ದಾವಣಗೆರೆ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಗಣಿತ ಶಿಕ್ಷಕರು ಹೊಸ ಹೊಸ ಕೌಶಲ್ಯ, ತಂತ್ರಗಾರಿಕೆ ಬಗ್ಗೆ ತಿಳಿದುಕೊಂಡು ಸರಳೀಕೃತ ಬೋಧನೆ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ಹೇಳಿದರು.
ಬಿಐಇಟಿ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಶ್ರೀನಿವಾಸ ರಾಮಾನುಜಂ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗಣಿತ ಶಿಕ್ಷಕರ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಗಣಿತ ವಿಷಯವು ತುಂಬಾ ಕಠಿಣ ಎಂಬ ಭಾವನೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ. ಇಂತಹ ಮನೋಭಾವನೆಯನ್ನು ದೂರ ಮಾಡುವ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸರಳ ರೀತಿಯಲ್ಲಿ ಬೋಧನೆ ಮಾಡುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದರು.
ಗಣಿತ ವಿಷಯವನ್ನು ವಿದ್ಯಾರ್ಥಿಗಳು ಹಬ್ಬದ ರೀತಿಯಲ್ಲಿ ಆಚರಿಸಬೇಕು. ಒಂದು ಶಾಲೆಯ ಗಣಿತ ಫಲಿತಾಂಶ ಇಡೀ ಶಾಲೆಯ ಫಲಿತಾಂಶವನ್ನು ಸೂಚಿಸುತ್ತದೆ. ಹಾಗಾಗಿ ಶಿಕ್ಷಕರು ಇಂತಹ ಕಾರ್ಯಾಗಾರಗಳ ಸದ್ಬಳಕೆ ಮಾಡಿಕೊಳ್ಳಬೇಕು. ಗಣಿತ ವಿಷಯದ ಬಗ್ಗೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಇರುವ ಭಯವನ್ನು ದೂರ ಮಾಡುವ ಪಣತೊಡಬೇಕು ಎಂದು ಸಲಹೆ ನೀಡಿದರು.
ಬಿಐಇಟಿ ಕಾಲೇಜಿನ ಪ್ರಾಂಶುಪಾಲ ಡಾ| ಎಸ್. ಸುಬ್ರಮಣ್ಯಸ್ವಾಮಿ ಮಾತನಾಡಿ, ತಂತ್ರಜ್ಞಾನ ಬೆಳವಣಿಗೆಯಾಗುವ ರೀತಿಯಲ್ಲಿ ಇಂದಿನ ಮಕ್ಕಳು ಇರಬೇಕು. ಕೈಗಾರಿಕೆಗಳು ಸಹ ಬೆಳವಣಿಗೆ ಕಾಣುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ವೇಗದಲ್ಲಿ ತಂತ್ರಜ್ಞಾನ ಬೆಳೆಯುತ್ತಿದೆ. ಇಂದು ತಂತ್ರಜ್ಞಾನ ಇಷ್ಟೊಂದು ಬೆಳೆಯಲು ಗಣಿತವು ಪ್ರಮುಖ ಕಾರಣವಾಗಲಿದೆ. ಅಂಕಿ, ಅಂಶಗಳು ಇಲ್ಲದೇ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಮಕ್ಕಳಲ್ಲಿ ಇರುವ ಗಣಿತವೆಂಬ ಭೂತವನ್ನು ಹೊರಹಾಕಿ ವೈಜ್ಞಾನಿಕ ಕೌಶಲ್ಯಗಳ ಮೂಲಕ ಸರಳ ವಿಧಾನ ತಿಳಿಸಿ ಎಂದರು.
ಬಿಐಇಟಿ ನಿರ್ದೇಶಕ ಪ್ರೊ| ವೈ. ವೃಷಭೇಂದ್ರಪ್ಪ ಮಾತನಾಡಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಡಾ| ಬಿ.ಇ. ರಂಗಸ್ವಾಮಿ, ಜೆ. ಪದ್ಮನಾಭ್, ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ, ಬಿಐಇಟಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಕೆ.ಎಸ್. ಬಸವರಾಜಪ್ಪ, ಡಿಡಿಪಿಐ ಇಲಾಖೆ ವಿಜ್ಞಾನ ವಿಷಯ ಪರಿವೀಕ್ಷಕಿ ಆರ್.ಬಿ. ವಸಂತಕುಮಾರಿ, ಮಂಜುನಾಥ್ ರಂಗರಾಜನ್ ಉಪಸ್ಥಿತರಿದ್ದರು.