Advertisement

ಕ್ರಶಿಂಗ್‌ನಿಂದ ಪಡೆಯಿರಿ ಕ್ಯಾಶ್‌ಬ್ಯಾಕ್‌

12:19 PM Jun 06, 2018 | |

ಬೆಂಗಳೂರು: ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಕಚೇರಿಯು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ನಗರದ ನಾಲ್ಕು ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ಬಾಟಲಿಗಳನ್ನು ಪುಡಿಮಾಡಿ, ಮರುಬಳಕೆಗೆ ಅಗತ್ಯ ಕಚ್ಚಾವಸ್ತುವಾಗಿ ಪರಿವರ್ತಿಸುವ “ಪ್ಲಾಸ್ಟಿಕ್‌ ಬಾಟಲಿ ಕ್ರಶಿಂಗ್‌ ಮಷಿನ್‌’ಗಳನ್ನು ಅನಾವರಣಗೊಳಿಸಿದೆ.

Advertisement

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿಟಿ ರೈಲು ನಿಲ್ದಾಣ, ಯಶವಂತಪುರ, ಕಂಟೋನ್ಮೆಂಟ್‌ ಮತ್ತು ಕೆ.ಆರ್‌. ಪುರದಲ್ಲಿ ತಲಾ ಒಂದು ಯಂತ್ರಗಳನ್ನು ಬೆಂಗಳೂರು ವಿಭಾಗೀಯ ಕಚೇರಿ ಅಳವಡಿಸಿದ್ದು, ಇದರಿಂದ ರೈಲು ನಿಲ್ದಾಣಗಳಲ್ಲಿನ ಪ್ಲಾಸ್ಟಿಕ್‌ ಬಾಟಲಿಗಳ ಹಾವಳಿ ಅಲ್ಪಮಟ್ಟಿಗೆ ತಗ್ಗಲಿದೆ.

ಸಿಟಿ ರೈಲು ನಿಲ್ದಾಣದ ಪ್ಲಾಟ್‌ಫಾರಂ 1ರಲ್ಲಿ ಈ ಯಂತ್ರವನ್ನು ಅಳವಡಿಸಲಾಗಿದ್ದು, ಪ್ರಯಾಣಿಕರು ಹೊರಬರುವ ಮಾರ್ಗದಲ್ಲೇ ಇಡಲಾಗಿದೆ. ಹಾಗಾಗಿ, ನಿರ್ಗಮನ ದ್ವಾರದಲ್ಲೇ ಪ್ಲಾಸ್ಟಿಕ್‌ ಬಾಟಲಿಯನ್ನು ಕ್ರಶಿಂಗ್‌ ಯಂತ್ರದಲ್ಲಿ ಹಾಕಿ, ಹೋಗಬಹುದು. ಇದಕ್ಕೆ ಪ್ರತಿಯಾಗಿ ಪ್ರಯಾಣಿಕರಿಗೆ 5 ರೂ. “ಕ್ಯಾಶ್‌ಬ್ಯಾಕ್‌’ ಕೂಡ ಸಿಗಲಿದೆ!

ಆದರೆ, ಒಂದು ದಿನಕ್ಕೆ ಒಬ್ಬ ವ್ಯಕ್ತಿ ಎರಡು ಬಾರಿ ಈ ರೀತಿ ಕ್ಯಾಶ್‌ಬ್ಯಾಕ್‌ ಪಡೆಯಲು ಅವಕಾಶ ಇರುತ್ತದೆ ಎಂದು ರೈಲ್ವೆ ತಾಂತ್ರಿಕ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಸಿಟಿ ರೈಲು ನಿಲ್ದಾಣದಲ್ಲಿ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್‌.ಎಸ್‌. ಸಕ್ಸೇನಾ, ಪ್ರಧಾನ ವ್ಯವಸ್ಥಾಪಕ ಎನ್‌.ಎಸ್‌. ಶ್ರೀಧರ್‌ಮೂರ್ತಿ ಮತ್ತಿತರ ಅಧಿಕಾರಿಗಳು ಪ್ಲಾಸ್ಟಿಕ್‌ ಬಾಟಲಿಗಳನ್ನು ಹಾಕುವ ಮೂಲಕ ಯಂತ್ರಕ್ಕೆ ಚಾಲನೆ ನೀಡಿದರು. 

