ಬೆಂಗಳೂರು: ಗುಜರಿ ಹಾಕಿದ ವಾಹನಕ್ಕೆ ಪ್ರತಿಯಾಗಿ ದೊರೆಯುವ ತೆರಿಗೆ ರಿಯಾಯ್ತಿ ಪ್ರಮಾಣಪತ್ರವನ್ನು ಹೊಸ ವಾಹನ ಖರೀದಿಸುವ ಮತ್ತೂಬ್ಬ ವ್ಯಕ್ತಿಗೆ ವರ್ಗಾವಣೆಗೆ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಗುಜರಿ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಗುಜರಿ ನೀತಿ ಜಾರಿಗೆ ಸಿದ್ಧತೆಗಳು ನಡೆದಿದ್ದು, ಅದರಂತೆ ಗುಜರಿಗೆ ಹಾಕಿದ ವಾಹನಕ್ಕೆ ಪಾವತಿಸುತ್ತಿದ್ದ ತೆರಿಗೆ ಪ್ರಮಾಣ ಆಧರಿಸಿ ರಿಯಾಯ್ತಿ ದೊರೆಯಲಿದೆ. ಉದಾಹರಣೆಗೆ ಗುಜರಿಗೆ ಹಾಕಿದ ವಾಹನಕ್ಕೆ ಮಾಲಿಕರು ಒಂದು ಲಕ್ಷ ರೂ. ತೆರಿಗೆ ಪಾವತಿಸಿದ್ದರು ಅಂದುಕೊಳ್ಳೋಣ. ಆ ಪೈಕಿ 25 ಸಾವಿರ ರೂ. ಹೊಸ ವಾಹನ ಖರೀದಿಸುವಾಗ ತೆರಿಗೆ ವಿನಾಯಿತಿ ಸಿಗಲಿದೆ. ಒಂದು ವೇಳೆ ಹಳೆಯ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿಸಲು ಇಚ್ಛಿಸದಿದ್ದರೆ, ಆ ಪ್ರಮಾಣಪತ್ರವನ್ನು ನೀವು (ಗುಜರಿಗೆ ಹಾಕಿದ ವ್ಯಕ್ತಿ) ಹೊಸ ವಾಹನ ಖರೀದಿಸುವ ಬೇರೆ ವ್ಯಕ್ತಿಗೆ ವರ್ಗಾಯಿಸಲು ಕೂಡ ಅವಕಾಶ ಇದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಅನುಮೋದಿತ ನೀತಿಯಂತೆ ಮುಖ್ಯವಾಗಿ 15 ವರ್ಷ ಮೀರಿದ ವಾಹನಗಳನ್ನೆಲ್ಲಾ ಗುಜರಿಗೆ ಹಾಕಬೇಕೆಂದಿಲ್ಲ. ಸ್ವಯಂಪ್ರೇರಿತವಾಗಿ ಬಂದವರು ನೇರವಾಗಿ ಗುಜರಿ ಕೇಂದ್ರಕ್ಕೆ ವಾಹನಗಳನ್ನು ಕೊಂಡೊಯ್ಯಬಹುದು. ಆದರೆ, ಅವಧಿ ಮೀರಿದ ವಾಹನಗಳನ್ನು ಫಿಟ್‌ನೆಸ್ ಸರ್ಟಿಫಿಕೇಟ್‌ಗಾಗಿ ನೀಡುವ ಸಂದರ್ಭದಲ್ಲಿ ಯಾವುದೇ ವಾಹನ ಸತತ ಎರಡು ಬಾರಿ ಫಿಟ್‌ನೆಸ್ ಸರ್ಟಿಫಿಕೇಟ್ ಪಡೆಯುವಲ್ಲಿ ವಿಫಲವಾದರೆ, ಆ ವಾಹನವನ್ನು ಗುಜರಿಗೆ ಹಾಕಲೇಬೇಕಾಗುತ್ತದೆ.
