ಯಡ್ರಾಮಿ: ಮಠ ಮಂದಿರಗಳಿಗೆ ಭಕ್ತರು ಬರಬೇಕಾದರೆ ರಾಜಕೀಯ ಮತ್ತು ಜಾತೀಯತೆ ಹೊರಗಿಟ್ಟು ಬಂದರೆ ಮಠಗಳ ಮೇಲಿರುವ ಭಕ್ತಿ ಇನ್ನಷ್ಟು ಗಟ್ಟಿಯಾಗಿ ನಿಲ್ಲುತ್ತದೆ. ಇದರಿಂದ ಸಮಾಜದಲ್ಲಿ ಮಠಗಳು ಮಾಡುವ ಸೇವೆ ಸಾರ್ಥಕ ಎನಿಸಿಕೊಳ್ಳುತ್ತದೆ ಎಂದು ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ನುಡಿದರು.
ಪಟ್ಟಣದ ಮುರಘೇಂದ್ರ ಶಿವಯೋಗಿ ವಿರಕ್ತಮಠದ ಆವರಣದಲ್ಲಿ ನಡೆದ ಹಿರಿಯ ಗುರುಗಳ ಅಮೃತ ಮಹೋತ್ಸವ, ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಶಿಷ್ಯರ ನಿಸ್ವಾರ್ಥ ಭಾವ ತುಂಬಿದ ಕಾಯಕದಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ನನಗೆ ಮಠದ ಅಧಿಕಾರ ನೀಡಿದ್ದೀರಿ ಎಂದ ಮಾತ್ರಕ್ಕೆ ನಾನು ಒಡೆಯನಲ್ಲ. ನಾನೊಬ್ಬ ಧರ್ಮ ಗುರುವಾಗಿ, ಪ್ರಚಾರಕನಾಗಿ, ನಿಷ್ಠಾವಂತ ಸಮಾಜ ಸೇವಕನಾಗಿರುತ್ತೇನೆ ಎಂದರು.
ಇಂಗಳೇಶ್ವರ ಚೆನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಮಲ್ಲಿಕಾರ್ಜುನ ಸ್ವಾಮೀಜಿ ನಂದಿಮಠ, ಕಡಕೋಳ ಮಡಿವಾಳೇಶ್ವರ ಮಠದ ರುದ್ರಮುನಿ ಶಿವಾಚಾರ್ಯರು, ಸೊನ್ನ ದಾಸೋಹ ಮಠದ ಡಾ| ಶಿವಾನಂದ ಸ್ವಾಮೀಜಿ, ಪ್ರಭುಸಾರಂಗದೇವ ಶಿವಾಚಾರ್ಯರು , ದೇವರಹಿಪ್ಪರಗಿ ಮಡಿವಾಳ ಸ್ವಾಮೀಜಿ, ಯಲಗೋಡದ ಮೋರಟಗಿ ಮಠದ ಗುರುಲಿಂಗಸ್ವಾಮೀಜಿ, ಮಸಬನಾಳದ ಗುರುಬಸವ ಸ್ವಾಮೀಜಿ, ಮಳ್ಳಿ ಹಿರೇಮಠದ ರುದ್ರಮುನಿ ಶಿವಾಚಾರ್ಯರು, ಇಜೇರಿ ಅಮಿನೊದ್ದೀನ್ ದರ್ಗಾದ ಸಯ್ಯದ ಇಸ್ಮಾಯಿಲ್ ಸಜ್ಜಾದ್, ಮುಖಂಡರಾದ ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಜಿಲ್ಲಾ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ರಾಜ್ಯ ಬಿಜೆಪಿ ಕಾರ್ಯದರ್ಶಿ ಎನ್. ರವಿಕುಮಾರ, ಶೋಭಾ ಬಾಣಿ, ರಮೇಶಬಾಬು ಕುಲಕರ್ಣಿ, ಜಿಪಂ ಸದಸ್ಯ ದಂಡಪ್ಪ ಸಾಹು ಕುರುಳಗೇರಾ, ತಾಪಂ ಸದಸ್ಯ ಪ್ರಶಾಂತ ರಾಠೊಡ, ಅಲೀಸಾಬ ಬಾಗವಾನ ಸಿಪಿಐ ಹಾಗೂ ಅನೇಕರಿದ್ದರು.
ಸುಂಬಡದ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿರುದ್ರಯ್ಯ ಗೌಡಗಾಂವ ಗುರುಲಿಂಗಯ್ಯ ಗವಾಯಿ ವಂದನಾ ಗೀತೆ ಹಾಡಿದರು.