ಬೆಂಗಳೂರು: ರಾಷ್ಟ್ರೀಯ ಯೋಜನೆ ಎಂದು ಘೋಷಿಸಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಬೇಕು ಎಂದು ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಕೇಂದ್ರ ಜಲ ಶಕ್ತಿ ಕಾರ್ಯದರ್ಶಿ ದೇಬಶ್ರೀ ಮುಖರ್ಜಿ ಅವರನ್ನು ಒತ್ತಾಯಿಸಿದರು.
ಈ ಸಂಬಂಧ ದೆಹಲಿಯಲ್ಲಿ ದೇಬಶ್ರೀ ಮುಖರ್ಜಿ ಅವರನ್ನು ಭೇಟಿಯಾದ ಟಿ.ಬಿ. ಜಯಚಂದ್ರ, ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, ಇದಕ್ಕಾಗಿ 5,300 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿತ್ತು. ಈಗ ಇದಕ್ಕೆ ಸಂಬಂಧಿಸಿದ ಕಡತ ಪ್ರಧಾನಿ ಕಚೇರಿಯಲ್ಲಿದೆ. ಮುಂದೆ ನಡೆಯಲಿರುವ ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಬೇಕು ಎಂದು ಆಗ್ರಹಿಸಿದರು.
ಕಳೆದ ಬಾರಿ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಟಿ.ಬಿ. ಜಯಚಂದ್ರ ಅವರು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ನೀಡಿದ್ದರು. ಈಗ ಜಲಶಕ್ತಿ ಕಾರ್ಯದರ್ಶಿಯನ್ನು ಭೇಟಿಯಾಗಿ ಮತ್ತೂಮ್ಮೆ ಮನವಿ ಮಾಡಿದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲ ಭಾಗಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದರೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬಹುದು. ಈ ಯೋಜನೆಯಿಂದ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿದರು.
ಇದಲ್ಲದೆ, ಮೇಕೆದಾಟು ಯೋಜನೆಗೆ ಇರುವ ಅಡೆತಡೆಗಳನ್ನು ನಿವಾರಿಸಿ ಅನುಮೋದನೆ ನೀಡುವಂತೆ ಸಹ ಕೋರಿ¨ªಾರೆ. ದೀರ್ಘಕಾಲದಿಂದ ನೆನಗುದಿಗೆ ಬಿದ್ದಿರುವ ಮೇಕೆದಾಟು ಯೋಜನೆಗೆ ಕೇಂದ್ರ ಪರಿಸರ ಇಲಾಖೆ ,ಜಲ ಶಕ್ತಿ ಇಲಾಖೆ ಸೇರಿದಂತೆ ವಿವಿಧ ಪ್ರಾಧಿಕಾರಗಳಿಂದ ಅನುಮತಿ ಕೊಡಿಸಿ, ಮೇಕೆದಾಟು ಯೋಜನೆ ಕಾಮಗಾರಿ ಆರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಿದರು.
ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣ ಮಾಡುವುದರಿಂದ ಬೆಂಗಳೂರು ಹಾಗೂ ಸುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಅನುಕೂಲವಾಗುತ್ತದೆ . ಅಷ್ಟೇ ಅಲ್ಲ, ಬರಗಾಲದ ಸಮಯದಲ್ಲಿ ತಮಿಳುನಾಡಿಗೆ ಸಹ ನೀರು ಬಿಡಲು ಅನುಕೂಲವಾಗಲಿದೆ ಎಂದು ಹೇಳಿದರು.