ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು. ಮಾತೃಭಾಷೆಗೇ ಆದ್ಯತೆ ಸಿಗಬೇಕು. ಕನ್ನಡ ನಮ್ಮ ಉಸಿರಾದರೆ, ಮಂತ್ರವಾದರೆ ಮಾತ್ರ ರಾಜ್ಯೋತ್ಸವ ಆಚರಣೆ ಸಾರ್ಥಕ.
ಕನ್ನಡದ ಕುರಿತಾದ ನಮ್ಮ ಕಳಕಳಿ ಪ್ರತಿ ವರ್ಷವೂ ನವೆಂಬರ್ ತಿಂಗಳಲ್ಲಿ ದಿಢೀರನೆ ಜಾಗೃತವಾಗುತ್ತದೆ. ರಾಜ್ಯೋತ್ಸವ ಆಚರಣೆ ಮುಗಿದರೆ ಸಾಕು, ಅಷ್ಟೇ ವೇಗವಾಗಿ ಮರೆಯಾಗುತ್ತದೆ. ಮಾತೃಭಾಷೆ ಕುರಿತಾಗಿ ನಮ್ಮ ಕಾಳಜಿ ಮತ್ತೂಮ್ಮೆ ಜಾಗೃತವಾಗಬೇಕಾದರೆ ವರ್ಷ ಕಾಯಬೇಕು. ಸುಂದರವಾದ ಲಿಪಿ, ಸಾಹಿತ್ಯ ಶ್ರೀಮಂತಿಕೆ ಅದ್ಭುತವಾಗಿದ್ದರೂ, ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಕಷ್ಟಪಟ್ಟು ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದದ್ದೇನೋ ಆಯಿತು. ಆದರೆ ಈ ಅವಕಾಶವನ್ನು ಭಾಷೆಯನ್ನು ಕಟ್ಟಲಿಕ್ಕೆ, ಭಾಷಿಗರ ಬದುಕನ್ನು ಕಟ್ಟಲಿಕ್ಕೆ ಇನ್ನೂ ಆದ್ಯತೆವಾರು ಬಳಸಿಕೊಳ್ಳುತ್ತಿಲ್ಲ ಎಂಬುದು ಸತ್ಯ. ಭಾಷೆಯ ಕುರಿತಾದ ಸಂಶೋಧನೆ, ಅಧ್ಯಯನ ಇತ್ಯಾದಿಗಳೂ ಮರೆಗೆ ಸರಿದಿವೆ.
ಕನ್ನಡ ಆಡಳಿತ ಭಾಷೆಯಾಗಬೇಕು. ಅದು ನಮ್ಮ ಹಕ್ಕು. ಆದರೆ, ಇನ್ನೂ ಹಲವು ಕಚೇರಿಗಳಲ್ಲಿ ಆಂಗ್ಲ ಭಾಷೆಗೇ ಆದ್ಯತೆ ನೀಡಲಾಗುತ್ತದೆ. ನಮ್ಮ ಜನಪ್ರತಿನಿಧಿಗಳೂ ಗಡಿ ಭಾಗಗಳಲ್ಲಿ ಮತ ಗಳಿಸಲಿಕ್ಕಾಗಿ ಪರಭಾಷೆಯನ್ನು ಮಾತನಾಡಿ ಜೈಕಾರ ಹಾಕಿಸಿಕೊಳ್ಳುತ್ತಿ ದ್ದಾರೆ. ಅವರಿಗೂ ಕನ್ನಡ ಆ ಹೊತ್ತಿನ ಲಾಭಕ್ಕಷ್ಟೇ ಬೇಕು. ಬಹುತೇಕ ಕಚೇರಿಗಳ ಕಡತಗಳಲ್ಲಿ ಇರುವುದು ಆಂಗ್ಲ ಭಾಷೆಯೇ. ಹೆಚ್ಚೇಕೆ? ಕನ್ನಡದಲ್ಲಿ ಕೊಟ್ಟ ಅರ್ಜಿಗೆ ಹಲವು ಸಂದರ್ಭಗಳಲ್ಲಿ ಕವಡೆ ಕಿಮ್ಮತ್ತೂ ಸಿಗದು. ನ್ಯಾಯಾಲಯ ಗಳಲ್ಲೂ ಕೆಲವು ನ್ಯಾಯಾಧೀಶರು ಮಾತ್ರ ಕಲಾಪಗಳನ್ನು ಕನ್ನಡದಲ್ಲಿ ನಿರ್ವಹಿಸುತ್ತಾರೆ, ತೀರ್ಪುಗಳನ್ನೂ ಕನ್ನಡದಲ್ಲೇ ಕೊಟ್ಟವರಿದ್ದಾರೆ. ಅದು ಬಿಟ್ಟರೆ, ವ್ಯವಹಾರ ಭಾಷೆಯಾಗಿ ಇಂಗ್ಲಿಷ್ ಬಳಕೆಯಲ್ಲಿದೆ. ಉತ್ತರ ಭಾರತೀಯ ಅಧಿಕಾರಿಗಳ ಮೂಲಕ ಬ್ಯಾಂಕ್‌ಗಳಲ್ಲಿ ಹಿಂದಿ ಹೇರಿಕೆಯ ಪ್ರಯತ್ನವೂ ನಿರಂತರವಾಗಿದೆ.
