ಪುಣೆ: ಕರಾವಳಿ ಯಕ್ಷಗಾನ ರಂಗದ ಮೇರು ಕಲಾವಿದ ಕಟೀಲು ಮೇಳದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ ಇತ್ತೀಚಿಗೆ ಕಲಾಸೇವೆಗೈಯ್ಯುತ್ತಿರುವಾಗಲೇ ಕುಸಿದು ಬಿದ್ದು ನಿಧನ ಹೊಂದಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಪುಣೆ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ವತಿಯಿಂದ ಗರ್ವಾರೆ ಕಾಲೇಜು ಕ್ಯಾಂಟೀನ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.
ಸಂಘದ ಅಧ್ಯಕ್ಷ ಪಾಂಗಾಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಮೊದಲಿಗೆ ದಿವಂಗತ ಶೆಟ್ಟಿಯವರ ಭಾವಚಿತ್ರಕ್ಕೆ ವಿಶ್ವನಾಥ ಶೆಟ್ಟಿ ಅವರು ಹಾರಾರ್ಪಣೆ ಮಾಡಿ ಅನಂತರ ಎರಡು ನಿಮಿಷಗಳ ಮೌನ ಪ್ರಾರ್ಥನೆಯೊಂದಿಗೆ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅನಂತರ ಪಾಂಗಾಳ ವಿಶ್ವನಾಥ ಶೆಟ್ಟಿ ಅವರು ಮಾತನಾಡಿ, ದಿ| ಗಂಗಯ್ಯ ಶೆಟ್ಟಿಯವರು ಯಕ್ಷಗಾನ ರಂಗವನ್ನು ಹೊಸ ಆಯಾಮಗಳೊಂದಿಗೆ ತನ್ನ ಅಪಾರವಾದ ಕಲಾಸೇವೆಯನ್ನು ಸಲ್ಲಿಸುವ ಮೂಲಕ ಸಮೃದ್ಧಿಗೊಳಿಸಿದವರಾಗಿದ್ದು, ಅವರ ಮಾತುಗಾರಿಕೆ, ಕುಣಿತ, ಮಹಿಷಾಸುರನ ಪಾತ್ರದ ನಿರ್ವಹಣೆ ಅದ್ಭುತವಾಗಿದ್ದು, ಬಹಳಷ್ಟು ವರ್ಷಗಳ ಹಿಂದೆ ಕಂಡಂತಹ ಅವರ ನೆನಪು ಇನ್ನೂ ಹಸಿರಾಗಿದೆ. ಒಬ್ಬ ಮಹಾನ್ ಕಲಾವಿದನನ್ನು ಅಗಲಿ ಯಕ್ಷಗಾನ ರಂಗಕ್ಕೆ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ ಎಂದರು.
ಹಿರಿಯ ಕಲಾವಿದ ನಾಟ್ಯಗುರು ಮದಂಗಲ್ಲು ಆನಂದ ಭಟ್ ಅವರು ಮಾತನಾಡಿ, ಜೀವನದುದ್ದಕ್ಕೂ ಯಕ್ಷ ಗಾನವನ್ನೇ ಉಸಿರಾಗಿಸಿಕೊಂಡು ಕಲಾ ಶ್ರೀಮಂತಿಕೆ ಮೆರೆದು ವಿಶೇಷವಾಗಿ ದೇವಿ ಮಹಾತೆ¾ಯ ಮಹಿಷಾಸುರನ ಪಾತ್ರವನ್ನು ತನ್ನದೇ ವಿಶೇಷ ಆಕರ್ಷಣೆಯೊಂದಿಗೆ ಪ್ರಸ್ತುತಪಡಿಸಿ ಕಲಾರಸಿಕರ ಹೃದಯದಲ್ಲಿ ನೆಲೆಯಾದ ಕಲಾವಿದ ಗಂಗಯ್ಯ ಶೆಟ್ಟಿಯವರೆಂದರೆ ತಪ್ಪಾಗಲಾರದು. ಅವರ ವಿಶಿಷ್ಟ ಬಣ್ಣಗಾರಿಕೆ ಹಾವಭಾವ, ಜೀವನ ಶೈಲಿ, ಶಿಸ್ತುಬದ್ಧತೆ ಎಲ್ಲರಿಗೂ ಮಾದರಿಯಾಗಿದ್ದು ಅವರ ಅಗಲಿಕೆ ಕಲಾರಂಗಕ್ಕೆ ನಷ್ಟವೆನ್ನಬಹುದಾಗಿದೆ ಎಂದು ಹೇಳಿದರು.
ಮಂಡಳಿಯ ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ ಮಟ್ಟಾರ್ ಅವರು ಮಾತನಾಡಿ, ಯಕ್ಷಗಾನ ರಂಗಕ್ಕೆ ವಿಶೇಷ ಕೊಡುಗೆ ನೀಡಿದ ಮಹಾನ್ ಕಲಾವಿದರ ಅಗಲಿಕೆಯಿಂದ ಪ್ರತಿಯೊಬ್ಬ ಕಲಾಭಿಮಾನಿಗೂ ಅಪಾರ ದುಃಖವಾಗುತ್ತಿದೆ. ಅಂತಹ ಶ್ರೇಷ್ಠ ಕಲಾವಿದರಿಂದಲೇ ಇಂದು ಕೂಡಾ ಯಕ್ಷಗಾನ ಕಲೆ ಬೆಳೆಯುತ್ತಿದೆ. ಅವರ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸುತ್ತಿರುವುದು ಸ್ತುತ್ಯರ್ಹವಾಗಿದೆ ಎಂದರು.
ಅನಂತರ ಮಂಡಳಿಯ ಕಲಾವಿದರಿಂದ ಗೇರುಕಟ್ಟೆಯವರ ನೆನಪಿನಲ್ಲಿ ಇಂದ್ರಜಿತು ಕಾಳಗ ಯಕ್ಷಗಾನ ತಾಳಮದ್ದಲೆಯನ್ನು ಆಯೋಜಿಸಲಾಯಿತು. ಮದಂಗಲ್ಲು ಆನಂದ ಭಟ್, ಪಾಂಗಾಳ ವಿಶ್ವನಾಥ ಶೆಟ್ಟಿ, ವಿಕೇಶ್ ರೈ ಶೇಣಿ, ವಾಸು ಕುಲಾಲ್ ವಿಟ್ಲ, ಸುಕೇಶ್ ಶೆಟ್ಟಿ ಎಣ್ಣೆಹೊಳೆ ಅವರು ಪಾಲ್ಗೊಂಡರು. ಪ್ರಕಾಶ್ ಹೆಗ್ಡೆ ಸ್ವಾಗತಿಸಿ ಸುಕೇಶ್ ಶೆಟ್ಟಿ ಎಣ್ಣೆಹೊಳೆ ವಂದಿಸಿದರು. ನ್ಯಾಯವಾದಿ ಪದ್ಮನಾಭ ಬೆಲ್ಚಡ, ನಾಗೇಶ್ ಕುಲಾಲ… ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ -ವರದಿ : ಕಿರಣ್ ಬಿ. ರೈ ಕರ್ನೂರು