Advertisement

ಮೌಡ್ಯ-ಕಂದಾಚಾರದಿಂದ ಹೊರ ಬನ್ನಿ: ಸೌಭಾಗ್ಯ

11:08 AM Dec 31, 2018 | |

ಚಿತ್ರದುರ್ಗ: ಆಧುನಿಕ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದರೂ ಮನುಷ್ಯರು ಮೂಢನಂಬಿಕೆ, ಕಂದಾಚಾರಗಳಲ್ಲಿ ಮುಳುಗೇಳುತ್ತಿದ್ದಾರೆ. ಮೊದಲು ಇದರಿಂದ ಹೊರಬರಬೇಕು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಹೇಳಿದರು.

Advertisement

ನಗರದ ಪಿವಿಎಸ್‌ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾನುವಾರ ನಡೆದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವಲಯ ಮಟ್ಟದ ಕಾರ್ಯಕರ್ತರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನ ಇಲ್ಲದಿದ್ದರೆ ಏನೂ ಇಲ್ಲ. ಅದರಲ್ಲೂ ಮನುಷ್ಯನ ಬದುಕಿನಲ್ಲಿ ವಿಜ್ಞಾನ ಅತ್ಯವಶ್ಯಕ. ವೈಜ್ಞಾನಿಕ ಯುಗದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳಿವೆ. ಆದರೆ ಬಹುತೇಕ ಜನರು ಇನ್ನೂ ಬಯಲು ಶೌಚಾಲಯವನ್ನೇ ಬಳಕೆ ಮಾಡುತ್ತಿರುವುದು ವಿಷಾದನೀಯ. ಇದರಿಂದ ಹೊರ ಬಂದು ಪ್ರತಿಯೊಂದು ಮನೆಯಲ್ಲಿ ಶೌಚಾಲಯ ನಿರ್ಮಿಸಿ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಮೂಢನಂಬಿಕೆಗಳಿವೆ. ಹಿಂದಿನ ತಲೆಮಾರಿನ ಜನರನ್ನು ಬದಲಾಯಿಸಲು ಸಾಧ್ಯವಿಲ್ಲ. ಬದಲಾಗಿ ಇಂದಿನ ತಲೆಮಾರಿನ ಜನರನ್ನು ಜಾಗೃತಗೊಳಿಸಿದರೆ ಮೂಢನಂಬಿಕೆಯನ್ನು ತೊಲಗಿಸಬಹುದು ಎಂದು ಅಭಿಪ್ರಾಯಪಟ್ಟರು.
 
ಪ್ಲಾಸ್ಟಿಕ್‌ ಬಳಕೆ ನಿಷೇಧದ ಬಗ್ಗೆ ಬರೀ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್‌ ತಯಾರು ಮಾಡುವ ಕಂಪನಿಗಳೇ ಇಲ್ಲವಾದರೆ ತಾನಾಗಿಯೇ ಪ್ಲಾಸ್ಟಿಕ್‌ ಬಳಕೆ ಕಡಿಮೆಯಾಗುತ್ತದೆ. ರೈತರು ಕೃಷಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿಕೊಂಡು ನಷ್ಟವನ್ನು ತಗ್ಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯದರ್ಶಿ ಬಸವರಾಜ್‌ ಮಾತನಾಡಿ, ಮೌಡ್ಯ-ಕಂದಾಚಾರ ಜನರನ್ನು ಆಳುತ್ತಿವೆ. ಈ ಅನಿಷ್ಠ ಪದ್ಧತಿಗಳಿಗೆ ಮುಕ್ತಿ ಹಾಡಬೇಕಿದೆ. ಸಮಾಜಕ್ಕೆಧಕ್ಕೆ ಉಂಟು ಮಾಡುವ ಆಚರಣೆಯನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ವೈಜ್ಞಾನಿಕ ಚಿಂತನೆಗಳ ಬಗ್ಗೆ ಅರಿವು ಮೂಡಿಸಲು ದೇಶಾದ್ಯಂತ ಸುಮಾರು 38 ಸಂಘಟನೆಗಳು ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ನಮ್ಮ ಸಂಘಟನೆ ಆರಂಭವಾಗಿ 6 ವರ್ಷ ಕಳೆದಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಈಗಾಗಲೇ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗದಲ್ಲಿ ಕಾರ್ಯಕರ್ತರ ಸಭೆಗಳನ್ನು ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ. 2020ರ ವೇಳೆಗೆ ಸುಮಾರು 20 ಸಾವಿರ ಕಾರ್ಯಕರ್ತರನ್ನು ಒಗ್ಗೂಡಿಸುವ ಗುರಿ ಹೊಂದಲಾಗಿದೆ ಎಂದರು.

ಪರಿಸರವಾದಿ ಡಾ| ಎಚ್‌.ಕೆ.ಎಸ್‌. ಸ್ವಾಮಿ, ಅಪ್ನಾದೇಶ್‌ ಉಪಾಧ್ಯಕ್ಷ ರಾಜಾ ನಾಯ್ಕ, ವಿಜ್ಞಾನ ಕೇಂದ್ರದ ಶಂಕರಪ್ಪ, ಮಹಂತೇಶ್‌ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next