ಹಳ್ಳಿಗಳಲ್ಲಿ ಕನ್ನಡ ಶಾಲೆಗಳಲ್ಲಿ ಇರುವುದು ಬೆರಳೆಣಿಕೆ ಮಕ್ಕಳು. ಅವರಿಗೊಬ್ಬರೇ ಶಿಕ್ಷಕರು. ಕೆಲವೊಮ್ಮೆ ಅಷ್ಟೂ ಇಲ್ಲ. ಈ ಶಾಲೆಗಳ ಗೋಡೆಗಳು ಬೀಳುವಂತಿವೆ, ಛಾವಣಿ ಕುಸಿಯುವ ಸ್ಥಿತಿಯಲ್ಲಿದೆ. ಆದರೂ ದುರಸ್ತಿ ಮಾಡಿಸುವ ಮನಸ್ಸು ಸರಕಾರಕ್ಕಿಲ್ಲ. ಏಕೆಂದರೆ, ಒಂದಿಬ್ಬರು ವಿದ್ಯಾರ್ಥಿಗಳಿಗಾಗಿ ಕಟ್ಟಡ, ಸೌಲಭ್ಯ, ಶಿಕ್ಷಕರನ್ನು ಕೊಟ್ಟು ಕಲಿಸುವುದು ಲಾಭದಾಯಕವಲ್ಲ ಎಂಬುದು ಸರಕಾರದ ಅನಿಸಿಕೆ. ಕನ್ನಡದಲ್ಲೇ ಕಲಿಯುವ ಅನಿವಾರ್ಯತೆ ಇರುವ ಮಕ್ಕಳು ಪಕ್ಕದೂರಿಗೆ ನಡೆದು ಹೋಗುತ್ತಾರೆ, ಇಲ್ಲವೇ ಅರ್ಧದಲ್ಲೇ ಶಾಲೆ ಬಿಡುತ್ತಾರೆ.
ಸರಕಾರ ಶಾಲೆಗಳನ್ನು ಮುಚ್ಚುವುದರಲ್ಲೇ ಆಸಕ್ತಿ ತೋರುತ್ತಿದೆ. ಈ ವರ್ಷವೇ ಸುಮಾರು 40ಕ್ಕೂ ಹೆಚ್ಚು ಶಾಲೆಗಳಿಗೆ ಬೀಗ ಬಿದ್ದಿದೆ. ಸರಕಾರಿ ಶಾಲೆಗಳನ್ನು ಮುಚ್ಚಿ, ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ದೊಡ್ಡ ಲಾಬಿಯೇ ಇದೆ. ಶಾಲೆಗಳಿಗೆ ಬಾಗಿಲು ಹಾಕಿದರೆ ಜ್ಞಾನ ದೇಗುಲಗಳೇ ಮುಚ್ಚಿದಂತೆ ಎಂಬ ಪ್ರಜ್ಞೆ ಯಾರಿಗೂ ಇದ್ದಂತಿಲ್ಲ. ನಮ್ಮ ದೃಷ್ಟಿ ಏನಿದ್ದರೂ ರಾಜ್ಯೋತ್ಸವ ಪ್ರಶಸ್ತಿ ಮೇಲೆ. ಮಂತ್ರಿಗಳ ಶಿಫಾರಸು, ಪ್ರಭಾವಿಗಳ ಲಾಬಿಗಳ ಪರಿಣಾಮ ಅರ್ಹರು ಪ್ರಶಸ್ತಿಯಿಂದ ವಂಚಿತರಾಗುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಬಿಕರಿಗಿಟ್ಟ ಸರಕಿನಂತಾಗಿದೆ.
ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಸಲ ಸರಕಾರ ಎಂಟು ಕೋಟಿ ರೂ. ನೀಡಿತೆಂಬುದೇ ದೊಡ್ಡ ವಿಚಾರ. ಸಾಹಿತ್ಯ ಜಾತ್ರೆಯನ್ನಾದರೂ ಹಣದ ಚಿಂತೆಯಿಲ್ಲದೆ ಮಾಡುವ ಸ್ಥಿತಿ ಇಲ್ಲ. ಅಲ್ಲಿಯೂ ಅಧ್ಯಕ್ಷತೆ ವಹಿಸಲು, ಕವಿಗೋಷ್ಠಿ, ವಿಚಾರಗೋಷ್ಠಿಯಲ್ಲಿ ಭಾಗವಹಿಸಲು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ದೊಡ್ಡ ಲಾಬಿಯೇ ಇರುತ್ತದೆ. ಸದ್ದಿಲ್ಲದೆ ಭಾಷೆ, ಸಾಹಿತ್ಯದ ಸೇವೆ ಮಾಡುವವರಿಗೆ ಅವಕಾಶ ಸಿಗುತ್ತಿಲ್ಲ ಎಂಬ ಬೇಸರ ಪ್ರತಿ ಸಮ್ಮೇಳನದಲ್ಲೂ ಕಾಡುತ್ತದೆ. ಈ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳೂ ಅನುಷ್ಠಾನಕ್ಕೆ ಬರುತ್ತಿಲ್ಲ. ಪ್ರತಿ ವರ್ಷವೂ ಅವೇ ನಿರ್ಣಯಗಳನ್ನು ಪುನರಪಿ ಅಂಗೀಕರಿಸುವುದರೊಂದಿಗೆ ಸಮ್ಮೇಳನಕ್ಕೆ ತೆರೆ ಬೀಳುತ್ತದೆ. ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು. ಮಾತೃಭಾಷೆಗೇ ಆದ್ಯತೆ ಸಿಗಬೇಕು. ಕನ್ನಡ ನಮ್ಮ ಉಸಿರಾದರೆ, ಮಂತ್ರವಾದರೆ ಮಾತ್ರ ರಾಜ್ಯೋತ್ಸವ ಆಚರಣೆ ಸಾರ್ಥಕ. ನಮ್ಮ ಬದುಕಾಗಬೇಕು ಕನ್ನಡ.