ಚನ್ನಪಟ್ಟಣ: “ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಂಡರ್ ಗ್ರೌಂಡ್ ಅಡ್ಜಸ್ಟ್‌ಮೆಂಟ್ ರಾಜಕೀಯದಲ್ಲಿ ತೊಡಗಿವೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ “ನಾನೊಂದು ತೀರ, ನೀನೊಂದು ತೀರ’ ಎಂದು ಹೇಳುತ್ತಾರೆ. ಆದರೆ ಚನ್ನಪಟ್ಟಣದಲ್ಲಿ ಎಚ್‌ಡಿಕೆ ಮತ್ತು ಡಿಕೆಶಿ “ಹತ್ತಿರ ಹತ್ತಿರ ಬಾ’ ಎನ್ನುತ್ತಾ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ವ್ಯಂಗ್ಯವಾಡಿದರು.
ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿ, 2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಆ ಪೈಕಿ ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಒಂದು ಸ್ಥಾನವನ್ನು ಗೆಲ್ಲುತ್ತಾರೆ. ಕಾಂಗ್ರೆಸ್, ಜೆಡಿಎಸ್‌ನವರ ಆಟ “ಸೈನಿಕ’ನ ಮುಂದೆ ನಡೆಯೋಲ್ಲ. ಯೋಗೇಶ್ವರ್ ಅವರದ್ದು ರೈತರ ಜತೆಗಿನ ಅಡ್ಜೆಸ್ಟ್‌ಮೆಂಟ್ ರಾಜಕಾರಣ,’ ಎಂದರು.
ತಾಲೂಕಿನಲ್ಲಿ ಬರಡಾಗಿದ್ದ 150ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಯೋಗೀಶ್ವರ್ ಆಧುನಿಕ ಭಗೀರಥ ಎಂದು ಖ್ಯಾತಿ ಪಡೆದಿದ್ದಾರೆ. 10 ವರ್ಷದ ಹಿಂದೆ ತಾಲೂಕಿನಲ್ಲಿ ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿರಲಿಲ್ಲ. ಆದರೆ ಇಂದು 15 ಅಡಿಗೇ ನೀರು ಸಿಗುವ ಮಟ್ಟಕ್ಕೆ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಇದಕ್ಕೆ ಯೋಗೇಶ್ವರ್ ಅವರ ನಿಸ್ವಾರ್ಥ ಸೇವೆ ಕಾರಣ ಎಂದ ಕೇಂದ್ರ ಸಚಿವ, ಇಂದಿನ ಸಮಾವೇಶದ ಶಕ್ತಿ ಪ್ರದರ್ಶನ ದಿಂದ ವಿರೋಧ ಪಕ್ಷಗಳ ಬಲವೇ ಕುಗ್ಗಿದೆ ಎಂದರು.
ಸಮಗ್ರ ನೀರಾವರಿ ನನ್ನ ಗುರಿ: “ನನ್ನ ತಾಲೂಕಿನ ಜತೆ ರಾಜ್ಯದ ನೀರಾವರಿ ಸಮಸ್ಯೆ ಪರಿಹರಿಸುವ ಜತೆಗೆ, ಬಯಲುಸೀಮೆ ಪ್ರದೇಶಕ್ಕೆ ಶಾಶ್ವತ ನೀರಾವವರಿ ಯೋಜನೆ ನೀಡುವ ಆಶಯ ನನ್ನದಾಗಿದೆ. ಅದನ್ನು ಸಾಕಾರ ಮಾಡಲು ಬಿಜೆಪಿ ಸರ್ಕಾರದಿಂದ ಮಾತ್ರ ಸಾದ್ಯ. ಬಯಲು ಸೀಮೆ ಪ್ರದೇಶಗಳಿಗೆ ಕೆಆರ್‌ಎಸ್‌ನಿಂದ ನಾಲೆಗಳು, ಕಾಲುವೆಗಳ ಮೂಲಕ ಗುರುತ್ವಾಕರ್ಷಣೆ ಮೂಲಕ ನೀರು ತಂದು ಸುತ್ತಮುತ್ತಲ ಜಿಲ್ಲೆಗಳಿಗೂ ನೀರು ಹರಿಸುವ ಕನಸು ಹೊಂದಿದ್ದೇನೆ,’ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು. ಮಾಜಿ ಡಿಸಿಎಂ ಆರ್.ಅಶೋಕ್ ಇದ್ದರು.