Advertisement

ಕುಡಿವ ನೀರಿನ ಸಮಸ್ಯೆ ಎದುರಿಸಲು ಸಿದ್ಧರಾಗಿ

07:29 AM Jan 30, 2019 | Team Udayavani |

ಮಂಡ್ಯ: ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಿದ್ಧರಾಗಬೇಕು ಎಂದು ಜಿಲ್ಲಾ ಸಚಿವ ಪುಟ್ಟರಾಜು ಹಾಗೂ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಅಧ್ಯಕ್ಷತೆಯಲ್ಲಿ ನಡೆದ ಮೂರನೇ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

Advertisement

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಶಾಶ್ವತ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಶಾಶ್ವತ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಸೇರಿಸಲಾಗುವುದು. ಅಗತ್ಯ ಕಾಮಗಾರಿಗಳ ಬಗ್ಗೆ ಈಗಾಗಲೇ 2-3 ಸುತ್ತಿನ ಚರ್ಚೆ ನಡೆದಿದೆ. ಇನ್ನಾವುದಾದರೂ ಬಾಕಿ ಇದ್ದರೆ ಅಧಿಕಾರಿಗಳು ಒಂದೆರಡು ದಿನಗಳಲ್ಲಿ ಅವುಗಳ ಪ್ರಸ್ತಾವನೆ ಸಲ್ಲಿಸಿ ಬರ ನಿರ್ವಹಣೆಗೆ ಕ್ರಮ ವಹಿಸಬೇಕು. ಅವುಗಳನ್ನೂ ಬಜೆಟ್‌ನಲ್ಲಿ ಸೇರಿಸಲಾಗುವುದು ಎಂದು ಹೇಳಿದರು.

ಕಳೆದ ವರ್ಷ ಜಿಲ್ಲೆಯ ಯಾವಯಾವ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿತ್ತು. ಎಲ್ಲೆಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿತ್ತು. ಬೋರ್‌ವೆಲ್‌ಗ‌ಳ ದುರಸ್ತಿ ಕಾರ್ಯ, ಹೊಸದಾಗಿ ನೀರಿನ ಸಮಸ್ಯೆ ಸೃಷ್ಟಿಯಾಗಬಹುದಾದ ಗ್ರಾಮಗಳ ಕುರಿತಂತೆ ಟಾಸ್ಕ್ಫೋರ್ಸ್‌ ಸಮಿತಿ ಪೂರ್ವ ಅಧ್ಯಯನ ನಡೆಸಿ ಸಮಸ್ಯೆ ನಿವಾರಣೆಗೆ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ನೇತೃತ್ವದಲ್ಲಿ ಕಾರ್ಯಯೋಜನೆ ಸಿದ್ಧಪಡಿಸುವಂತೆ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.

ಪರ್ಯಾಯ ವ್ಯವಸ್ಥೆ: ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಮಂಜುಶ್ರೀ, ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿರುವ ಗ್ರಾಮಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆ ಪರಿಹರಿಸಲಾಗುವುದು. ತಾಪಂ ಇಇ ಮತ್ತು ಎಇಇ ನೇತೃತ್ವದಲ್ಲಿ ಜಿಲ್ಲೆಯಲ್ಲಿ 3 ತಂಡಗಳನ್ನು ರಚಿಸಲಾಗಿದೆ. ಹಿಂದೆ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತೋ ಅಲ್ಲಿ ಮತ್ತೆ ಸಮಸ್ಯೆ ಮುಂದುವರೆ ದಿದೆಯೇ,

ಸಮಸ್ಯೆ ಸೃಷ್ಟಿಯಾಗಬಹುದಾದ ಹೊಸ ಗ್ರಾಮಗಳು ಯಾವುವು, ಎಲ್ಲಿ ಸಮಸ್ಯ ತೀವ್ರ ಸ್ವರೂಪದಲ್ಲಿದೆ ಎಂಬ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಗಿದೆ. ಖಾಸಗಿ ಕೊಳವೆ ಬಾವಿ ಹಾಗೂ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸುವ ಬಗ್ಗೆಯೂ ಕ್ರಮ ವಹಿಸಲು ಸೂಚಿಸಲಾಗಿದೆ. ಇದಕ್ಕೆ ಹಣದ ಕೊರತೆ ಎದುರಾಗದಂತೆ ಈಗಾಗಲೇ ಪ್ರತಿ ತಾಲೂಕಿಗೆ 25 ಲಕ್ಷ ರೂ. ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.

Advertisement

ರೇಷ್ಮೆ ಬೆಳೆಗೆ ಉತ್ತೇಜನ ನೀಡಿ: ದಕ್ಷಿಣ ಭಾರತದಲ್ಲೇ ಮಂಡ್ಯ ಜಿಲ್ಲೆಯಲ್ಲಿ ಉತ್ಕೃಷ್ಟವಾದ ರೇಷ್ಮೆ ಬೆಳೆ ಬೆಳೆಯುವುದಕ್ಕೆ ಅವಕಾಶವಿದೆ. ಕೋಲಾರದ ಶಿಡ್ಲಘಟ್ಟ ಬಳಿಕ ಎರಡನೇ ಸ್ಥಾನದಲ್ಲಿ ಮಂಡ್ಯ ಇದೆ. ಕಬ್ಬು ಹಾಗೂ ಭತ್ತಕ್ಕೆ ಪರ್ಯಾಯವಾಗಿ ರೇಷ್ಮೆ ಬೆಳೆಯನ್ನು ಉತ್ತೇಜಿಸಬಹುದು.

