ಆಲಮೇಲ: ಬಡ ಜನರು ಮತ್ತು ದೀನ ದಲಿತರು ಉಚಿತವಾಗಿ ಕಾನೂನಿನ ಸಲಹೆ ಪಡೆದುಕೊಂಡು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿಂದಗಿಯ ವಕೀಲ ಎಂ.ಸಿ. ಯಾತನೂರ ಹೇಳಿದರು.
ಪಪಂ ಸಭಾ ಭವನದಲ್ಲಿ ಶನಿವಾರ ಸಿಂದಗಿಯ ವಕೀಲರ ಸಂಘ ಮತ್ತು ಆಲಮೇಲ ತಾಲೂಕಾಡಳಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಹಾಗೂ ಮೆಗಾ ಶಿಬಿರದಲ್ಲಿ ಅವರು ಮಾತನಾಡಿದರು.
ಕಾನೂನಿನ ತಿಳಿವಳಿಗೆ ಇಲ್ಲದವರಿಗೆ ಆರ್ಟಿಕಲ್ 21ರಲ್ಲಿ ತಮ್ಮ ಹಕ್ಕಿನ ಬಗ್ಗೆ ಸಲಹೆ ಪಡೆದುಕೊಳ್ಳಬಹುದು. ಅನಾಗರಿಕ ಜನರಿಗೆ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ವಾರ್ಷಿಕ ಆದಾಯ 3 ಲಕ್ಷ ರೂ.ಗಿಂತ ಒಳಗಿರುವ ಬಡ ಜನರಿಗೆ ಉಚಿತವಾಗಿ ಕಾನೂನಿನ ಮೂಲಕ ನ್ಯಾಯ ಕೊಡಿಸಲಾಗುವದು ಎಂದರು.
ವಯಸ್ಕ ತಂದೆ ತಾಯಿ ಆಸ್ತಿ ಪಡೆದುಕೊಂಡು ಸಂರಕ್ಷಣೆ ಮಾಡಿದೆ ತಿರಸ್ಕರಿದರೆ ಅಂಥವರು ತಮ್ಮ ತಾಲೂಕಿನ ನ್ಯಾಯಾಲಯಕ್ಕೆ ಬಂದು ದೂರು ನೀಡಿದರೆ ಕಾನೂನು ಪ್ರಾಧಿಕಾರದ ಮೂಲಕ ತಂದೆ ತಾಯಿ ಆಸ್ತಿಯನ್ನು ಮರಳಿ ವಶಪಡಿಸಿಕೊಳ್ಳಬಹುದು ಎಂದರು.
ಆಲಮೇಲ ತಾಲೂಕಿನ ಗ್ರೇಡ 2 ತಹಶೀಲ್ದಾರ್ ಪ್ರಕಾಶ ಸಿಂದಗಿ ಮಾತನಾಡಿ, ಬಡ ಜನರಿಗೆ ಸರ್ಕಾರದ ಯೋಜನೆಗಳು ಪಡೆದುಕೊಳ್ಳುವ ಸಲುವಾಗಿಯೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲರು ಸರ್ಕಾರದ ಮಾಸಾಸನ ವಂಚಿತರಾಗಿದ್ದರೆ ಜಾಗೃತಿ ಕಾರ್ಯಕ್ರಮದಲ್ಲಿ ಶಿಬಿರಗಳು ಹಮ್ಮಿಕೊಂಡು ಆ ಸ್ಥಳದಲ್ಲೆ ತಕ್ಷಣವೆ ಪರಿಹಾರ ಒದಗಿಸಲಿದೆ. ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ತಹಶೀಲ್ದಾರ್ ಅಥವಾ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿದರೆ ತಕ್ಷಣ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ವಕಿಲರಾದ ಬಿ.ವೈ. ಕುಮಸಗಿ, ಪಪಂ ಸಿಒ ಶಾಂತಪ್ಪ ಹಾದಿಮನಿ, ಕಂದಾಯ ಅಧಿಕಾರಿ ಎಂ.ಎ. ಅತ್ತಾರ, ಬಿ.ಜಿ. ನಾರಾಯಣಕರ ಮುಂತಾದವರು ಇದ್ದರು.