Advertisement
ಮಾಜಿ ಪ್ರಧಾನಿ ಇಂದಿರಾಗಾಂಧಿಯವರು 1975ರಲ್ಲಿ ಘೋಷಿಸಿದ್ದ ತುರ್ತು ಪರಿಸ್ಥಿತಿ ವಿರುದ್ಧ ಜಾರ್ಜ್ ಫರ್ನಾಂಡಿಸ್ ಭೂಗತರಾಗಿ ಪ್ರಬಲ ಹೋರಾಟ ನಡೆಸಿದ್ದರು. ಅದರ ಭಾಗವಾಗಿ ಕೆ.ಜಿ. ಮಹೇಶ್ವರಪ್ಪ ಮನೆಯಲ್ಲಿ ಕೆಲ ದಿನಗಳ ಕಾಲ ತಂಗಿದ್ದರು. ಅವರೊಂದಿಗೆ ಕೇಂದ್ರದ ಮಾಜಿ ಸಚಿವ ದಿ| ಮಧು ದಂಡವತೆ ಮತ್ತು ಕಾರ್ಮಿಕ ಮುಖಂಡ ಮಧು ಲಿಮೆಯೆ ಇತರರು ಸಹ ಇದ್ದರು.
Related Articles
Advertisement
ಅವಘಡದಿಂದ ಪಾರು: ದಾವಣಗೆರೆಯಲ್ಲಿನ ಪ್ರಚಾರ ಸಭೆಯಲ್ಲಿ ಭಾಗವಹಿಸುವ ಹಿಂದಿನ ದಿನ ಭರಮಸಾಗರದಲ್ಲಿ ಪ್ರಚಾರ ಸಭೆಗೆ ಹೆಲಿಕಾಪ್ಟರ್‌ನಲ್ಲಿ ತೆರಳುವಾಗ ಕೂದಲೆಳೆಯ ಅಂತರದಲ್ಲಿ ಅವಘಡದಿಂದ ಪಾರಾಗಿದ್ದರು ಎಂಬುದು ಗಮನಾರ್ಹ.
ಉತ್ತಮ ಒಡನಾಟ: ರಾಜ್ಯಸಭಾ ಮಾಜಿ ಸದಸ್ಯ ಕೆ.ಜಿ. ಮಹೇಶ್ವರಪ್ಪ, ಮಾಜಿ ಶಾಸಕ ಕೆ. ಮಲ್ಲಪ್ಪ, ಜನತಾದಳದ ಮುಖಂಡ ಎಚ್.ಎಂ. ಸೋಮನಾಥಯ್ಯ, ಜೆ. ಸೋಮನಾಥ್ ಇತರರೊಂದಿಗೆ ಜಾರ್ಜ್ ಒಳ್ಳೆಯ ಒಡನಾಟ ಹೊಂದಿದ್ದರು.
ಜಾರ್ಜ್ ಫರ್ನಾಂಡಿಸ್, ಮಧು ದಂಡವತೆ ಕುರ್ಕಿಯ ನಮ್ಮ ಮನೆಗೆ ಒಟ್ಟು ಎರಡು ಬಾರಿ ಬಂದಿದ್ದರು. ಬಂದ ಸಂದರ್ಭದಲ್ಲಿ ಹೊಲ-ಗದ್ದೆ-ತೋಟ ಅಂತಾ ಹೋಗಿ ಬರುತ್ತಿದ್ದರು. ನಮ್ಮ ಕುಟುಂಬದವರೊಂದಿಗೆ ಬಹಳ ಚೆನ್ನಾಗಿ ಮಾತನಾಡುತ್ತಿದ್ದರು. ಅವರು ಬಹಳ ಸರಳ ರಾಜಕಾರಣಿ ಎಂದು ಕೆ.ಜಿ. ಮಹೇಶ್ವರಪ್ಪ ಅವರ ಅಣ್ಣನ ಮಗ ವೇದಮೂರ್ತಿ ಸ್ಮರಿಸಿದರು. ದೇಶದ ಬಹು ದೊಡ್ಡ ಕಾರ್ಮಿಕ ನಾಯಕ, ಜನತಾ ಪರಿವಾರದ ಮುಖಂಡರು, ರಕ್ಷಣಾ ಸಚಿವರಾಗಿದ್ದ ಸಂದರ್ಭದಲ್ಲೂ ತಮ್ಮ ಆತ್ಮೀಯರನ್ನು ಹೆಸರಿಡಿದು ಕರೆದು ಮಾತನಾಡಿಸುತ್ತಿದ್ದರು ಎಂದು ಎಚ್.ಎಂ. ಸೋಮನಾಥಯ್ಯ ಅವರ ಪುತ್ರ ಎಚ್.ಎಂ. ರುದ್ರಮುನಿಸ್ವಾಮಿ ಸ್ಮರಿಸುತ್ತಾರೆ.
ಅವರು (ಜಾರ್ಜ್ ಫರ್ನಾಂಡಿಸ್) ಭರಮಸಾಗರಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ಆಗ ನಾನು ನಮ್ಮ ತಂದೆಯವರೊಂದಿಗೆ ಭರಮಸಾಗರಕ್ಕೆ ಹೋಗಿದ್ದೆ. ಅಷ್ಟು ಜನರ ಮಧ್ಯದಲ್ಲೂ ನಮ್ಮ ತಂದೆಯವರನ್ನು ಗುರುತಿಸಿ, ಹತ್ತಿರ ಕರೆದು ಮಾತನಾಡಿಸಿದ್ದರು. ಅಂತಹ ಸರಳ, ಒಳ್ಳೆಯ ವ್ಯಕ್ತಿ ಅವರು ಎಂದು ರುದ್ರಮುನಿಸ್ವಾಮಿ ಹೇಳುತ್ತಾರೆ. ಜಾರ್ಜ್ ಫರ್ನಾಂಡಿಸ್ ಅವರಿಗೆ ಶೇಂಗಾ ಚಟ್ನಿಪುಡಿ… ಎಂದರೆ ಪಂಚಪ್ರಾಣ. ಅವರು ದಾವಣಗೆರೆ ಬಂದಾಗ ನಮ್ಮ ಮನೆಯಿಂದ ಊಟ ತೆಗೆದುಕೊಂಡು ಹೋಗುವಾಗ ಶೇಂಗಾ ಚಟ್ನಿಪುಡಿ ಇರಲೇಬೇಕಿತ್ತು. ಶೇಂಗಾ ಚಟ್ನಿಪಡಿಯನ್ನು ಬಹಳ ಇಷ್ಟಪಡುತ್ತಿದ್ದರು ಎಂದು ಕಂಚೀಕೆರೆ ಕೊಟ್ರೇಶ್ ಸ್ಮರಿಸಿದರು.
ನೊಂದು ಮಾತನಾಡಿದ್ದರು….2007ರ ಮೇ. 21 ರಂದು ದಾವಣಗೆರೆಗೆ ಆಗಮಿಸಿದ್ದ ಜಾರ್ಜ್ ಫರ್ನಾಂಡಿಸ್ ಕೆ.ಜಿ. ಮಹೇಶ್ವರಪ್ಪ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಂದರ್ಭದಲ್ಲಿ, ಅವರ ವಿರುದ್ಧ ಕೇಳಿ ಬಂದಿದ್ದ ಶವಪೆಟ್ಟಿಗೆ ಹಗರಣದ ಬಗ್ಗೆ ಬಹಳ ನೊಂದುಕೊಂಡೇ ಮಾತನಾಡಿದ್ದರು. ಭಾರತ-ಪಾಕ್ ಸಂಬಂಧದ ಬಗ್ಗೆ ಹೇಳಿದ್ದರು. ಆಗಲೇ ಅವರಿಗೆ ಅಲ್ಜಮೇರಿಯ… ಇದ್ದ ಕಾರಣ ಪದೆ ಪದೇ ಹೇಳಿದ್ದ ವಿಚಾರ ಪ್ರಸ್ತಾಪಿಸುತ್ತಿದ್ದರು. ಫ್ಲಾಷ್ ಬರೊಲ್ವ…
2004ರ ಲೋಕಸಭಾ ಚುನಾವಣಾ ಪ್ರಚಾರಕ್ಕೆಂದು ದಾವಣಗೆರೆಗೆ ಆಗಮಿಸಿದ್ದ ಜಾರ್ಜ್ ಫರ್ನಾಂಡಿಸ್(ಆಗ ರಕ್ಷಣಾ ಸಚಿವರು) ಅಯೋಧ್ಯೆ ಹೋಟೆಲ್‌ನಲ್ಲಿ ತಂಗಿದ್ದರು. ಸುದ್ದಿಗೋಷ್ಠಿಗೂ ಮುನ್ನ ಪತ್ರಕರ್ತರೊಬ್ಬರು ಡಿಜಿಟಲ್ ಕ್ಯಾಮೆರಾದಲ್ಲಿ ಫೋಟೋ ಸೆರೆ ಹಿಡಿಯುತ್ತಿದ್ದರು. ಫ್ಲಾಷ್ ಬರದೇ ಇರುವುದನ್ನು ಗಮನಿಸಿದ ಅವರು, ಯಾಕೆ ಫ್ಲಾಷ್ ಬರೊಲ್ವ… ಎಂದು ಆ ಪತ್ರಕರ್ತರನ್ನು ಕೇಳಿದ್ದರು ಮಾತ್ರವಲ್ಲ ಡಿಜಿಟಲ್ ಕ್ಯಾಮೆರಾದ ಬಗ್ಗೆ ಕೇಳಿ ತಿಳಿದುಕೊಂಡಿದ್ದರು. ಹಿಂದಿನ ದಿನ ಭರಮಸಾಗರದಲ್ಲಿ ನಡೆದ ಘಟನೆಯಲ್ಲಿ ಕೂದಲೆಳೆಯ ಅಂತರದಲ್ಲಿ ಸಂಭವಿಸಬಹುದಾಗಿದ್ದ ಅವಘಡದಲ್ಲಿ ನೀವು ಪ್ರಾಣಾಪಾಯದಿಂದ ಪಾರಾಗಿದ್ದೀರಿ… ಎಂದು ಪತ್ರಕರ್ತರು ಹೇಳಿದಾಗ, ಹೌದಾ… ನನಗೆ ಗೊತ್ತೇ ಇಲ್ಲ… ಎಂದು ಅಚ್ಚರಿಯಿಂದ ಉದ್ಗರಿಸಿದ್ದರು. ಕ್ಯೂ ನಿಲ್ಲಿಸಿದ್ದರು…
ದೆಹಲಿಯ ಆಸ್ಪತ್ರೆಯಲ್ಲಿ ತಮ್ಮ ಪರಮಾಪ್ತ ಕೆ.ಜಿ. ಮಹೇಶ್ವರಪ್ಪನವರಿಗೆ ಹೃದಯಕ್ಕೆ ಸಂಬಂಧಿತ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅಲ್ಲಿನ ವೈದ್ಯರು ರಕ್ತಕ್ಕಾಗಿ ಕೊಂಚ ಸತಾಯಿಸಿದ್ದರು. ಆಸ್ಪತ್ರೆಗೆ ಬಂದಿದ್ದ ಜಾರ್ಜ್ ಫರ್ನಾಂಡಿಸ್, ನಾಳೆ ಬೆಳಗ್ಗೆಯೇ ರಕ್ತದ ವ್ಯವಸ್ಥೆ ಮಾಡಿಸುತ್ತೇನೆ. ಮೊದಲು ಅವರಿಗೆ (ಕೆ.ಜಿ. ಮಹೇಶ್ವರಪ್ಪ) ಶಸ್ತ್ರಚಿಕಿತ್ಸೆ ಮಾಡುವಂತೆ ಹೇಳಿದ್ದರು. ಶಸ್ತ್ರಚಿಕಿತ್ಸೆ ನಡೆದ ಮರು ದಿನ ಬೆಳಗ್ಗೆಯೇ ರಕ್ತ ನೀಡಲು 50ಕ್ಕೂ ಹೆಚ್ಚು ಜನರನ್ನೂ ಕ್ಯೂನಲ್ಲಿ ನಿಲ್ಲಿಸಿದ್ದರು ಎಂದು ಕೆ.ಜಿ. ಮಹೇಶ್ವರಪ್ಪ ಅವರ ಪುತ್ರಿ ಉಷಾ ಸ್ಮರಿಸಿದರು.