ಬಾಗಲಕೋಟೆ: ಕಳೆದ 14 ದಿನಗಳಿಂದ ಹೋರಾಟ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‌ಒಜಿಲ್ಲಾ ಸಂಚಾಲಕಿ ಅಭಯಾ ದಿವಾಕರ್ ಮಾತನಾಡಿ, ಅತಿಥಿ ಉಪನ್ಯಾಸಕರು ಕಳೆದ 14 ದಿನಗಳಿಂದ ಅನಿರ್ದಿಷ್ಟಾವಧಿವರೆಗೆ ತರಗತಿ ಬಹಿಷ್ಕರಿಸಿ ಮುಷ್ಕರ ನಡೆಸಿದ್ದಾರೆ. ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸುವವರೆಗೂ ಅವರ ಹೋರಾಟ ಮುಂದುವರಿಸುವ ನಿರ್ಧಾರ ರಾಜ್ಯದ ಅತಿಥಿ ಉಪನ್ಯಾಸಕರು ಕೈಗೊಂಡಿದ್ದಾರೆ.
ರಾಜ್ಯದ ಪ್ರತಿಯೊಂದು ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತಿವೆ. ಈಗ ಅತಿಥಿ ಉಪನ್ಯಾಸಕರಿಲ್ಲದಿರುವುದರಿಂದ ತರಗತಿಗಳು ನಡೆಯುತ್ತಿಲ್ಲ. ಒಂದೆಡೆ ಎನ್‌ಇಪಿ-2020ರ ಹಠಾತ್ ಹೇರಿಕೆಯಿಂದಾಗಿ ರಾಜ್ಯದ ಎಲ್ಲ ವಿದ್ಯಾರ್ಥಿಗಳಲ್ಲಿ ನೂರೆಂಟು ಗೊಂದಲ ಸೃಷ್ಟಿಯಾಗಿವೆ. ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ದೊರೆತಿಲ್ಲ. ಪದವಿ ಕಾಲೇಜಿನ ಪ್ರಥಮ ಸೆಮಿಸ್ಟರ್‌ನ ಕೆಲವು ವಿಷಯಗಳಿಗೆ ಪಠ್ಯಪುಸ್ತಕ
ದೊರೆತಿಲ್ಲ. ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಯಾವ ಮಾದರಿಯಲ್ಲಿರುತ್ತವೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಅದರ ಮಧ್ಯದಲ್ಲಿ ಹತ್ತು ದಿನಗಳಿಂದ ತರಗತಿಗಳು ನಡೆದಿಲ್ಲ. ಜ್ಞಾನಾರ್ಜನೆಗೆ ಧಕ್ಕೆಯಾಗಿದ್ದು ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬ ಆತಂಕ ವಿದ್ಯಾರ್ಥಿಗಳಲ್ಲಿ ಸೃಷ್ಟಿಯಾಗಿದೆ ಎಂದರು.
ಹೋರಾಟ ನಿರತ ಅತಿಥಿ ಉಪನ್ಯಾಸಕರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಅವುಗಳನ್ನು ಕೂಡಲೇ ಈಡೇರಿಸಿ, ವಿದ್ಯಾರ್ಥಿಗಳಿಗೆ ಎಲ್ಲ ತರಗತಿಗಳು ನಡೆಯುವಂತೆ ಕ್ರಮಕೈಗೊಳ್ಳಬೇಕು. ಯಾವುದೇ ಪೂರ್ವ ತಯಾರಿಯಿಲ್ಲದೆ ಹಠಾತ್ತನೆ ಹೇರಿರುವ ರಾಷ್ಟ್ರಿಯ ಶಿಕ್ಷಣ ನೀತಿ ಕೈ ಬಿಡಬೇಕು ಎಂದು ಆಗ್ರಹಿಸಿದರು. ಅತಿಥಿ ಉಪನ್ಯಾಸಕ ಸಂಗಮೇಶ ಬ್ಯಾಲಿ ಮಾತನಾಡಿದರು. ಪ್ರತಿಭಟನೆಯಲ್ಲಿ ಅಥಿತಿ ಉಪನ್ಯಾಸಕರಾದ ಪಿ.ಕೆ. ಕಾರಬರಿ, ಸುನೀಲ ಮಠಪತಿ, ಹಾಗೂ ವಿದ್ಯಾವತಿ ಪಾಟೀಲ, ಸುರೇಖಾ ಕಡಪಟ್ಟಿ, ಲಕ್ಷ್ಮೀ, ಅಶ್ವಿನಿ ಉಪಸ್ಥಿತರಿದ್ದರು.