ಆದರೆ, ಇಲಾಖಾ ಅಧಿಕಾರಿಗಳು ರೇಷ್ಮೆ ಕೃಷಿ ವಿಸ್ತೀರ್ಣ ಹೆಚ್ಚಿಸುವ ಬಗ್ಗೆ ಆಸಕ್ತಿ ವಹಿಸಿಲ್ಲ ಎಂದು ವಿಧಾನಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ ಹಾಗೂ ಕೆ.ಟಿ.ಶ್ರೀಕಂಠೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ 507 ಚಾಕಿ ಮನೆ ಹಾಗೂ ಶೆಡ್‌ಗಳ ನಿರ್ಮಾಣಕ್ಕೆ ಅರ್ಜಿ ಬಂದಿದ್ದು, ಅವು ಈಗಾಗಲೇ ಪೂರ್ಣಗೊಂಡಿವೆ. ಇದನ್ನು ಫ‌ಲಾನುಭವಿಗಳು ಸ್ವಂತ ಹಣದಲ್ಲಿ ನಿರ್ಮಿಸಿಕೊಂಡಿದ್ದು, ಇದಕ್ಕೆ ಸರ್ಕಾರದಿಂದ 5,72 ಕೋಟಿ ರೂ. ಸಹಾಯಧನ ಬಿಡುಗಡೆಯಾಗಬೇಕಿದೆ ಎಂದು ಹೇಳಿದರು.

ಸಹಾಯಧನದ ವಿಚಾರವಾಗಿ ಸಂಬಂಧಿಸಿದ ಶಾಸಕರು, ಸಚಿವರ ಗಮನಕ್ಕೆ ತಂದು ಬಿಡುಗಡೆ ಮಾಡಿಸಿ ಫ‌ಲಾನುಭವಿಗಳಿಗೆ ನೀಡಬೇಕಿತ್ತು. ಆ ಬಗ್ಗೆ ನೀವು ಆಸಕ್ತಿ ತೋರಿಲ್ಲವೇಕೆ. ಕಚೇರಿಯಲ್ಲೇ ಕುಳಿತು ಕೆಲಸ ಮಾಡುವುದರಿಂದ ಯಾವುದೇ ಪ್ರಯೋ ಜನವಿಲ್ಲ ಎಂದು ಸಚಿವ ಪುಟ್ಟರಾಜು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಮಳವಳ್ಳಿ ರೇಷ್ಮೆಗೂಡು ಮಾರುಕಟ್ಟೆ ಆಧುನೀಕರಣಗೊಳಿಸುವ ಬಗ್ಗೆ ಶಾಸಕ ಡಾ.ಕೆ.ಅನ್ನದಾನಿ ಪ್ರಶ್ನಿಸಿದಾಗ, ಇಲಾಖೆಯ ಎಂಜಿನಿಯರಿಂಗ್‌ ಸೆಲ್‌ಗೆ ಈಗಾಗಲೇ 1.50 ಕೋಟಿ ರೂ. ಅಂದಾಜುಪಟ್ಟಿ ಸಲ್ಲಿಸಲಾಗಿದೆ. ಅದರಲ್ಲೇ ಮಾರುಕಟ್ಟೆ ಸುತ್ತ ಕಾಂಪೌಂಡ್‌ ನಿರ್ಮಾಣ, ರೀಲರ್ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್‌ ಸಭೆಗೆ ಉತ್ತರಿಸಿದರು.

ಆಸ್ಪತ್ರೆ, ಹೆರಿಗೆ ಆಸ್ಪತ್ರೆ ಅವಶ್ಯ: ಹಲಗೂರಿನಿಂದ ಮುತ್ತತ್ತಿಗೆ 20 ಕಿ.ಮೀ. ದೂರವಿದೆ. ಈ ಮಾರ್ಗದಲ್ಲಿ ಸುಮಾರು 60 ಗ್ರಾಮಗಳಿವೆ. ಸೋಲಿಗರು, ಕಾಡು ಕುರುಬರು, ಮೇಧರು ಸೇರಿದಂತೆ ಹಲವು ವರ್ಗದ ಜನರಿದ್ದಾರೆ. ಈ ವ್ಯಾಪ್ತಿಯಲ್ಲಿ ಒಂದೇ ಒಂದು ಆಸ್ಪತ್ರೆ ಕೂಡ ಇಲ್ಲ. ಕೂಡಲೇ ಅಲ್ಲಿಗೆ ಒಂದು ಆಸ್ಪತ್ರೆ ಹಾಗೂ ಹೆರಿಗೆ ಕೇಂದ್ರವನ್ನು ಅಗತ್ಯವಾಗಿ ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಹಾಗೂ ಶಾಸಕ ಡಾ.ಕೆ.ಅನ್ನದಾನಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್‌ಗೌಡ, ಎಂ.ಶ್ರೀನಿವಾಸ್‌, ಕೆ.ಸಿ. ನಾರಾಯಣಗೌಡ, ವಿಧಾನಪರಿಷತ್‌ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಜಿಪಂ ಅಧ್ಯಕ್ಷೆ ನಾಗರತ್ನ, ಜಿಲ್ಲಾಧಿಕಾರಿ ಮಂಜುಶ್ರೀ, ಜಿಪಂ ಸಿಇಒ ಯಾಲಕ್ಕೀಗೌಡ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಿ. ಶಿವಪ್ರಕಾಶ್‌, ಹೆಚ್ಚುವರಿ ಅಧೀಕ್ಷಕ ಬಲರಾಮೇಗೌಡ, ಜಿಪಂ ಉಪಾಧ್ಯಕ್ಷೆ ಗಾಯತ್ರಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next