Advertisement

ಜ್ವರ ಬಂದ ತಕ್ಷಣ ಚಿಕಿತ್ಸೆ ಪಡೆಯಿರಿ

09:21 PM Mar 06, 2020 | Team Udayavani |

ಹುಣಸೂರು: ಕೊರೋನಾ ರೋಗವು ಯಾವುದೇ ಪದಾರ್ಥ ತಿಂದಲ್ಲಿ ಬರುವ ಕಾಯಿಲೆಯಲ್ಲ, ಕೋಪಿಡ್‌ ಎಂಬ ವೈರಸ್‌ನಿಂದ ಹರಡುವ ರೋಗವಾಗಿದೆ. ನಿರಂತರ ನೆಗಡಿ, ಕೆಮ್ಮ, ಜ್ವರದಿಂದ ಬಳಲುತ್ತಿರುವವರು ಕೂಡಲೇ ಚಿಕಿತ್ಸೆ ಪಡೆಯಬೇಕು ಎಂದು ಹಿರಿಯ ಆರೋಗ್ಯ ಸಹಾಯಕ ಶಿವನಂಜು ತಿಳಿಸಿದರು.

Advertisement

ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷೆ ಪದ್ಮಮ್ಮ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಅ ಧಿಕಾರಿಗಳ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶಾಲೆಗಳಲ್ಲಿ ಮಾಹಿತಿ ನೀಡಲಾಗಿದೆ. ಪ್ರತಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.

ಪ್ರತಿ ಗ್ರಾಪಂನಲ್ಲೂ ಮಹಿಳಾ ದಿನಾಚರಣೆ: ತಾಲೂಕು ಪಂಚಾಯಿತಿ ಇಒ ಗಿರೀಶ್‌ ಮಾತನಾಡಿ, ಈ ಬಾರಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮಾ.8ರ ಬದಲಾಗಿ ಮಾ.7ರಂದು ಶನಿವಾರ ನಡೆಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಎಲ್ಲಾ ಗ್ರಾಮ ಪಂಚಾಯ್ತಿಯಲ್ಲೂ ಕಡ್ಡಾಯವಾಗಿ ಆಚರಿಸಬೇಕೆಂದು ಎಂದು ಸೂಚಿಸಿದರು.

ಮಾ.8ರಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಬೇಕಿದ್ದು, ಅಂದು ಭಾನುವಾರವಾದ್ದರಿಂದ ಮಾ.7ರಂದು ಆಚರಿಸಲು ಸರ್ಕಾರ ಸೂಚಿಸಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಅಂದಿನ ಕಾರ್ಯಕ್ರಮದಲ್ಲಿ ಸಿಡಿಪಿಒ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಇಲಾಖೆಯಲ್ಲಿ ಜಾರಿಗೊಂಡಿರುವ ಮಾತೃವಂದನಾ, ಮಾತೃಪೂರ್ಣ, ಭಾಗ್ಯಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಗ್ರಾಮೀಣ ಮಹಿಳೆಯರಿಗೆ ಮಾಹಿತಿ ಒದಗಿಸುವುದು ಕಡ್ಡಾಯವಾಗಿದೆ. ಹೀಗಾಗಿ ತಾಲೂಕು ಪಂಚಾಯ್ತಿ ವತಿಯಿಂದ ಶೀಘ್ರ ಮಾಹಿತಿ ನೀಡಲಾಗುವುದು ಎಂದರು.

ಅನುದಾನ: ಸಿಡಿಪಿಒ ಕುಮಾರ್‌ ಮಾತನಾಡಿ, ತಾಲೂಕಿನ 264 ಅಂಗನವಾಡಿ ಕೇಂದ್ರಗಳಿದ್ದು, ಕಳೆದೆರಡು ವರ್ಷಗಳಿಂದ 28 ಅಂಗನವಾಡಿ ಕೇಂದ್ರಗಳಿಗೆ ನೂತನ ಕಟ್ಟಡ ನಿರ್ಮಾಣ ಕಾರ್ಯ ನಡೆದಿದ್ದು, ನರೇಗಾ ಯೋಜನೆಯಡಿ 5 ಲಕ್ಷ ಹಾಗೂ ಇಲಾಖೆ ವತಿಯಿಂದ 3 ಲಕ್ಷ ರೂ. ಒದಗಿಸಲಾಗಿದೆ. ಈ ಪೈಕಿ ಗಾಗೇನಹಳ್ಳಿ, ಹನಗೋಡು ಮತ್ತು ಧರ್ಮಾಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಕ್ಕೆ ಕಾಮಗಾರಿಗೆ ಶೀಘ್ರ ಅನುದಾನ ಒದಗಿಸುವುದು ಎಂದು ಭರವಸೆ ನೀಡಿದರು.

