಳ ಹಾವುಗಳಿವೆ. ನಮ್ಮ ರಾಜ್ಯದಲ್ಲಿ 34 ಬಗೆಯ ಹಾವುಗಳಿವೆ. ಇವುಗಳ ಪೈಕಿ 10 ಮಾತ್ರ ವಿಷ ಪೂರಿತ ಹಾವುಗಳಿವೆ.

ನಮ್ಮ ತಾಲೂಕಿನ ಹಾಗೂ ಬೆಂಗಳೂರು ಗ್ರಾಮಾಂತರ ಸುತ್ತಮುತ್ತ 4 ಬಗೆಯ ಹಾವುಗಳು ಮಾತ್ರ ವಿಷ ಪೂರಿತವಾಗಿವೆ. ಇವುಗಳಲ್ಲಿ ನಾಗರಹಾವು, ರಕ್ತಮಂಡಲ, ಕೊಳಕು ಮಂಡಲ ಹಾಗೂ ಕಟ್ಲುಹಾವು ವಿಷದ ಹಾವುಗಳಾಗಿವೆ. ಕಟ್ಲುಹಾವು ಅತ್ಯಂತ ಹೆಚ್ಚು ವಿಷವನ್ನು ಹೊಂದಿರುವ ಹಾವು ಎಂದರು.

ಹಾವು 20 ವರ್ಷಗಳ ಕಾಲ ಜೀವಂತ: ಹಾವುಗಳು ಸರಾಸರಿ 20 ವರ್ಷಗಳ ಕಾಲ ಬದುಕಲಿವೆ. ಒಂದು ಹಾವು ವರ್ಷಕ್ಕೆ 200 ಇಲಿಗಳನ್ನು ತಿನ್ನಲಿದೆ. ಹಾವುಗಳು ಇಲ್ಲದೇ ಹೋದರೆ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಆಹಾರ ಧಾನ್ಯ ಇಲಿಗಳ ಪಾಲಾಗಲಿವೆ. ಇದರಿಂದ ಕೃಷಿಕರು ಸಾಕಷ್ಟು ನಷ್ಟವನ್ನು ಹೊಂದಬೇಕಾಗಲಿದೆ. ಹೀಗಾಗಿ ಪ್ರಕೃತಿಯಲ್ಲಿನ ಸಹಜ ನಿಯಂತ್ರಣದಲ್ಲಿ ಹಾವುಗಳ ಪಾತ್ರವು ದೊಡ್ಡದಾಗಿದೆ ಎಂದು ಹೇಳಿದರು.

ಇಂದಿ ದಿನಗಳಲ್ಲಿ ಹಾವುಗಳ ಸಂತತಿ ಕ್ಷೀಣ: ಭೂಮಿಯ ಮೇಲೆ ಇರುವ ಇತರೆ ಪ್ರಾಣಿಗಳಂತೆ ಹಾವುಗಳು ಸಹ ಇರಬೇಕು. ತಿಳುವಳಿಕೆಯ ಕೊರತೆಯಿಂದಾಗಿ ಹಾಗೂ ನಗರ ಬೆಳೆದಂತೆ ಹಾವುಗಳ ಸಂತತಿಯು ಕ್ಷೀಣಿಸುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ, ತಿಳುವಳಿಕೆ ಅಗತ್ಯ. ನಗರ ಅಥವಾ ಗ್ರಾಮಾಂತರ ಪ್ರದೇಶದ ಯಾರದೇ ಮನೆ ಒಳಗೆ ಅಥವಾ ಮನಯ ಅಂಗಳದಲ್ಲಿ ಇದ್ದರೆ ಮಾತ್ರ ಹಾವನ್ನು ಹಿಡಿದು ದೂರದ ಕಾಡಿಗೆ ಬಿಡಲಾಗುತ್ತದೆ. ಮನೆಯಿಂದ ಹೊರ ಭಾಗದಲ್ಲಿ ಇದ್ದರೆ ಹಾವನ್ನು ಹಿಡಿಯುವುದಿಲ್ಲ ಎಂದು ಹೇಳಿದರು.

Advertisement

ಈ ಸಂದರ್ಭದಲ್ಲಿ ಹಾವು ಕಚ್ಚಿದಾಗ ಮಾಡಬೇಕಾಗಿರುವ ಪ್ರಥಮ ಚಿಕಿತ್ಸೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು. ಉಪನ್ಯಾಸದಲ್ಲಿ ಭಾಗವಹಿಸಿದ್ದ ಮಹಿಳೆಯರು ಹಾಗೂ ಮಕ್ಕಳು ಉಪನ್ಯಾಸದ ನಂತರ ಜೀವಂತ ಹಾವನ್ನು ಮುಟ್ಟಿ ಅನುಭವ ಪಡೆದು ಪುಳಕಿತರಾದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಯು ವಿಹಾರಿಗಳ ಸಂಘದ ಅಧ್ಯಕ್ಷೆ ಕಮಲಮ್ಮ ವಹಿಸಿದ್ದರು. ಕಾರ್ಯದರ್ಶಿ ಬೋರ್‌ ವೆಲ್‌ಬಾಬು, ಮುಖಂಡರಾದ ಚಂದ್ರಪ್ಪ, ವಿಶ್ವನಾಥ್‌, ಭಾಸ್ಕರ್‌ ಹಾಜರಿದ್ದರು. ಮನೆ ಅಂಗಳದಲ್ಲಿನ ಹಾವು ಹಿಡಿಯಲು ಹಾಗೂ ಹಾವುಗಳ ಬಗ್ಗೆ ಮಾಹಿತಿಗೆ 9241299745, 9986838460 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next