Advertisement

ಊಟದ ಜೊತೆ ಮಾಹಿತಿ ಸಿಗುತ್ತೆ

04:00 AM Nov 12, 2018 | |

ಹಳೇಬೀಡು, ಹೊಯ್ಸಳರ ನೆಲೆವೀಡು. ವಿಶ್ವ ವಿಖ್ಯಾತ ಹೊಯ್ಸಳೇಶ್ವರ, ಹುಲಿಕಲ್ಲು ವೀರಭದ್ರೇಶ್ವರ ದೇವಾಲಯ, ರಾಣಿ ಶಾಂತಲಾ ದೇವಿ ಸ್ನಾನ ಮಾಡುತ್ತಿದ್ದ ಕಲ್ಯಾಣಿ, ನೂರಾ ಒಂದು ಲಿಂಗಗಳುಳ್ಳ ಪುಷ್ಪಗಿರಿಯಂತಹ ಪ್ರವಾಸಿ ತಾಣಗಳನ್ನು ಹೊಂದಿರುವ ಬೇಲೂರು ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ ಹಳೇಬೀಡು.  

Advertisement

ವಿಶ್ವದ ವಿವಿಧೆಡೆಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಶಾಲಾ ಮಕ್ಕಳು, ಪ್ರವಾಸಿಪ್ರಿಯರೂ ಇಲ್ಲಿಗೆ ಬರುತ್ತಾರೆ. ಅವರೆಲ್ಲರಿಗೂ ಸ್ಥಳೀಯ ಪ್ರವಾಸಿ ತಾಣಗಳನ್ನೂ ಪರಿಚಯಿಸುವುದರ ಜೊತೆಗೆ ಸ್ಥಳೀಯ ಆಹಾರವನ್ನೂ ಉಣಬಡಿಸುತ್ತಿರುವ ಹೋಟೆಲ್ಲೇ “ಶಿವನಾಗ್‌’.

ಹಳೇಬೀಡಿನಲ್ಲಿ, 35 ವರ್ಷಗಳ ಹಿಂದೆ ಪಾರ್ವತಮ್ಮ ಎಂಬುವರು ತಮ್ಮ ಮನೆಯಲ್ಲೇ ಈ ಹೋಟೆಲ್‌ ಅನ್ನು ಆರಂಭಿಸಿದ್ದರು. ಇದೀಗ ಅವರ ಮಗ ನಾಗ್‌ ಅವರು ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ. ಇವರಿಗೆ ಸೊಸೆ ಪತ್ನಿ ಮಮತಾ, ಮಾವಂದಿರಾದ ಮಾವ ರಾಜಣ್ಣ, ಗಿರೀಶ್‌, ಬಾಮೈದ ರಘು ಸಾಥ್‌ ನೀಡುತ್ತಿದ್ದಾರೆ.

ಹೋಟೆಲ್‌ ಸಮಯ: ವಾರ ಪೂರ್ತಿ ಬೆಳಗ್ಗೆ 5ರಿಂದ ಸಂಜೆ 7 ಗಂಟೆಯವರೆಗೆ ಹೋಟೆಲ್‌ ತೆರೆದಿರುತ್ತದೆ. ಕೆಲ ಹಬ್ಬದ ದಿನಗಳಲ್ಲಿ ಮಾತ್ರ ರಜೆ ಮಾಡಲಾಗುತ್ತದೆ.

ಹೋಟೆಲ್‌ ವಿಳಾಸ: ಹಾಸನ-ಸಾಲಿಗಾಮೆ ರಸ್ತೆ, ಹೊಯ್ಸಳೇಶ್ವರ ದೇವಸ್ಥಾನದ ಎದುರು, ಬಸ್‌ ನಿಲ್ದಾಣದ ಸಮೀಪ, ಹಳೇಬೀಡು.

Advertisement

ಪ್ರಮುಖ ತಿಂಡಿ: ನಾಗ್‌ ಹೋಟೆಲ್‌ನ ಪ್ರಮುಖ ತಿಂಡಿ ಅಂದರೆ ಇಡ್ಲಿ ವಡೆ. ಇದರ ಜೊತೆಗೆ ಕೊಡುವ ಕಾಯಿ ಚಟ್ನಿ, ತಿಂಡಿಯ ರುಚಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ದೋಸೆ ಬಿಟ್ಟು, ಫ‌ಲಾವ್‌, ಚಿತ್ರಾನ್ನ, ಪೂರಿ ಇತರೆ ತಿಂಡಿ 25 ರಿಂದ 30 ರೂ. ಒಳಗೆ ಸಿಗುತ್ತದೆ.

