Advertisement

ಏಜೆಂಟರನ್ನು  ದೂರವಿಟ್ಟು ಸರ್ಕಾರಿ ಸೌಲಭ್ಯ ಪಡೆಯಿರಿ

04:51 PM Aug 06, 2018 | |

ಅಳ್ನಾವರ: ಸರ್ಕಾರಿ ಆಡಳಿತ ಪಾರದರ್ಶಕವಾಗಿದ್ದು, ಅರ್ಹರು ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಏಜೆಂಟರನ್ನು ಅವಲಂಬಿಸಬಾರದು ಎಂದು ಧಾರವಾಡ ತಹಶೀಲ್ದಾರ್‌ ಪ್ರಕಾಶ ಕುದರಿ ಹೇಳಿದರು. ಕುಂಬಾರಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಸಾಧ್ಯವಾದಷ್ಟು ಬೇಡಿಕೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಸಲುವಾಗಿ ಜಾರಿಗೆ ತಂದಿರುವ ಈ ಕಾರ್ಯಕ್ರಮದಿಂದ ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬಹುದಾಗಿದೆ ಎಂದರು.

Advertisement

ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ಮಾಸಾಶನ ಪಡೆಯಲು ಫಲಾನುಭವಿಗಳು ನೇರವಾಗಿ ಕಚೇರಿಗೆ ಆಗಮಿಸಿ ಅರ್ಜಿ ಸಲ್ಲಿಸಬೇಕು. ಇದರಿಂದ ಏಜೆಂಟರನ್ನು ದೂರವಿಡಬಹುದಾಗಿದೆ. ಈಗಾಗಲೇ ಕಂದಾಯ ಇಲಾಖೆ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ಫಲಾನುಭವಿಗಳಿಗೆ ಮಾಸಾಶನ ಮಂಜೂರು ಮಾಡಿಸಲು ಪ್ರಯತ್ನಿಸುತ್ತಿದ್ದು, ಅಗತ್ಯ ದಾಖಲೆಗಳನ್ನು ಒದಗಿಸಿ ಯೋಜನೆ ಲಾಭ ಪಡೆದುಕೊಳ್ಳಬಹುದಾಗಿದೆ ಎಂದರು. ಎಲ್ಲಾ ಅ ಧಿಕಾರಿಗಳು ಕಾರ್ಯಕ್ರಮಕ್ಕೆ ಹಾಜರಾದಾಗ ಮಾತ್ರ ಇದರ ಲಾಭ ಜನರಿಗೆ ತಲುಪಲು ಸಾಧ್ಯವಿದೆ ಎಂದು ಸಾರ್ವಜನಿಕರು ದೂರಿದಾಗ ಪ್ರತಿಕ್ರಿಯಿಸಿದ ತಹಶೀಲ್ದಾರ್‌, ಜನಸ್ಪಂದನ ಕಾರ್ಯಕ್ರಮಕ್ಕೆ ಹಾಜರಾಗದ ಅ ಧಿಕಾರಿಗಳ ಮೇಲೆ ಕ್ರಮಕ್ಕೆ ಜಿಲ್ಲಾಧಿಕಾರಿಗೆ ವರದಿ ಮಾಡಲಾಗುವುದೆಂದು ತಿಳಿಸಿದರು.

127 ಶಾಲಾ ಕೊಠಡಿ ಶಿಥಿಲ: ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ ಮಾತನಾಡಿ, ಶಿಕ್ಷಣದ ಗುಣಮಟ್ಟದ ಕೊರತೆ ದೂರುಗಳು ಬಂದರೆ ಕರ್ತವ್ಯದಿಂದ ನುಣುಚಿಕೊಳ್ಳುವ ಶಿಕ್ಷಕರ ಮೇಲೆ ಸೂಕ್ತ ಕ್ರಮ ಕೈಕೊಳ್ಳಲು ಸಿದ್ಧ ಎಂದರು. ತಾಲೂಕಿನಲ್ಲಿ 127 ಕೊಠಡಿಗಳು ಪೂರ್ಣ ಶಿಥಿಲಗೊಂಡಿದ್ದು, ಕೆಲವಡೆ ಅನುಮತಿ ಕೋರಿ ಮೇಲಧಿ ಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಶಾಲೆಗಳಿಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆ ಸರಿಪಡಿಸಲು ಸಾರ್ವಜನಿಕರು ಒತ್ತಾಯಿಸಿದಾಗ ತಾಲೂಕಿನಲ್ಲಿ 245 ಶಾಲೆಗಳು ಇದ್ದು, ಕರ್ತವ್ಯದ ಒತ್ತಡದಲ್ಲಿ ಶಾಲೆಗಳಿಗೆ ಭೇಟಿ ನೀಡುವುದು ಸಾಧ್ಯ ಆಗುತ್ತಿಲ್ಲವೆಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಆಗ ಗ್ರಾಮಸ್ಥ ಅಶೋಕ ಸಾವಂತ ಆಕ್ಷೇಪಿಸಿ, ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಲು ಶಿಕ್ಷಣ ಇಲಾಖೆಯೇ ಕಾರಣವೆಂದು ಆರೋಪಿಸಿದರು. ಬೆಳೆ ವಿಮೆ ಬಗ್ಗೆ ರೈತರಲ್ಲಿ ಮಾಹಿತಿ ಕೊರತೆ ಇದ್ದು, ಇದರ ಬಗ್ಗೆ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಲು ಕೃಷಿ ಇಲಾಖೆ ಗಮನ ಹರಿಸಬೇಕೆಂದು ಕೋಗಿಲಗೇರಿ ಗ್ರಾಮದ ರೈತ ಮುಖಂಡ ಭರತೇಶ ಪಾಟೀಲ ಆಗ್ರಹಿಸಿದರು. ಗ್ರಾಪಂ ಮೂಲಕ ನೂರಕ್ಕೂ ಅಧಿಕ ಸೇವೆ ದೊರೆಯುತ್ತಿವೆ ಎಂದು ಹೇಳಲಾಗುತ್ತಿದೆ. ಆದರೆ ಯಾವೊಂದು ಸೇವೆ ಸಹ ದೊರೆಯುತ್ತಿಲ್ಲ ಎಂದು ನಾಗರಾಜ ಬುಡರಕಟ್ಟಿ ದೂರಿದರು.

ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ನಿಂಗಪ್ಪ ಘಾಟೀನ ಮಾತನಾಡಿದರು. ಗ್ರಾಪಂ ಅಧ್ಯಕ್ಷ ವಿಶ್ವಂಬರ ಬನಸಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಳ್ನಾವರ ತಹಶೀಲ್ದಾರ್‌ ಪಾರ್ವತಿ, ಕೆಎಎಸ್‌ ತರಬೇತಿ ಅಧಿಕಾರಿ ಶೇಖರಪ್ಪ, ಗ್ರಾಪಂ ಉಪಾಧ್ಯಕ್ಷೆ ಸುಶೀಲಾ ಹಿರೇಕೆರೂರ, ಸದಸ್ಯರಾದ ಮಲ್ಲಪ್ಪ ಗಾಣಿಗೇರ, ಅಶೋಕ ಜೋಡಟ್ಟಿ, ಎಪಿಎಂಸಿ ಉಪಾಧ್ಯಕ್ಷ ರಾಯಪ್ಪ ಹುಡೆದ, ಶಿರಸ್ತೇದಾರ ಟಿ.ಬಿ. ಬಡಿಗೇರ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next