ವಾಹನದಲ್ಲಿನ ಕಬ್ಬಿಣದ ತೂಕ ಆಧರಿಸಿ ಬೆಲೆ ನಿಗದಿ ಮಾಡಲಾಗುತ್ತದೆ. ಅದರ ಮೊತ್ತ ನೇರವಾಗಿ ವಾಹನ ಮಾಲೀಕರ ಖಾತೆಗೆ ಜಮೆಯಾಗಲಿದೆ. ಅಲ್ಲಿಂದ ಪ್ರಮಾಣ ಪತ್ರ ಪಡೆದು ಹೊಸ ವಾಹನ ಖರೀದಿ ಮಾಡುವಾಗ ರಿಯಾಯಿತಿ ಪಡೆಯಬಹುದಾಗಿದೆ.
ಎರಡು ದಿನದಲ್ಲಿ ಅರ್ಜಿ ಆಹ್ವಾನ: ನೋಂದಾಯಿತ ವಾಹನ ಗುಜರಿ ಕೇಂದ್ರಗಳನ್ನು (ಆರ್‌ವಿಎಸ್‌ಎಫ್) ತೆರೆಯಲು ಸಾರಿಗೆ ಇಲಾಖೆ ತಯಾರಿ ನಡೆಸುತ್ತಿದ್ದು, 3 ತಿಂಗಳಲ್ಲಿ ಗುಜರಿ ಕೇಂದ್ರಗಳು ಅಸ್ತಿತ್ವಕ್ಕೆ ಬರಲಿವೆ. ಈ ಸಂಬಂಧ ಆಸಕ್ತರಿಂದ ಸಾರಿಗೆ ಇಲಾಖೆ ಎರಡು ದಿನಗಳಲ್ಲಿ ಅರ್ಜಿ ಸ್ವೀಕರಿಸಲಿದ್ದು, ಹತ್ತು ಕೋಟಿಗೂ ಹೆಚ್ಚು ವಹಿವಾಟು ನಡೆಸಿರುವ ಕಂಪನಿ ಅಥವಾ ವ್ಯಕ್ತಿ ಅರ್ಜಿ ಸಲ್ಲಿಸಲು ಅವಕಾಶ ಇದೆ. ಗುಜರಿಗೆ ಬರುವ ವಾಹನಗಳನ್ನು ನಿಲ್ಲಿಸಲು ಅಗತ್ಯ ಜಾಗ ಇರಬೇಕಾಗುತ್ತದೆ. ಜಾಗ ಸಿದ್ಧ ಇದ್ದವರು ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಒಪ್ಪಿಗೆ ಪತ್ರ, ಕಾರ್ಮಿಕ ಇಲಾಖೆಯಿಂದ ಪ್ರಮಾಣಪತ್ರ ಪಡೆಯಬೇಕು. ಗುಜರಿ ಕೇಂದ್ರಕ್ಕೆ ಬೇಕಿರುವ ಯಂತ್ರಗಳನ್ನು ಅಳವಡಿಕೆ ಮಾಡಿಕೊಂಡ ಬಳಿಕ ಸಾರಿಗೆ ಇಲಾಖೆಯಿಂದ ಪರವಾನಗಿ ನೀಡಲಾಗುತ್ತದೆ. ಆ ಕೇಂದ್ರದವರೇ ಆನ್‌ಲೈನ್‌ನಲ್ಲಿ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಎನ್‌ಒಸಿ (ನಿರಾಕ್ಷೇಪಣ ಪತ್ರ) ಪಡೆದುಕೊಳ್ಳುತ್ತಾರೆ. ಪೊಲೀಸ್ ಅಥವಾ ಸಾರಿಗೆ ಇಲಾಖೆಗೆ ವಾಹನಗಳ ಮಾಲೀಕರು ಅರ್ಜಿ ಸಲ್ಲಿಸಬೇಕಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.