Advertisement

ಕಾಯಿಲೆಗೆ ಶೀಘ್ರ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ

05:06 PM May 16, 2022 | Team Udayavani |

ರಾಣಿಬೆನ್ನೂರ: ಜೀವನದಲ್ಲಿ ಹಣ, ಆಸ್ತಿ, ಅಂತಸ್ತು, ವಜ್ರ, ವೈಡೂರ್ಯಕ್ಕಿಂತ ಆರೋಗ್ಯವೇ ಬಹು ಮುಖ್ಯ. ಹಾಗಾಗಿ, ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಸಣ್ಣಪುಟ್ಟ ಕಾಯಿಲೆಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಬಾಳಬೇಕೆಂದು ಖ್ಯಾತ ಆರೋಗ್ಯ ತಜ್ಞ ಹಾಗೂ ಕಂಪಾನಿಯೋ ಸೌಥ್‌ ಝೋನ್‌ ಮುಖ್ಯಸ್ಥ ರತ್ನಾಕರ ಶೆಟ್ಟಿ ಹೇಳಿದರು.

Advertisement

ಇಲ್ಲಿನ ಲಯನ್ಸ್‌ ಕ್ಲಬ್‌ ಹಾಗೂ ಕಂಪಾನಿಯೋ ಸಂಸ್ಥೆ ಆಶ್ರಯದಲ್ಲಿ ಲಯನ್ಸ್‌ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಉಚಿತ ಫೂಟ್‌ ಪಲ್ಸ್‌ ಥೆರಪಿ ಶಿಬಿರ ಹಾಗೂ ಉಚಿತ ಆರೋಗ್ಯ ಮಾಹಿತಿ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಯಾರೂ ಕೂಡ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಭಾವನೆ ತಾಳದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.

ದೇಹದಲ್ಲಿ ಸಮರ್ಪಕವಾಗಿ ರಕ್ತ ಸಂಚಾರ ಆಗುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ದೇಹದಲ್ಲಿ ರಕ್ತ ಸಂಚಾರ ವ್ಯತ್ಯಯವಾದರೆ ಹಲವಾರು ರೋಗಗಳು ಉತ್ಪತ್ತಿಯಾಗಿ ಉಲ್ಬಣಗೊಂಡು ಮುಂದೆ ಜೀವಕ್ಕೆ ಅಪಾಯ ತಂದೊಡ್ಡುವ ಸಂದರ್ಭಗಳು ಬರಬಹುದು. ಹಾಗಾಗಿ, ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದರು.

ಇಂದಿನ ಆಧುನಿಕತೆಯ ಜೀವನದಲ್ಲಿ ಮನುಷ್ಯ ಒತ್ತಡದ ಮಧ್ಯೆ ಯಂತ್ರದಂತೆ ಕೆಲಸ ಮಾಡುವ ಪದ್ಧತಿಯಲ್ಲಿ ಜೀವನ ನಡೆಸುತ್ತಾನೆ. ವಾಯುವಿಹಾರ, ವ್ಯಾಯಾಮ, ಯೋಗಾಸನಗಳು ಸೇರಿದಂತೆ ಇತರ ಶ್ರಮಿಕ ಕಾರ್ಯಗಳನ್ನು ಮಾಡಲು ಮನುಜರಿಗೆ ಸಮಯವಿಲ್ಲದಂತಾಗಿದೆ. ಇದರಿಂದ ಆತನಲ್ಲಿ ಆಲಸ್ಯ, ನಿರಾಸಕ್ತಿ ಹೆಚ್ಚಾಗಿ ಜೀವನ ಜಿಗುಪ್ಸೆ ಆಗಬಹುದು ಎಂದರು.