ಪ್ರತಿ ದಿನವೂ ಮುದ್ದೆ, ಒಬ್ಬಟ್ಟಿನ ಊಟ: ಈ ಹೋಟೆಲ್‌ನ ಪ್ರಮುಖ ವಿಶೇಷವೆಂದರೆ, ಮುದ್ದೆ, ಒಬ್ಬಟ್ಟಿನ ಊಟ. ವಾರದ ಏಳು ದಿನವೂ ಈ ಊಟ ಸಿಗುತ್ತದೆ. ಮಧ್ಯಾಹ್ನ 12ರಿಂದ ನಾಲ್ಕು ಗಂಟೆಯವರೆಗೂ ಊಟ ನೀಡಲಾಗುತ್ತದೆ. ಜೊತೆಗೆ ಚಪಾತಿ, ಪೂರಿ ಊಟವೂ ಲಭ್ಯ. ಇದೆಲ್ಲವೂ 40 ರೂ.ನಿಂದ 50 ರೂ.ಗೆ ಸಿಗುತ್ತದೆ. 

ಇಲ್ಲಿ ಊಟದ ಜತೆ ಪ್ರವಾಸದ ಮಾಹಿತಿ: ಈ ಹೋಟೆಲ್‌ಗೆ ಭೇಟಿ ನೀಡುವವರಿಗೆ ಊಟದ ಜೊತೆಗೆ ಸ್ಥಳೀಯ ಪ್ರವಾಸಿ ತಾಣಗಳ ಮಾಹಿತಿಯೂ ಸಿಗುತ್ತದೆ. ಸ್ಥಳೀಯ ಐತಿಹಾಸಿಕ ಪ್ರವಾಸಿ ತಾಣಗಳನ್ನು ಪರಿಚಯಿಸಲು ಹೋಟೆಲ್‌ನ ಗೋಡೆಗಳಿಗೆ ಪೋಸ್ಟರ್‌ಗಳನ್ನು ಹಾಕಿದ್ದಾರೆ.

ಬೆಳವಾಡಿಯ ಉದ್ಭವ ಗಣಪತಿ ದೇವಸ್ಥಾನ, ಚೋಳರ ಕಾಲದ ದೇವಾಲಯ, ಹುಲಿಕೆರೆ ಶಾಂತಲಾ ದೇವಿ ರಾಣಿ ಸ್ನಾನ ಮಾಡುತ್ತಿದ್ದ ಕಲ್ಯಾಣಿ, ಹಳೇಬೀಡಿನ ಹೊಯ್ಸಳೇಶ್ವರ ದೇಗುಲದ ಪೋಸ್ಟರ್‌ಗಳ ಜೊತೆಗೆ ಉತ್ತಮ ಸಂದೇಶವುಳ್ಳ ಪೋಸ್ಟರ್‌ಗಳನ್ನೂ ಹಾಕಿದ್ದಾರೆ. ಇವುಗಳನ್ನು ನೋಡಿದ ಪ್ರವಾಸಿಗರು ಈ ಸ್ಥಳದ ಮಾಹಿತಿ ಪಡೆದು, ಅಲ್ಲಿಗೆ ಭೇಟಿಯೂ ಕೊಡುತ್ತಾರೆ ಎನ್ನುತ್ತಾರೆ ಹೋಟೆಲ್‌ ಮಾಲಿಕ ನಾಗ್‌. 

ಈ ಹೋಟೆಲ್‌ನಲ್ಲಿ ಮುದ್ದೆ ಜೊತೆ ಹೋಳಿಗೆ ಊಟ ಸಿಗುವುದರಿಂದ ಸ್ಥಳೀಯರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಸ್ಥಳೀಯ ರಾಜಕೀಯ ನಾಯಕರು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ನಾಗ್‌ ಹೋಟೆಲ್‌ಗೆ ಭೇಟಿ ನೀಡುತ್ತಾರೆ.

ಶಿವನಾಗ್‌ ಹೋಟೆಲ್‌ನಲ್ಲಿ ಅಡುಗೆ ಮಾಡಲು ಕಟ್ಟಿಗೆ ಬಳಸುತ್ತಾರೆ. ಇದು ಊಟದ ರುಚಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಮನೆಯ ಸದಸ್ಯರೇ ಇಲ್ಲಿ ಕೆಲಸ ಮಾಡುವುದರಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸಲು ಸಾಧ್ಯವಾಗಿದೆ ಎಂಬುದು ನಾಗ್‌ ಅವರ ಮಾತು. 

* ಭೋಗೇಶ ಆರ್‌.ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next