ಪ್ರತಿ ದಿನ ಸಿಟಿ ರೈಲು ನಿಲ್ದಾಣದ ನಿರ್ಗಮನ ದ್ವಾರದಲ್ಲಿ ಇಟ್ಟಿರುವ ಕಸದತೊಟ್ಟಿಯೊಂದರಲ್ಲೇ 400ಕ್ಕೂ ಅಧಿಕ ಪ್ಲಾಸ್ಟಿಕ್‌ ಬಾಟಲಿಗಳು ದೊರೆಯುತ್ತಿದ್ದವು. ಇವುಗಳ ವಿಲೇವಾರಿಯೇ ಇಲಾಖೆಗೆ ದೊಡ್ಡ ತಲೆನೋವಾಗಿತ್ತು. ಈ ಹಿನ್ನೆಲೆಯಲ್ಲಿ 4.50 ಲಕ್ಷ ವೆಚ್ಚದ ಈ ಕ್ರಶಿಂಗ್‌ ಯಂತ್ರವನ್ನು ಖಾಸಗಿ ಸಂಸ್ಥೆಯೊಂದರ ಸಹಯೋಗದಲ್ಲಿ ಅಳವಡಿಸಲಾಗಿದೆ. ಇದರಲ್ಲಿ 500 ಬಾಟಲಿಗಳನ್ನು ಪುಡಿ ಮಾಡಬಹುದು.

Advertisement

ಹೀಗೆ ತುಂಡಾದ 10 ಕೆಜಿಯಷ್ಟು ಪ್ಲಾಸ್ಟಿಕ್‌ ಅನ್ನು ಇದರಲ್ಲಿ ಸಂಗ್ರಹಿಸಿಡಬಹುದು. 500 ಬಾಟಲಿ ಕ್ರಶಿಂಗ್‌ಗೆ 2.5 ಯೂನಿಟ್‌ ವಿದ್ಯುತ್‌ ಮಾತ್ರ ಖರ್ಚಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಇದೇ ವೇಳೆ ಬೀದಿ ನಾಟಕದ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪ್ರಜ್ಞಾ ವಿದ್ಯಾನಿಕೇತನ ಶಾಲಾ ಮಕ್ಕಳು ರೈಲ್ವೆ ಗೋಡೆಗಳಿಗೆ ಬಣ್ಣ ಬಳಿದು, ಚಿತ್ರಗಳನ್ನು ಬಿಡಿಸುವ ಮೂಲಕ ಗಮನಸೆಳೆದರು. 

ಖಾಲಿ ಬಾಟಲಿಗೆ ಕ್ಯಾಶ್‌ಬ್ಯಾಕ್‌!: ಕಸದತೊಟ್ಟಿಗೆ ಬಿಸಾಡುವ ಖಾಲಿ ಬಾಟಲಿ ಹಾಕಿ 5 ರೂ. ಗಳಿಸಬಹುದು. ಆದರೆ, ಇದಕ್ಕಾಗಿ ನಿಮ್ಮ ಮೊಬೈಲ್‌ನಲ್ಲಿ ಪೇಟಿಎಂ ಇರಬೇಕು! ಇಂತಹದ್ದೊಂದು ವ್ಯವಸ್ಥೆಯನ್ನು ಬೆಂಗಳೂರು ರೈಲ್ವೆ ವಿಭಾಗೀಯ ಕಚೇರಿ ಕಲ್ಪಿಸಿದೆ. ಕ್ರಶಿಂಗ್‌ ಯಂತ್ರದಲ್ಲಿ ಬಾಟಲಿಯನ್ನು ಹಾಕಿದ ತಕ್ಷಣ ಆ ಯಂತ್ರವು ಮೊಬೈಲ್‌ ಸಂಖ್ಯೆ ಕೇಳುತ್ತದೆ.

ನಂಬರ್‌ ನಮೂದಿಸಿದರೆ, ನಿಮ್ಮ ಮೊಬೈಲ್‌ಗೆ ಸಂದೇಶ ಬರುತ್ತದೆ. ಅದರಲ್ಲಿ ಕೋಡ್‌ ನೀಡಲಾಗಿರುತ್ತದೆ. ಆ ಕೋಡ್‌ ಅನ್ನು ಪೇಟಿಎಂನಲ್ಲಿರುವ “ಆ್ಯಡ್‌ ಮನಿ’ಯಲ್ಲಿ ಪೇಸ್ಟ್‌ ಮಾಡಬೇಕು. ಕ್ಷಣಾರ್ಧದಲ್ಲಿ 5 ರೂ. ಖಾತೆಗೆ ಜಮೆ ಆಗುತ್ತದೆ. ಆದರೆ, ಒಂದು ಮೊಬೈಲ್‌ ನಂಬರ್‌ಗೆ ನಿತ್ಯ ಎರಡು ಬಾರಿ ಮಾತ್ರ ಈ ಅವಕಾಶ ಇರುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next