ಜನರ ಆರೋಗ್ಯ ಸಮಸ್ಯೆ ಮನಗಂಡು ಮೊದಲ ಭಾರಿಗೆ 2014ರಲ್ಲಿ ಉಚಿತ ಫೂಟ್‌ ಪಲ್ಸ್‌ ಥೆರಪಿ ಶಿಬಿರವನ್ನು ದೇಶಾದ್ಯಂತ ಪರಿಚಯಿಸಲಾಗಿದೆ. 42 ದೇಶಗಳಲ್ಲಿ ಇದನ್ನು ಜನರು ಉಪಯೋಗಿಸುತ್ತಿದ್ದಾರೆ. 350ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಈ ಥೆರಪಿಯಿಂದ ರಕ್ತ ಪರಿಚಲನೆ, ನರಗಳ ಯಾವುದೇ ರೀತಿಯ ಸರಳ ಮತ್ತು ದೀಘ್ರಕಾಲಿನ ಸಮಸ್ಯೆಗಳನ್ನು ಔಷಧ ರಹಿತವಾಗಿ ಅಡ್ಡಪರಿಣಾಮವಿಲ್ಲದೇ ನಿವಾರಿಸಬಹುದಾಗಿದೆ ಎಂದರು.

Advertisement

ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ 10 ಲಕ್ಷಕ್ಕಿಂತ ಹೆಚ್ಚಿನ ಜನರು ಇದರ ಪರಿಹಾರ ಕಂಡುಕೊಂಡಿದ್ದಾರೆ. 30 ನಿಮಿಷದ ಈ ಥೆರಪಿಯಿಂದ 5 ಕಿಮೀ ನಷ್ಟು ವಾಕಿಂಗ್‌ ಮಾಡಿದಷ್ಟೇ ರಕ್ತ ಸಂಚಾರವಾಗುತ್ತದೆ. ಮಧುಮೇಹ, ರಕ್ತದೊತ್ತಡ, ಸಂಧಿ ವಾತ, ವೇರಿಕೋಸ್‌ ವೇನ್‌, ಸ್ನಾಯು ಸೆಳೆತ, ಊತ, ನಿದ್ರಾಹೀನತೆ, ಪಾರ್ಶ್ವವಾಯು , ಬೆನ್ನು ನೋವು, ಬೊಜ್ಜು ನಿವಾರಣೆಯಂತಹ ಕಾಯಿಲೆಗಳನ್ನು ನಿವಾರಿಸುವಲ್ಲಿ ಈ ಥೆರಪಿ ಪದ್ಧತಿ ಸಹಕಾರಿಯಾಗಲಿದೆ ಎಂದರು. ನಗರದ ಲಯನ್ಸ್‌ ಶಾಲೆಯಲ್ಲಿ ಏ.30 ರಿಂದ ಆರಂಭಗೊಂಡಿರುವ ಉಚಿತ ಈ ಥೆರಪಿ ಶಿಬಿರ ಮೇ 17 ರವರೆಗೂ ನಡೆಯಲಿದೆ. ಇದರ ಪ್ರಯೋಜನವನ್ನು ನಾಗರಿಕರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಲಯನ್ಸ್‌ ಶಾಲೆಯ ಅಧ್ಯಕ್ಷ ಎಂ.ಎಸ್‌. ಅರಕೇರಿ, ಟಿ.ವೀರಣ್ಣ, ಪ್ರಭು ಹಲಗೇರಿ, ರಾಜು ಅಡಿವೆಪ್ಪನವರ, ಅಶೋಕ ಹೊಟ್ಟಿಗೌಡ್ರ, ಕೊಟ್ರೇಶಪ್ಪ ಎಮ್ಮಿ, ಟಿ.ಸಿ.ಪಾಟೀಲ, ಥೆರಪಿಯ ಜಿಲ್ಲಾ ಮುಖ್ಯಸ್ಥ ನಾಗರಾಜ ಹುಣಸಿಮನೆ, ನಾಗೇಂದ್ರ ಪೂಜಾರಿ, ಅಶೋಕ ಹುಣಸಿಮನೆ, ಕೌಶಿಕ್‌ ಸೇರಿದಂತೆ ಮತ್ತಿತರರು ತರಬೇತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next