Advertisement

ಜಾಬಗೆರೆ ಕೇಂದ್ರದ ಪ್ರಕರಣ: ಕಳೆದ ಎರಡು ತಿಂಗಳ ಹಿಂದೆ ಜಾಬಗೆರೆ ಅಂಗನವಾಡಿ ಕೇಂದ್ರದಲ್ಲಿ ಮಗುವೊಂದನ್ನು ಕೇಂದ್ರದಲ್ಲೇ ಬಿಟ್ಟು ಬೀಗ ಹಾಕಿಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಪಂ ಅಧ್ಯಕ್ಷರನ್ನೊಳಗೊಂಡ ಸಮಿತಿ ರಚಿಸಿದ್ದು, ಘಟನೆಗೆ ಕಾರಣರಾಗಿದ್ದ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯನ್ನು ಬೇರೆಡೆಗೆ ವರ್ಗಾಯಿಸಲು ಸೂಚಿಸಿತ್ತು. ಅದರಂತೆ ಶಿಕ್ಷಕಿಯನ್ನು ವರ್ಗಾವಣೆ ಮಾಡಲಾಗಿದ್ದು, ಸಹಾಯಕಿಯ ವೇತನ ತಡೆಹಿಡಿಯಲಾಗಿದೆ. ಶೀಘ್ರ ಆಕೆಯನ್ನು ವರ್ಗಾಯಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕ ಲೋಕೇಶ್‌, ಸಹಾಯಕ ಲೆಕ್ಕಾಧಿಕಾರಿ ಗೀತಾ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಮಕ್ಕಳು ಅಸ್ವಸ್ಥ ಪ್ರಕರಣ – ತರಾಟೆ: ಹನಗೋಡು ಹೋಬಳಿ ಕಿರಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 15 ದಿನಗಳ ಹಿಂದೆ ಹಾಲು ಕುಡಿದು 20ಕ್ಕೂ ಮಕ್ಕಳು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಗೋಡು ವೈದ್ಯಾಧಿಕಾರಿ ನೀಡಿದ ವರದಿ ಪ್ರಕಾರ, ಶಾಲೆಯಲ್ಲಿ ನೀಡಿದ ಹಾಲಿನ ಪುಡಿಯನ್ನು ಸರಿಯಾಗಿ ಮಿಶ್ರಣ ಮಾಡದ ಕಾರಣ ಮಕ್ಕಳು ಅದನ್ನು ಕುಡಿದು ಅಸ್ವಸ್ಥರಾಗಿರುವುದು ಕಂಡು ಬಂದಿದೆ.

ಸಂಬಂಧಪಟ್ಟ ಅಡುಗೆ ಸಹಾಯಕಿಯರಿಗೆ ನೋಟಿಸ್‌ ನೀಡಿದ್ದೀರಾ ಎಂದು ತಾಪಂ ಇಒ ಗಿರೀಶ್‌ ಪ್ರಶ್ನಿದರು. ಎಚ್ಚರಿಕೆ ನೀಡಿದ್ದೇವೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರ ಪ್ರತಿಕ್ರಿಯಿಸಿದರು. ವರದಿಯಲ್ಲಿ ಸ್ಪಷ್ಟವಾಗಿ ಕಾರಣ ತಿಳಿಸಿದ್ದರೂ ಸಂಬಂಧಪಟ್ಟವರಿಗೆ ಈವರೆಗೂ ಏಕೆ ನೋಟಿಸ್‌ ನೀಡಲಿಲ್ಲ ಎಂದು ಇಒ ತರಾಟೆಗೆ ತೆಗೆದುಕೊಂಡು, ಶೀಘ್ರ ನೋಟೀಸ್‌ ಜಾರಿಗೊಳಿಸಲು ಸೂಚಿಸಿದರು.

3.93 ಲಕ್ಷ ಸಸಿಗಳ ಪಾಲನೆ: ಅರಣ್ಯ ಇಲಾಖೆ(ಸಾಮಾಜಿಕ ವಿಭಾಗ)ಯು ಈ ಬಾರಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯು ಸೇರಿದಂತೆ ವಿವಿಧ ಯೋಜನೆಗಳ ಜಾರಿಗೆ ಅನುಕೂಲವಾಗುವಂತೆ ಒಟ್ಟು 3.93 ಲಕ್ಷ ಸಸಿ ಮಡಿಗಳನ್ನು ಪಾಲನೆ ಮಾಡುತ್ತಿದೆ ಎಂದು ಇಲಾಖೆ ಡಿಆರ್‌ಎಫ್‌ಒ ಮಲ್ಲಿಕಾರ್ಜುನ ಸಭೆಗ ಮಾಹಿತಿ ನೀಡಿದರೆ, ರೆಗ್ಯುಲರ್‌ ವಿಭಾಗದಲ್ಲಿ 33 ಸಾವಿರ ಸಸಿಗಳನ್ನು ಪೋಷಿಸಿದ್ದು, 12 ಕಿ.ಮೀ.ಉದ್ದ ವ್ಯಾಪ್ತಿಯಲ್ಲಿ ರಸ್ತೆಬದಿ ಸಸಿ ನೆಡಲು ಹಾಗೂ 12 ಕಿ.ಮೀ.ಉದ್ದ ಕಾಲುವೆ ಬದಿಯಲ್ಲಿ ಸಸಿಗಳನ್ನು ನೆಡಲಾಗುವುದು ಎಂದು ಆರ್‌ಎಫ್‌ಒ ರುದ್ರೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next