ಅವು ಕಾಲೇಜಿನ ಮೊದಲ ದಿನಗಳು. ಎಲ್ಲರೂ ದಿನಕಳೆದಂತೆ ಆತ್ಮೀಯರಾಗ ತೊಡಗಿದೆವು. ಎಲ್ಲರ ಕೈಯಲ್ಲಿ ಮೊಬೈಲ್ ಇದ್ದುದರಿಂದ ನಂಬರ್‌ಗಳು ವಿನಿಮಯ ಆದವು. ಹಾಯ್, ಗುಡ್ ಮಾರ್ನಿಂಗ್, ಗುಡ್ ಇವನಿಂಗ್, ಗುಡ್ ನೈಟ್ ಮೆಸೇಜ್‌ಗಳು ಓಡಾಡುತ್ತಲೇ ಇದ್ದವು. ಇಂಥ ಸಮಯದಲ್ಲಿ ನೆನಪಾದದ್ದು ಎಲ್ಲರನ್ನೂ ಸೇರಿಸಿ ಒಂದು ಗ್ರೂಪ್ ಮಾಡಿದರೆ ಹೇಗೆ? ಅನ್ನೋ ಫ್ಲಾನ್. ಆಗ ಹುಟ್ಟಿದ್ದು ಜ್ಯೂನಿಯರ್ಸ್ ಗುಂಪು. ಇದಕ್ಕೆ ನನ್ನ ಎಲ್ಲಾ ಕ್ಲಾಸ್ ಮೇಟ್‌ಗಳನ್ನು ಸೇರಿಸಿದ್ದಾಯಿತು.
“ಅರೆ, ಬರೀ ನೀವು ನೀವೇ ಗ್ರೂಪ್ ಮಾಡಿಕೊಂಡರೆ ಸೀನಿಯರ್ಸ್ ಎಲ್ಲಿಗೆ ಹೋಗಬೇಕು?’ ಅಂತ ಪ್ರಶ್ನೆ ಬಂತು. ಆಗ ನಮ್ಮ ವಿಭಾಗದ ಮುಖ್ಯಸ್ಥರು ಐಡಿಯಾ ಕೊಟ್ಟರು. ಸೀನಿಯರ್ಸ್, ಜ್ಯೂನಿಯರ್ಸ್ ಇಬ್ಬರನ್ನೂ ಸೇರಿಸಿ ಒಂದು ಗ್ರೂಪ್ ಮಾಡಿಬಿಡೋಣ ಅಂತ.
ಅದರಂತೆಯೆ ಇನ್ನೊಂದು ಗ್ರೂಪ್ ಕೂಡ ಆಯಿತು. ಇದು ತುಂಬಾ ಆಫಿಶಿಯಲ್. ಇದರಲ್ಲಿ ಯಾವುದೇ ಗುಡ್ ಮಾರ್ನಿಂಗ್, ಗುಡ್ ನೈಟ್‌ಗಳಂಥ ವಿಶ್‌ಗಳನ್ನು ಮಾಡುವಂತೆ ಇರಲಿಲ್ಲ. ಹೀಗಾಗಿ, ಬೆಳಗ್ಗೆ, ಸಂಜೆ ಗುಂಪಿನಲ್ಲಿ ಹೇಳಿಕೊಳ್ಳುವ ಚುಟವಟಿಕೆ ಏನೂ ನಡೆಯುತ್ತಿರಲಿಲ್ಲ. ಆಗೊಂದು ಈಗೊಂದು ಮೆಸೇಜ್‌ಗಳು ಬಂದು ಬೀಳುತ್ತಿದ್ದವು. ಎಲ್ಲರೂ ನೋಡಿಯೂ ನೋಡದಂತೆ ಇರುತ್ತಿದ್ದರು. ಒಟ್ಟಾರೆ ಎಲ್ಲರೂ ಒಂದು ಕಡೆ ಸಂಪರ್ಕದಲ್ಲಿ ಇದ್ದೀವಿ ಅನ್ನೋದು ಬಿಟ್ಟರೆ, ಬೇರೇನು ಇರಲಿಲ್ಲ. ಒಂದು ರವಿವಾರ ಹೀಗಾಯ್ತು. ನಾನು ರವಿವಾರ ಊರಿಗೆ ಹೋದೆ. ಮರುದಿನ ಎಂದರೇ ಸೋಮವಾರ ಕಾಲೇಜು ಇರತ್ತೋ ಇಲ್ಲವೋ ಎಂದು ಕೇಳಲು ಆಫೀಷಿಯಲ್ ಗ್ರೂಫ್ನಲ್ಲಿ ನಾಳೆ clg ಇದೆಯಾ ? ಎಂದು ಹಾಕಿ ಆಫ್ ಲೈನ್ ಆದೆ. ಸ್ವಲ್ಪ ಸಮಯದ ನಂತರ ನಮ್ಮ ವಿಭಾಗದ ಶಿಕ್ಷಕರೊಬ್ಬರು ವ್ಯಾಟ್ಸಾಫ್ನಲ್ಲಿ ಕಾಲ್ ಮಾಡಿದ್ದ ನೋಟಿಫಿಕೇಶನ್ ನೋಡಿದೆ. ಮರುದಿನ ಆ ಶಿಕ್ಷಕರನ್ನೇ ನೇರವಾಗಿ ಭೇಟಿಯಾಗಿ ಯಾಕೆ ಸರ್ ನಿನ್ನೆ ಕಾಲ್ ಮಾಡಿದ್ರಿ ಎಂದೆ..? ಅದಕ್ಕುತ್ತರಿಸಿದ ಅವರು, ನೀನೆ ತಾನೇ ನೆನ್ನೆ ಗ್ರೂಪ್‌ಲ್ಲಿ cl ? ಅಂಥ ಹಾಕಿದ್ದು. ಹಾಗೆಂದರೇನು ಗೊತ್ತಾ? casual leave ಅಂತ. ಕೆಲಸಕ್ಕೆ ಸೇರಿಲ್ಲ. ನಿನಗೆ ಹೇಗೆ ಸಿಎಲ್ ಸಿಗುತ್ತೆ? ಶಾರ್ಟ್‌ಕಟ್ ಮೇಸೆಜ್ ಮಾಡೋದು ಮೊದಲಿ ಬಿಡಿ ಎಂದು ಸ್ವಲ್ಪ ಏರು ಧ್ವನಿಯಲ್ಲಿ ಮಂಗಳಾರತಿ ಮಾಡಿದರು. ಏನಾಗಿತ್ತು ಅಂದರೆ, ನಾನು ಸಿಎಲ್‌ಜಿ ಎಂದು ಟೈಪ್ ಮಾಡಿದ್ದರೂ, ಮೆಸೇಜ್‌ನಲ್ಲಿ ಸಿಎಲ್ ಮಾತ್ರ ಎಂಟ್ರಿಯಾಗಿತ್ತು! ಅಲ್ಲಿಂದ ನನಗೆ ಪ್ರಾರಂಭವಾದ ಮಂಗಳಾರತಿ ಇನ್ನು ನಿಂತೇ ಇಲ್ಲ… ಆದರೆ, ಗ್ರೂಪಲ್ಲಿ ಇನ್ನೂ ಇದ್ದೀನಿ.
-ಬಸನಗೌಡ ಪಾಟೀಲ