Advertisement

ಥಳಿಸಿ ಹೊರಹಾಕಿದ ಪತಿ ಮುಗಿಸಲು ಪ್ರೇಮಿಗೆ ಸುಪಾರಿ!

11:28 AM Sep 09, 2017 | |

ಬೆಂಗಳೂರು: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಥಳಿಸಿದ ಪತಿಯನ್ನು ಪ್ರಿಯಕರನ ಜತೆ ಸೇರಿ ಹತ್ಯೆಗೈದು ಬಳಿಕ ಅಪರಿಚಿತರು ಕೃತ್ಯವೆಸಗಿದ್ದಾರೆ ಎಂದು ಬಿಂಬಿಸಿದ ಪತ್ನಿ ಮತ್ತು ಪ್ರಿಯಕರನನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕಮ್ಮಗೊಂಡನಹಳ್ಳಿಯ ನಿವಾಸಿ ವರಲಕ್ಷ್ಮೀ(28), ಹುಬ್ಬಳ್ಳಿ ಮೂಲದ ರಾಕೇಶ್‌ ಪಕೀರಪ್ಪ (23) ಬಂಧಿತರು. ಸಹೋದ್ಯೋಗಿ ಜತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಪ್ರಶ್ನಿಸಿದ ಪತಿ ಬಾಬು ಥಳಿಸಿದ್ದರಿಂದ ಕೋಪಗೊಂಡ ವರಲಕ್ಷ್ಮಿ, ಬಾಬುನನ್ನು ಕೊಳ್ಲಲು ಪ್ರಿಯಕರ ರಾಕೇಶ್‌ಗೆ ಸುಪಾರಿ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪೀಣ್ಯದ ಐಟಿಸಿ ಕಂಪನಿಯಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡುವ ವರಲಕ್ಷ್ಮೀ, ಖಾಸಗಿ ಕಂಪನಿ ನೌಕರ ಬಾಬು ಎಂಬಾತನನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇದೇ ವೇಳೆ ಐಟಿಸಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ರಾಕೇಶ್‌ ಮತ್ತು ವರಲಕ್ಷ್ಮಿ ನಡುವೆ ಪ್ರೀತಿ ಹುಟ್ಟಿದೆ.

ರಾಕೇಶ್‌ಗಾಗಿ ವರಲಕ್ಷ್ಮಿ ವಿಶೇಷ ಅಡುಗೆ ಮಾಡಿಕೊಂಡು ತಂದರೆ, ರಾಕೇಶ ವರಲಕ್ಷ್ಮೀಗೆ ವಿವಿಧ ಉಡುಗೊರೆ ನೀಡಿ ಸಂತೋಷ ಪಡಿಸುತ್ತಿದ್ದ. ಜತೆಗೆ ಹಣ ಸಹಾಯ ಕೂಡ ಮಾಡುತ್ತಿದ್ದ. ಈ ಆತ್ಮೀಯತೆ ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು.

ಹೊಡೆದು ಹೊರಹಾಕಿದ ಪತಿ: ಇತ್ತ ನಿತ್ಯ ಮದ್ಯ ಸೇವಿಸುತ್ತಿದ್ದ ಬಾಬು, ಪತ್ನಿ ವರಲಕ್ಷ್ಮಿ ಜತೆ ಜಗಳಕ್ಕೆ ಬೀಳುತ್ತಿದ್ದ. ಹೀಗಿರುವಾಗ ಸೆ.3ರಂದು ರಾತ್ರಿ ಅಡುಗೆ ಮಾಡದ ವಿಚಾರಕ್ಕೆ ಪತ್ನಿಯನ್ನು ಮನಬಂದಂತೆ ಥಳಿಸಿದ ಬಾಬು ಮನೆಯಿಂದ ಹೊರಹಾಕಿದ್ದ.

Advertisement

ಇದರಿಂದ ಕೋಪಗೊಂಡ ವರಲಕ್ಷ್ಮಿ, ರಾಕೇಶ್‌ಗೆ ಕರೆ ಮಾಡಿ, ತಾನು ಸಹೋದರನ ಮನೆಗೆ ಹೋಗುತ್ತಿದ್ದು, ಮನೆಗೆ ಬಂದು ಬಾಬುನನ್ನು ಕೊಲ್ಲುವಂತೆ ಸೂಚಿಸಿದ್ದಳು. ಅದರಂತೆ ರಾಕೇಶ್‌, ಮದ್ಯದ ಅಮಲಿನಲ್ಲಿ ಮಲಗಿದ್ದ ಬಾಬುನನ್ನು ಟವೆಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ ಎಂದು ಪೊಲೀಸರು ವಿವರಿಸಿದರು.

ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿಳು!
ಕೊಲೆ ನಡೆದ ಮರುದಿನ ಮನೆಗೆ ಬಂದ ವರಲಕ್ಷ್ಮಿ, ತನ್ನ ಪತಿಗೆ ಪಿಡ್ಸ್‌ ರೋಗವಿತ್ತು. ಅದು ನಿನ್ನೆ ರಾತ್ರಿ ಹೆಚ್ಚಾಗಿ ಮೃತಪಟ್ಟಿದ್ದಾನೆ ಎಂದು ಸ್ಥಳೀಯರಿಗೆ ಹೇಳಿ, ಅಂತ್ಯ ಸಂಸ್ಕಾರಕ್ಕೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದಳು. ಈ ವೇಳೆ ಸ್ಥಳೀಯರೊಬ್ಬರು ಮೃತ ದೇಹದ ಮೇಲಿನ ಗಾಯದ ಗುರುತು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಮಾಹಿತಿ ಅನ್ವಯ ಸ್ಥಳಕ್ಕೆ ಬಂದ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿದಾಗ ಕುತ್ತಿಗೆ ಭಾಗದಲ್ಲಿ ಗಂಟು ಇರುವುದು ಪತ್ತೆಯಾಗಿದೆ. ಕೂಡಲೇ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪತಿ ಬಾಬುನ ಸ್ನೇಹಿತನ ಮೇಲೆ ಶಂಕೆಯಿದೆ ಎಂದು ದಿಕ್ಕು ತಪ್ಪಿಸಲು ಯತ್ನಿಸಿದ್ದಳು. ನಂತರ ಠಾಣೆಗೆ ಕರೆದೊಯ್ದು ವಿಚಾರಣೆ ತೀವ್ರಗೊಳಿಸಿದಾಗ ಪ್ರಿಯಕರ ಕೊಂದಿರುವ ವಿಚಾರ ಬಾಯಿಬಿಟ್ಟಳು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಯಲು ಸಿದ್ಧನಾಗಿದ್ದ ರಾಕೇಶ್‌
ಪ್ರಕರಣದ ವಿಚಾರಣೆ ತೀವ್ರಗೊಳಿಸಿದ್ದಾರೆ ಎಂಬ ವಿಷಯ ತಿಳಿದ ಆರೋಪಿ ರಾಕೇಶ್‌, ಮನೆ ಖಾಲಿ ಮಾಡಿಕೊಂಡು ಬೈಕ್‌ನಲ್ಲಿ ಊರ ಕಡೆ ಹೊರಟಿದ್ದ. ಪೊಲೀಸರ ಭಯದಿಂದ ಖನ್ನನಾಗಿದ್ದ ಆತ ಪ್ರಾಣ ಕಳೆದುಕೊಳ್ಳುವ ಹಂತ ತಲುಪಿದ್ದ. ಅದರಂತೆ ಹುಬ್ಬಳ್ಳಿಗೆ ಹೋಗುವ ಮಾರ್ಗ ಮಧ್ಯೆ ಹರಿಹರ ಕೆರೆಗೆ ಬೈಕ್‌ ಹಾಕಿ, ತಾನೂ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ.

ಈ ನಡುವೆ ಆರೋಪಿಯ ಪರಾರಿ ಪ್ರಯತ್ನದ ಬಗ್ಗೆ ಮಾಹಿತಿ ಪಡೆದ ಪೊಲೀಸರು, “ನಾನು ಕೂಡ ನಿನ್ನೊಂದಿಗೆ ಬರುತ್ತೇನೆ. ಒಟ್ಟಿಗೆ ಹೋಗೋಣ,’ ಎಂದು ವರಲಕ್ಷ್ಮಿ ಮೂಲಕ ಹೇಳಿಸಿ ಆತ ಇರುವ ಸ್ಥಳ ಪತ್ತೆ ಮಾಡಿದ್ದರು. ನಂತರ ತುಮಕೂರು ಬಳಿ ರಾಕೇಶ್‌ನನ್ನು ಬಂಧಿಸಲಾಗಿತ್ತು. ವರಲಕ್ಷ್ಮೀ ಮೇಲಿನ ಪ್ರೀತಿಯಿಂದ ಆಕೆಯ ಪತಿಯನ್ನು ಕೊಂದಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ವಿವರಿಸಿದರು.

ಪತಿಯನ್ನು ಕಳೆದುಕೊಂಡ ನೋವು ವರಲಕ್ಷ್ಮಿ ಮುಖದಲ್ಲಿ ಕಾಣಲಿಲ್ಲ. ಸ್ಥಳೀಯರು ಕೂಡ ಅನುಮಾನ ವ್ಯಕ್ತಪಡಿಸಿದ್ದರು. ವಿಚಾರಣೆ ವೇಳೆ ಆಕೆ ಗೊಂದಲದ ಹೇಳಿಕೆ ನೀಡುತ್ತಿದ್ದಳು. ಜತೆಗೆ ಹತ್ಯೆ ಮಾಡಿರುವ ರೀತಿ ಈಕೆಯ ಮೇಲೆಯೇ ಶಂಕೆ ಮೂಡಿಸುವಂತಿತ್ತು. ಈ ಹಿನ್ನೆಲೆಯಲ್ಲಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಳು.
-ಚೇತನ್‌ಸಿಂಗ್‌ ರಾಥೋಡ್‌, ಡಿಸಿಪಿ ಉತ್ತರ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next