ಹಾನಗಲ್ಲ: ಐದು ವರ್ಷದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಕಳಂಕವಿಲ್ಲದೆ ದೇಶವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸಿ ದೇಶದ ಸಮಗ್ರ ಅಭಿವೃದ್ಧಿಗೆ ಕೈಜೊಡಿಸಬೇಕು ಎಂದು ಶಾಸಕ ಸಿ.ಎಂ. ಉದಾಸಿ ಮನವಿ ಮಾಡಿದರು.
ತಾಲೂಕಿನ ಅರಿಷಿಣಗುಪ್ಪಿಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇಂದು ಚುನಾವಣೆಯಲ್ಲಿ ಪ್ರಚಾರಕ್ಕಿಂತ ಅಪಪ್ರಚಾರವೇ ಜೋರಾಗಿದೆ. ವಿರೋಧ ಪಕ್ಷದವರಿಗೆ ಹೇಳಿಕೊಳ್ಳಲು ವಸ್ತುಗಳಿದೆ ಸಂಸದರು ಎಷ್ಟುಬಾರಿ ಕ್ಷೇತ್ರಕ್ಕೆ ಬಂದಿದ್ದಾರೆ? ಏನು ಮಾಡಿದ್ದಾರೆ ಎಂದು ವ್ಯರ್ಥ ಪ್ರಶ್ನೆ ಕೇಳುತ್ತಿದ್ದಾರೆ ಎಂದರು.
ದೇಶಕ್ಕೆ ಅನ್ನ ನೀಡುವ ರೈತ ಹಾಗೂ ಗಡಿ ಕಾಯುವ ಯೋಧರಿಗೆ ಪ್ರಥಮ ಪ್ರಾಶಸ್ತ ಸಿಗಬೇಕು ಎಂದು ಅಂದು ಲಾಲ ಬಹದ್ದೂರ ಶಾಸ್ತ್ರೀ ಹೇಳಿದ್ದರು. ಇಂದು ನರೇಂದ್ರ ಮೋದಿ ರೈತ ಹಾಗೂ ಯೋಧರಿಗೆ ಪ್ರಥಮ ಆಧ್ಯತೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ರಕ್ಷಣೆಗೆ 3 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರ ಫಲವಾಗಿ ಆಧುನಿಕ ಶಸ್ತಾಸ್ತ್ರಗಳನ್ನು ಹೊಂದಲು ಭಾರತೀಯರು ಶಕ್ತರಾಗಿದ್ದೇವೆ. ಪರಿಣಾಮ ವಿರೋಧಿ ದೇಶಗಳು ಭಾರತದತ್ತ ನೋಡಲೂ ಭಯಪಡುತ್ತಿವೆ. ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡಿ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ನೀಡುವ ಯೋಜನೆ ರೂಪಿಸಿದ್ದಾರೆ. ಇದನ್ನು ನೋಡಿದ ಕಾಂಗ್ರೆಸ್ಸಿಗರೂ ತಿಂಗಳಿಗೆ 6 ಸಾವಿರ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಅಸಾಧ್ಯ ಯೋಜನೆಗಳನ್ನು ನೀಡಿದರೆ ಆರ್ಥಿಕವಾಗಿ ದೇಶದ ಮೇಲೆ ಆಗುವ ಪರಿಣಾಮದ ಅರಿವು ಅವರಿಗಿಲ್ಲ ಎಂದರು.
ಬಿ.ಎಸ್.ಅಕ್ಕಿವಳ್ಳಿ, ಚಂದ್ರಪ್ಪ ಜಾಲಗಾರ, ರಾಜಣ್ಣ ಗೌಳಿ, ಉದಯ ವಿರುಪಣ್ಣನವರ, ಶಿವಲಿಂಗಪ್ಪ ತಲ್ಲೂರ, ಕೃಷ್ಣ ಈಳಿಗೇರ, ಸಿದ್ದಲಿಂಗೇಶ್ವರ ಉದಾಸಿ, ಸಂತೋಷ ಟೀಕೋಜಿ, ಪರಮೇಶ ಹುಲ್ಮನಿ, ಸಂತೋಷ ಭಜಂತ್ರಿ, ನಿಂಗನಗೌಡ ಗಿರಿಗೌಡ್ರು, ಬಸವರಾಜ ಅಂಗಡಿ ಹಾಗೂ ಮೊದಲಾದವರಿದ್ದರು.