ವಿಜಯಪುರ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 6100 ರೂ. ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ನಿರ್ಧರಿಸಲಾಗಿದೆ. ಡಿ. 24ರಿಂದ ಜನೆವರಿ 7ರವರೆಗೆ ಎಲ್ಲ ಖರೀದಿ ಕೇಂದ್ರಗಳಲ್ಲಿ ರೈತರ ನೋಂದಣಿ ಕಾರ್ಯ ಆರಂಭಿಸುವಂತೆ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕನಿಷ್ಠ ಬೆಂಬಲ ಬೆಲೆ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ಕೇಂದ್ರ ಸರ್ಕಾರದ ಬೆಂಬಲ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಪ್ರತಿ ಕ್ವಿಂಟಲ್‌ಗೆ 6100 ರೂ. ಬೆಲೆ ನೀಡಿ ಖರೀದಿಸಲು ಸರ್ಕಾರ ಸಮ್ಮತಿಸಿದೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ 5675 ರೂ. ಮತ್ತು ರಾಜ್ಯ ಸರ್ಕಾರದ 425 ರೂ. ಪ್ರೋತ್ಸಾಹ ಧನ ಸೇರಿದಂತೆ 6100 ರೂ.ರಂತೆ ತೊಗರಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಬೆಂಬೆಲ ಬೆಲೆ ಯೋಜನೆಯಡಿ ತೊಗರಿ ಖರೀದಿಸಲಾಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ರೈತರ ನೋಂದಣಿ ಆರಂಭಿಸುವಂತೆ ಸೂಚನೆ ನೀಡಿದರು.
ಈ ಖರೀದಿ ಕೇಂದ್ರಗಳಲ್ಲಿ ತೊಗರಿ ಉತ್ಪನ್ನ ಖರೀದಿಸುವ ಪೂರ್ವದಲ್ಲಿ ರೈತರು ನೀಡಿರುವ ವಿವರವನ್ನು ನಾಫೆಡ್ ಸಂಸ್ಥೆ ತಂತ್ರಾಂಶದೊಂದಿಗೆ ಭೂಮಿ, ಯುಐಡಿಎಐ ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ಪರಿಶೀಲಿಸಿ ನೋಂದಾಯಿಸಿಕೊಳ್ಳಬೇಕು. ಒಂದು ವೇಳೆ ಬೆಳೆ ದರ್ಶಕದಲ್ಲಿ ಬೆಳೆ ಬೆಳೆಯದೇ ಇರುವುದ ಕಂಡು ಬಂದಲ್ಲಿ, ಅಂತಹ ರೈತರಿಗೆ ಕಂದಾಯ ಇಲಾಖೆ ಅಧಿಕಾರಿಗಳು ದೃಢೀಕೃತ ಪಹಣಿ ನೀಡಿ ಅದರಂತೆ ರೈತರನ್ನು ನೋಂದಾಯಿಸಿಕೊಳ್ಳಬೇಕು. ಪ್ರತಿ ಎಕರೆಗೆ 5 ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಲ್ ತೊಗರಿ ಉತ್ಪನ್ನ ಖರೀದಿಯನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಖರೀದಿ ಕೇಂದ್ರಗಳ ನೋಂದಣಿ ಕಾರ್ಯದ ಮೇಲ್ವಿಚಾರಣೆಯನ್ನು ಸಹಕಾರಿ ಸಂಘಗಳ ನಿಬಂಧಕರು ನಿರ್ವಹಿಸಬೇಕು. ತೊಗರಿ ಖರೀದಿ ಕೇಂದ್ರಗಳಲ್ಲಿ ಸಂಗ್ರಹವಾಗುವ ತೊಗರಿ ಶೇಖರಿಸಲು ಅನುಕೂಲವಾಗುವಂತೆ ಕರ್ನಾಟಕ ಉಗ್ರಾಣ ನಿಗಮದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಟಿಎಪಿಸಿಎಂಎ ಹಾಗೂ ಪಿಎಸಿಎಸ್ ಸಿಬ್ಬಂದಿಗಳಿಗೆ ನಾಫೆಡ್ ಸಂಸ್ಥೆ ತಂತ್ರಾಂಶದ ಕುರಿತು ಡಿ. 24ರಂದು ತರಬೇತಿ ಆಯೋಜಿಸುವಂತೆ ಮಾರ್ಕೆಟಿಂಗ್ ಫೆಡರೇಶನ್ ಶಾಖಾ ವ್ಯವಸ್ಥಾಪಕರಿಗೆ ಸಭೆಯಲ್ಲಿ ಸೂಚಿಸಲಾಯಿತು. ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ, ಕೃಷಿ ಮಾರಾಟ ಇಲಾಖೆ ಕಾರ್ಯದರ್ಶಿಗಳೂ ಆದ ಜಂಟಿ ನಿರ್ದೇಶಕ ವಿ.ರಮೇಶ ಇದ್ದರು.
ಜಿಲ್ಲೆಯ ತೊಗರಿ ಖರೀದಿ ಕೇಂದ್ರಗಳು: ವಿಜಯಪುರ, ಬಬಲೇಶ್ವರ, ತಿಕೋಟಾ, ನಾಗಠಾಣ, ಕಾಖಂಡಕಿ, ಹಿಟ್ನಳ್ಳಿ, ಕನ್ನೂರ, ಶಿವಣಗಿ, ಕಾರಜೋಳ, ಸಾರವಾಡ ಬಸವನಬಾಗೇವಾಡಿ, ಮನಗೂಳಿ, ಬೆರವಾಡಗಿ, ಉಕ್ಕಲಿ, ಕೊಲ್ಹಾರ, ಇಂಗಳೇಶ್ವರ, ಸಾತಿಹಾಳ, ಕುದರಿ ಸಾಲವಾಡಗಿ, ಮುಳವಾಡ, ಸಾಸನೂರ, ಶರಣಸೋಮನಾಳ, ಮುದ್ದೇಬಿಹಾಳ, ತಾಳಿಕೋಟೆ, ಹಿರೂರ, ರಕ್ಕಸಗಿ, ಹಡಲಗೇರಿ, ಜಮ್ಮಲದಿನ್ನಿ, ಕವಡಿಮಟ್ಟಿ, ಲಿಂಗದಳ್ಳಿ, ಹಿರೇಮುರಾಳ, ಬಿದರಕುಂದಿ, ಸಿಂದಗಿ, ಆಲಮೇಲ, ಜಾಲವಾದ, ಕೊಂಡಗೂಳಿ, ಹಿಕ್ಕಣಗುತ್ತಿ, ಕೋರವಾರ, ಬ್ಯಾಕೋಡ, ಮಾಡಬಾಳ, ತಿಳಗೂಳ, ಸುಂಗಠಾಣ, ಮಲಘಾಣ, ಗುಬ್ಬೇವಾಡ, ಇಂಡಿ, ಚಡಚಣ, ಅಂಜುಟಗಿ, ಸಾಲೋಟಗಿ, ಹಿರೇಬೇವನೂರ, ಹೊರ್ತಿ, ತಾಂಬಾ, ರೇವತಗಾಂವ, ಅಥರ್ಗಾ, ನೇವರಗಿ ಮತ್ತು ಪಡನೂರ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.