ತುಮಕೂರು: ಜಿಲ್ಲೆಯು ಸೇರಿದಂತೆ ರಾಜ್ಯವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲು ವಿಷನ್ 2025 ಡಾಕ್ಯುಮೆಂಟ್ ತಯಾರಿಸಲು ಕ್ಷೇತ್ರ ತಜ್ಞರು, ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿದವರು, ವಿವಿಧ ಕ್ಷೇತ್ರಗಳ ಪ್ರಗತಿ ಚಿಂತಕರು, ವಿಜ್ಞಾನಿಗಳು ಸೇರಿದಂತೆ ಹಲವರ ಅಭಿಪ್ರಾಯ ಸಂಗ್ರಹಿಸುವುದು ಅತಿಮುಖ್ಯ. ಎಂದು ಪ್ರಭಾರ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜೆ.ಶಾಂತಾರಾಮ ಅಧಿಕಾರಿಗಳಿಗೆ ಸೂಚಿಸಿದರು.
ಅಭಿವೃದ್ಧಿಗೆ ಸಿದ್ಧತೆ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿಷನ್ 2025 ಡಾಕ್ಯುಮೆಂಟ್ ತಯಾರಿಸಲು ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಈಗಾಗಲೇ ಈ ಸಂಬಧ ರಚಿಸಿರುವ 6 ಕ್ಲಸ್ಟರ್‌ಗಳ ನೋಡಲ್ ಅಧಿಕಾರಿಗಳು ಅ.16ರಂದು ಜಿಲ್ಲೆಗೆ ಆಗಮಿಸಲಿದ್ದು ರಾಜ್ಯಮಟ್ಟದ ಅನುಷ್ಠಾನ ಸಮಿತಿ ಮುಂದೆ ಯಾವ ರೀತಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ರೂಪುರೇಷೆಯನ್ನು ಪ್ರಸ್ತುತಪಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.
ಪೂರ್ವಭಾವಿ ಸಭೆ: ಮುಂದಿನ ಏಳು ವರ್ಷಗಳ ಅವಧಿಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ರಾಜ್ಯ ಸರ್ಕಾರವು ವಿಷನ್ 2025 ಡಾಕ್ಯುಮೆಂಟ್ ಎಂಬ ಹೆಸರಿನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಮತ್ತು ಅನುಷ್ಠಾನ ಯೋಜನೆಗಳ ಸಿದ್ಧಪಡಿಸುವಿಕೆ ಸಂಬಂಧ ಕ್ಲಸ್ಟರ್ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಲಿದೆ.
ಸಭೆಯಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರ, ಮೂಲಸೌಕರ್ಯಗಳು, ಉದ್ಯೋಗ ಮತ್ತು ಕೌಶಲ್ಯ, ಕೈಗಾರಿಕಾಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರೋಗ್ಯ ಮತ್ತು ಪೊಲೀಸ್, ಶಿಕ್ಷಣ ಗ್ರಾಮೀಣಾಭಿವೃದ್ಧಿ, ಮಾಹಿತಿ ಮತ್ತು ತಂತ್ರಜ್ಞಾನ, ಸೇವೆಗಳು, ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ಎಂಬುದಾಗಿ ಕ್ಲಸ್ಟರ್‌ಗಳನ್ನು ವಿಂಗಡಿಸಿದ್ದು, ಈ ಕ್ಲಸ್ಟರ್‌ನ ನೋಡಲ್ ಅಧಿಕಾರಿಗಳು ಅ.12ರೊಳಗೆ ಕರಡು ಪ್ರತಿ ಸಿದ್ದಪಡಿಸಿ, ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಯೋಜನೆ ಮಾಹಿತಿ ನೀಡಿ: ಅ.16 ರಂದು ನಡೆಯುವ ಸಭೆಯಲ್ಲಿ ಪ್ರತಿ ಕ್ಲಸ್ಟರ್‌ಗೆ 15 ನಿಮಿಷಗಳ ಕಾಲಾವಕಾಶ ಸಿಗಲಿದ್ದು, ಆ 15 ನಿಮಿಷದಲ್ಲಿಯೇ ಆ ಕ್ಷೇತ್ರದ ಕನಸಿನ ಅಭಿವೃದ್ಧಿಯ ಬಗ್ಗೆ ಪ್ರಸ್ತುತಪಡಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿ.ಅನಿತಾ, ಪೊ›ಬೇಷನರಿ ಐಎಎಸ್ ಅಧಿಕಾರಿ ಪ್ರೀತಿ ಗೆಹಲೋಟ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.