ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಫೆಬ್ರವರಿಯೊಳಗೆ ಆಡಳಿತಾತ್ಮಕ ಅನುಮೋದನೆ ಪಡೆದು, ಟೆಂಡರ್ ಪ್ರಕ್ರಿಯೆ ಮುಗಿಸಿ, ಯಾವುದೇ ಕಾರಣಕ್ಕೂ ಅನುದಾನ ವಾಪಸ್ಸಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, 2014ರಲ್ಲಿ ಏಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆ ನಡೆದಿದ್ದರಿಂದ 2019ರಲ್ಲೂ ಏಪ್ರಿಲ್‌ನಲ್ಲೇ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣೆ ಘೋಷಣೆಯಾದರೆ ಮಾರ್ಚ್‌ನಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವುದರಿಂದ ಆಡಳಿತಾತ್ಮಕ ಅನುಮೋದನೆ, ತಾಂತ್ರಿಕ ಮಂಜೂರಾತಿ ಪಡೆದು ಫೆಬ್ರವರಿಯೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಬೇಕು ಎಂದು ತಾಕೀತು ಮಾಡಿದರು.
ಅನುದಾನ ಬಳಸಿ: ಸಮಾಜ ಕಲ್ಯಾಣ ಇಲಾಖೆಯವರು ನಿರ್ಮಿತಿ ಕೇಂದ್ರ, ಭೂಸೇನಾ ನಿಗಮಕ್ಕೆ ಕಾಮಗಾರಿ ವಹಿಸುವಂತಿಲ್ಲ. ಉಳಿದ ಇಲಾಖೆಗಳು 2 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಈ ಸಂಸ್ಥೆಗಳಿಗೆ ನೀಡಲು ಅವಕಾಶವಿದೆ. ಎಲ್ಲಾ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಹಿಸಿ ಅನುದಾನ ವಾಪಸ್ಸಾಗದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಡೇಟಾ ಎಂಟ್ರಿ: ಚುನಾವಣೆ ಕರ್ತವ್ಯಕ್ಕೆ ಅಗತ್ಯವಾದ ಅಧಿಕಾರಿ, ಸಿಬ್ಬಂದಿಯನ್ನು ಬಳಸಿಕೊಳ್ಳಬೇಕಿರುವ ಕಾರಣ ಜನವರಿ ಅಂತ್ಯದೊಳಗೆ ಎಚ್‌ಆರ್‌ಎಂಸ್‌ನ ಡೇಟಾ ಎಂಟ್ರಿ ಮಾಡಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡೇಟಾ ಎಂಟ್ರಿಯಲ್ಲಿ ವಿಳಂಬವಾಗಿದ್ದರಿಂದ ಸಮಸ್ಯೆಯಾಗಿತ್ತು. ಹಾಗಾಗಿ, ಈ ಬಾರಿ ಅದಕ್ಕೆ ಅವಕಾಶ ಕೊಡದೆ ಡೇಟಾ ಎಂಟ್ರಿ ಮಾಡಬೇಕು ಎಂದು ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲೇ ಅತಿ ಹೆಚ್ಚಿನ ಸಿಬ್ಬಂದಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಲಿರುವುದರಿಂದ ಗರ್ಭಿಣಿಯರು, ನಿವೃತ್ತಿ ಅಂಚಿನಲ್ಲಿರುವವರು, ವರ್ಗಾವಣೆಗೊಂಡ ಶಿಕ್ಷಕರನ್ನು ಕೈಬಿಟ್ಟು ಆದಷ್ಟು ಬೇಗ ಡೇಟಾ ಎಂಟ್ರಿ ಮಾಡುವಂತೆ ಡಿಡಿಪಿಐಗೆ ಸೂಚಿಸಿದರು.
ಎಚ್1ಎನ್1 ನಿಗಾವಹಿಸಿ: ಎಚ್1ಎನ್1 ಸೋಂಕು ಹರಡುತ್ತಿರುವುದನ್ನು ತಡೆಯಲು ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಅರಮನೆ, ಮೃಗಾಲಯ ಸೇರಿದಂತೆ ಮೈಸೂರಿನ ಪ್ರವಾಸಿ ತಾಣಗಳಿಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವುದರಿಂದ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಡಿಎಚ್‌ಒ ಡಾ.ಬಿ.ಬಸವರಾಜು ಅವರಿಗೆ ಸೂಚಿಸಿದರು.