ಹುಮನಾಬಾದ: ಯಶಸ್ಸು ಸಮಯ ಪ್ರಜ್ಞೆ ಉಳ್ಳವರು ಸ್ವತ್ತು. ಈವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಉನ್ನತ ಹುದ್ದೆ, ಸ್ಥಾನಮಾನ ಗಿಟ್ಟಿಸಿಕೊಂಡವರಲ್ಲಿ ಬಡವರೇ ಹೆಚ್ಚು. ಶ್ರೀಮಂತರು ಸಿಗುವುದು ವಿರಳ ಎಂದು ಎಡಿಜಿಪಿ ರಾಘವೇಂದ್ರ ಔರಾದಕರ್ ಹೇಳಿದರು.
ಬೋರಾಳ ಗ್ರಾಮದ ಆರ್‌ಆರ್‌ಆರ್ ಶಿಕ್ಷಣ ಸಂಸ್ಥೆಯ ಶೆಮಫರ್ಡ್ ಪಬ್ಲಿಕ್‌ಶಾಲೆ, ಗುರುಪಾದೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ಎಸ್.ಆರ್. ಪದವಿಪೂರ್ವ ಕಾಲೇಜಿನ 3ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಭಿಮಾನ, ಸಮಯ ಪ್ರಜ್ಞೆ, ನಿರಂತರ ಪರಿಶ್ರಮ ಉಳ್ಳಂತಹ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಂದ ಈ ಭಾಗದ ಶಿಕ್ಷಣ ಸಂಸ್ಥೆಗಳು ಕಡಿಮೆ ಶುಲ್ಕ ಪಡೆದು ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಉನ್ನತ ಸ್ಥಾನಮಾನ ಪಡೆದಯಲು ಅಗತ್ಯ ನೆರವಾಗಬೇಕು ಎಂದರು.
ಲಿಫ್ಟ್‌ನಲ್ಲಿ ಹೋದರೆ ಆರೋಗ್ಯ ಕೆಡುತ್ತದೆ. ಮೆಟ್ಟಿಲು ಹತ್ತಿದರೆ ಆರೋಗ್ಯ ಸುಧಾರಣೆ ಆಗುತ್ತದೆ ಎಂದು ಆರೋಗ್ಯದ ಗುಟ್ಟು
ಬಿಚ್ಚಿಟ್ಟರು. ಸಂಸ್ಥೆಯ ಕಾರ್ಯದರ್ಶಿ, ಆರ್‌ಬಿಐ ನಿರ್ದೇಶಕ ಕಿರಣ ಪಾಂಡುರಂಗ ಮಾತನಾಡಿ, ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಕೇರಳದ ನುರಿತ ಹಾಗೂ ಕ್ರಿಯಾಶೀಲ ಶಿಕ್ಷಕರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಇನ್ನೂ 18 ಶಿಕ್ಷಕಿಯರನ್ನು ಸಾಧ್ಯವಾದಷ್ಟು ಶೀಘ್ರ ನಿಯೋಜಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಸಂಸ್ಥೆ ವಾಣಿಜ್ಯ ಉದ್ದೇಶದಿಂದ ತೆರೆಯದೇ ಸೇವಾ ಮನೋಭಾವನೆಯಿಂದ ಆರಂಭಿಸಿದ್ದು, ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಂದ ಅತ್ಯಲ್ಪ ಶುಲ್ಕ ಪಡೆದು ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ ಎಂದರು. ಮಕ್ಕಳನ್ನು ಕೇವಲ ವೈದ್ಯ, ಎಂಜಿನಿಯರ್ ಆಗಿಸದೇ ಐಪಿಎಸ್, ಐಎಎಸ್ ಆಗಿಸಲು ಯತ್ನಿಸಬೇಕು ಎಂದರು.
ಕಾರ್ಡಿಯಾಲಾಜಿಸ್ಟ್ ಡಾ| ವಿಜಯಕುಮಾರ ಕಲ್ಮಣಕರ್ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ನಮ್ರತ ಕಿರಣ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಕಿರಣ, ತಿಪ್ಪಣ ಕಿರಣ, ಕೆಎಂಎಫ್ ನಿರ್ದೇಶಕ ಮಾರುತಿ ಖಾಶೆಂಪೂರ್, ಜೆಡಿಎಸ್ ಮುಖಂಡ ಸಂತೋಷ ರಾಸೂರ್, ಗ್ರಾಪಂ ಮಾಜಿ ಅಧ್ಯಕ್ಷ ಯೂಸುಫಮಿಯ್ನಾ ಜಮಾದಾರ್, ಸೈಯದ ತಾಜೋದ್ದಿನ್ ಹವಾಲ್ದಾರ್, ನಿವೃತ್ತ ಪೊಲೀಸ್ ಅಧಿಕಾರಿ ಹಣಮಂತಪ್ಪ, ಶಂಕರ್ ಪ್ರಿಯಾ, ಡಾ|ವಿ.ವಿ.ಪಾಟೀಲ, ಎಸ್.ಎಂ.ಜಾಗೀರ್ದಾರ ಹಾಗೂ ಅನೇಕರು ಉಪಸ್ಥಿತರಿದ್ದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಳಿಸಿದವು.